ಹೊಸೂರು ರಸ್ತೆಯ ಹೊಂಗಸಂದ್ರದ ನಿವಾಸಿ ಗೌರಿಶಂಕರ್‌ ಹಾಗೂ ಪವಿತ್ರಾ ದಂಪತಿ ಪುತ್ರ ಜ್ಞಾನೇಶ್‌ ರಕ್ಷಣೆಗೊಳಗಾದ ಬಾಲಕನಾಗಿದ್ದು, ಆತನನ್ನು ರಕ್ಷಿಸಿದ ಚಿಕ್ಕಪೇಟೆ ಸಂಚಾರ ಠಾಣೆ ಶ್ರೀಕಾಂತ್‌ ಅವರನ್ನು ಪಶ್ಚಿಮ ವಿಭಾಗ (ಸಂಚಾರ) ಡಿಸಿಪಿ ಕುಲದೀಪ್‌ ಕುಮಾರ್‌.ಆರ್‌.ಜೈನ್‌ ಹಾಗೂ ಸಾರ್ವಜನಿಕರು ಅಭಿನಂದಿಸಿದ್ದಾರೆ.

ಬೆಂಗಳೂರು(ಫೆ.08):  ತನ್ನ ಮನೆ ದಾರಿ ತಪ್ಪಿ ಮೆಜೆಸ್ಟಿಕ್‌ ಸಮೀಪ ದಿಕ್ಕು ಕಾಣದೆ ಸಂಕಷ್ಟಕ್ಕೆ ಸಿಲುಕಿದ್ದ 13 ವರ್ಷದ ಬಾಲಕನನ್ನು ರಕ್ಷಿಸಿ ಸುರಕ್ಷಿತವಾಗಿ ಆತನ ಪೋಷಕರ ಮಡಿಲಿಗೆ ಚಿಕ್ಕಪೇಟೆ ಸಂಚಾರ ಠಾಣೆ ಪೊಲೀಸ್‌ ಕಾನ್‌ಸ್ಟೇಬಲ್‌ವೊಬ್ಬರು ಸೇರಿಸಿ ಮಾನವೀಯತೆ ಮೆರೆದಿದ್ದಾರೆ.

ಹೊಸೂರು ರಸ್ತೆಯ ಹೊಂಗಸಂದ್ರದ ನಿವಾಸಿ ಗೌರಿಶಂಕರ್‌ ಹಾಗೂ ಪವಿತ್ರಾ ದಂಪತಿ ಪುತ್ರ ಜ್ಞಾನೇಶ್‌ ರಕ್ಷಣೆಗೊಳಗಾದ ಬಾಲಕನಾಗಿದ್ದು, ಆತನನ್ನು ರಕ್ಷಿಸಿದ ಚಿಕ್ಕಪೇಟೆ ಸಂಚಾರ ಠಾಣೆ ಶ್ರೀಕಾಂತ್‌ ಅವರನ್ನು ಪಶ್ಚಿಮ ವಿಭಾಗ (ಸಂಚಾರ) ಡಿಸಿಪಿ ಕುಲದೀಪ್‌ ಕುಮಾರ್‌.ಆರ್‌.ಜೈನ್‌ ಹಾಗೂ ಸಾರ್ವಜನಿಕರು ಅಭಿನಂದಿಸಿದ್ದಾರೆ.

ಮಂಗಳೂರು ಪೊಲೀಸ್ ಕಮಿಷನರ್ ಭ್ರಷ್ಟಾಚಾರದಲ್ಲಿ ಭಾಗಿ: ಲೋಕಾಯುಕ್ತ ದೂರುದಾರ ಕಬೀರ್ ಉಳ್ಳಾಲ್ ಆರೋಪ!

ಎಂದಿನಂತೆ ಸೋಮವಾರ ಸಂಜೆ ಶಾಲೆ ಮುಗಿದ ಬಳಿಕ ಮನೆಗೆ ಹೋಗದೆ ಹಾದಿ ತಪ್ಪಿ ಮೆಜೆಸ್ಟಿಕ್‌ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಬಳಿ ಬಾಲಕ ಅಳುತ್ತ ನಿಂತಿದ್ದ. ಅದೇ ವೇಳೆ ಅಲ್ಲಿ ಕರ್ತವ್ಯದಲ್ಲಿ ನಿರತನಾಗಿದ್ದ ಶ್ರೀಕಾಂತ್‌ ಅವರು, ಅಳುತ್ತಿದ್ದ ಜ್ಞಾನೇಶ್‌ನ ನೆರವಿಗೆ ಧಾವಿಸಿದ್ದಾರೆ. ‘ಯಾಕೆ ಅಳುತ್ತಾ ಇದ್ಯಾ. ನಿನಗೆ ಏನಾಯಿತು’ ಎಂದು ಅವರು ವಿಚಾರಿಸಿದಾಗ ತನಗೆ ಮನೆ ದಾರಿ ತಿಳಿಯುತ್ತಿಲ್ಲವೆಂದು ಬಾಲಕ ಉತ್ತರಿಸಿದ್ದಾನೆ. ಕೊನೆಗೆ ತಮ್ಮ ಮೊಬೈಲ್‌ ನೀಡಿದ ಶ್ರೀಕಾಂತ್‌ ಅವರು, ನಿನಗೆ ನಿಮ್ಮ ತಂದೆ-ತಾಯಿ ನಂಬರ್‌ ಗೊತ್ತಿದ್ದರೆ ಕರೆ ಮಾಡುವಂತೆ ತಿಳಿಸಿದ್ದಾರೆ. ಆಗ ತನ್ನ ತಂದೆ ಗೌರಿಶಂಕರ್‌ ಅವರಿಗೆ ಆತ ಕರೆ ಮಾಡಿದ್ದಾನೆ. ಬಳಿಕ ಹಸಿದಿದ್ದ ಬಾಲಕನಿಗೆ ತಿಂಡಿ ಕೊಡಿಸಿ ಶ್ರೀಕಾಂತ್‌ ಉಪಚರಿಸಿದ್ದಾರೆ. ರಾತ್ರಿ 8.30 ಗಂಟೆಗೆ ಮೆಜೆಸ್ಟಿಕ್‌ ಆಗಮಿಸಿದ ಜ್ಞಾನೇಶ್‌ ಪೋಷಕರಿಗೆ ಮಗನನ್ನು ಶ್ರೀಕಾಂತ್‌ ಒಪ್ಪಿಸಿದ್ದಾರೆ.

ಶಾಲೆಯಿಂದ ಮನೆಗೆ ಹೊರಟ್ಟಿದ್ದ ಜ್ಞಾನೇಶ್‌, ದಾರಿಯಲ್ಲಿ ಅಪರಿಚಿತ ಬೈಕ್‌ ಸವಾರನಿಗೆ ಕೈ ಅಡ್ಡ ಹಾಕಿ ಡ್ರಾಪ್‌ ಕೇಳಿದ್ದಾನೆ. ಆಗ ಡ್ರಾಪ್‌ ಕೊಡುವುದಾಗಿ ಬೈಕ್‌ಗೆ ಬಾಲಕನ್ನು ಹತ್ತಿಸಿಕೊಂಡ ಆತ, ಮಾರ್ಗ ಮಧ್ಯೆ ಬೈಕ್‌ ನಿಲ್ಲಿಸುವಂತೆ ಬಾಲಕ ವಿನಂತಿಸಿದರೂ ಬೈಕ್‌ ನಿಲ್ಲಿಸದೆ ಕರೆತಂದು ಮೆಜೆಸ್ಟಿಕ್‌ ಬಳಿ ನಿಲ್ಲಿಸಿ ಹೊರಟು ಹೋಗಿದ್ದ. ಆಗ ದಾರಿ ಗೊತ್ತಾಗದೆ ಆತ ಅಳುತ್ತ ನಿಂತಿದ್ದ. ಆದರೆ ಬಾಲಕನಿಗೆ ಬೈಕ್‌ ನೊಂದಣಿ ಸಂಖ್ಯೆ ಸಹ ನೆನಪಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.