ಮಂಗಳೂರು ಪೊಲೀಸ್ ಕಮಿಷನರ್ ಭ್ರಷ್ಟಾಚಾರದಲ್ಲಿ ಭಾಗಿ: ಲೋಕಾಯುಕ್ತ ದೂರುದಾರ ಕಬೀರ್ ಉಳ್ಳಾಲ್ ಆರೋಪ!

ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ಹಿನ್ನೆಲೆ ಲೋಕಾಯುಕ್ತಕ್ಕೆ ದೂರು ನೀಡಿದ ಪ್ರಕರಣ ಸಂಬಂಧ ಮಂಗಳೂರು ಕಮಿಷನರ್ ಶಶಿಕುಮಾರ್ ವಿರುದ್ದವೇ ಲೋಕಾಯುಕ್ತ ದೂರುದಾರ ಕಬೀರ್ ಉಳ್ಳಾಲ್ ಗಂಭೀರ ಆರೋಪ ಮಾಡಿದ್ದಾರೆ.

Mangalore Police Commissioner in corruption Kabir Ullal accused at mangaluru rav

ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು (ಫೆ.7): ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ಹಿನ್ನೆಲೆ ಲೋಕಾಯುಕ್ತಕ್ಕೆ ದೂರು ನೀಡಿದ ಪ್ರಕರಣ ಸಂಬಂಧ ಮಂಗಳೂರು ಕಮಿಷನರ್ ಶಶಿಕುಮಾರ್ ವಿರುದ್ದವೇ ಲೋಕಾಯುಕ್ತ ದೂರುದಾರ ಕಬೀರ್ ಉಳ್ಳಾಲ್ ಗಂಭೀರ ಆರೋಪ ಮಾಡಿದ್ದಾರೆ.

 ಮಂಗಳೂರು ಕಮಿಷನರ್ ಶಶಿಕುಮಾರ್ ನೇರವಾಗಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಮಂಗಳೂರಿನ ಸಾಮಾಜಿಕ ಹೋರಾಟಗಾರ ಹಾಗೂ ಉಳ್ಳಾಲ ಪೊಲೀಸರ ವಿರುದ್ದ ಲೋಕಾಯುಕ್ತಕ್ಕೆ ದೂರು ನೀಡಿದ ಕಬೀರ್ ಉಳ್ಳಾಲ್ ಸುದ್ದಿಗೋಷ್ಟಿ ನಡೆಸಿ ಕಮಿಷನರ್ ವಿರುದ್ದ ತನಿಖೆಗೆ ಆಗ್ರಹಿಸಿದ್ದಾರೆ. 

Mangaluru police: ಉಳ್ಳಾಲ ಠಾಣೆಯಲ್ಲಿ ಭ್ರಷ್ಟಾಚಾರ: ಮಂಗಳೂರು ಕಮಿಷನರ್ ಗೆ ಲೋಕಾಯುಕ್ತ ನೋಟೀಸ್!

ಆರೋಪಿ ಸ್ಥಾನದಲ್ಲಿರುವ ಮಂಗಳೂರು ಕಮಿಷನರ್ ಗೆ ಲೋಕಾಯುಕ್ತ ಇಲಾಖೆ ತನಿಖೆ ಹೊಣೆ ಕೊಟ್ಟಿರುವುದು ಸರಿಯಲ್ಲ. ಉಳ್ಳಾಲ ಪೊಲೀಸರು ಮತ್ತು ಕಮಿಷನರ್ ವಿರುದ್ಧ ನಾನು ‌ಲೋಕಾಯುಕ್ತಕ್ಕೆ ದೂರು ನೀಡಿದ್ದೇನೆ. ಉಳ್ಳಾಲ ಇನ್ಸ್ಪೆಕ್ಟರ್ ಸಂದೀಪ್, ಪಿಎಸ್‌ಐ ಹಾಗೂ ಕಮಿಷನರ್ ಶಶಿಕುಮಾರ್ ವಿರುದ್ದವೂ ದೂರಿನಲ್ಲಿ ಉಲ್ಲೇಖವಿದೆ. ಆದರೆ ಲೋಕಾಯುಕ್ತರು ಕಮಿಷನರ್ ಶಶಿಕುಮಾರ್ ಗೆ ನನ್ನ ದೂರಿನ ಬಗ್ಗೆ ತನಿಖಾ ವರದಿ ಸಲ್ಲಿಸಲು ಸೂಚಿಸಿದ್ದಾರೆ. ತನಿಖಾ ವರದಿ ಸಲ್ಲಿಸಲು ಕಮಿಷನರ್ ಗೆ ನೋಟೀಸ್ ನೀಡಿದ್ದರು. ಆದರೆ ನನ್ನ ದೂರಿನಲ್ಲಿ ಆರೋಪಿ ಸ್ಥಾನದಲ್ಲಿರುವ ಕಮಿಷನರ್ ತನಿಖೆ ಮಾಡುವುದು ಸರಿಯಲ್ಲ. ಈ ಬಗ್ಗೆ‌ ಲೋಕಾಯುಕ್ತದಲ್ಲಿ ನ್ಯಾಯ ಸಿಗದೇ ಇದ್ದರೆ ಹೈಕೋರ್ಟ್ ಮೆಟ್ಟಿಲೇರುತ್ತೇನೆ. ನಾನು ಕೊಟ್ಟ ದೂರಿನ ಬಗ್ಗೆ ಲೋಕಾಯುಕ್ತ ಸ್ವತಂತ್ರ ತನಿಖೆ ನಡೆಸಲಿ. ಕಮಿಷನರ್ ಶಶಿಕುಮಾರ್ ತನಿಖೆ ನಡೆಸುವುದಾದರೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸುತ್ತೇನೆ. ಸದ್ಯ ಲೋಕಾಯುಕ್ತಕ್ಕೆ ದೂರು ನೀಡಿದ ಹಿನ್ನೆಲೆ ಮಂಗಳೂರು ಪೊಲೀಸರು ಕಿರುಕುಳ ನೀಡ್ತಾ ಇದ್ದಾರೆ. ಮನೆಗೆ ಎಸಿಪಿ, ಇನ್ಸ್ಪೆಕ್ಟರ್ ಹಾಗೂ ಪೊಲೀಸರು ಬಂದು ಕಿರುಕುಳ ನೀಡ್ತಾ ಇದಾರೆ. ನಾನು ದೂರು ಕೊಟ್ಟಿರೋದು ಲೋಕಾಯುಕ್ತಕ್ಕೆ‌. ಹೀಗಾಗಿ ‌ಕಮಿಷನರ್ ಅಥವಾ ಬೇರೆ ಪೊಲೀಸರ ವಿಚಾರಣೆಗೆ ಹೋಗುವ ಅಗತ್ಯವಿಲ್ಲ‌. ಲೋಕಾಯುಕ್ತ ವಿಚಾರಣೆಗೆ ಕರೆದರೆ ನಾನು ಹೋಗುತ್ತೇನೆ‌. ಮಂಗಳೂರು ಪೊಲೀಸರ ಭ್ರಷ್ಟಾಚಾರ ಬಗ್ಗೆ ಸಿಬಿಐ ತನಿಖೆಯಾಗಲಿ. ಡ್ರಗ್ ಕೇಸ್, ವೇಶ್ಯಾವಾಟಿಕೆ ಹಾಗೂ ಚಿನ್ನಾಭರಣ ದರೋಡೆ ಕೇಸ್ ಸಿಬಿಐ ತನಿಖೆಯಾಗಲಿ. ಮಂಗಳೂರು ಕಮಿಷನರ್ ಶಶಿಕುಮಾರ್ ನೇರವಾಗಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಅವರ ವಿರುದ್ದವೇ ದೂರು ಕೊಟ್ಟ ಮೇಲೆ ಅವರೇ ನನ್ನನ್ನ ಠಾಣೆಗೆ ಕರೆಯೋದು ಅಂದ್ರೆ ಏನರ್ಥ? ನನಗೆ ಮಾನಸಿಕ ಕಿರುಕುಳದ ಬಗ್ಗೆ ಲೋಕಾಯುಕ್ತ ಹಾಗೂ ಡಿಜಿಪಿಗೆ ದೂರು ನೀಡಿದ್ದೇನೆ. ಶಶಿಕುಮಾರ್ ಮಂಗಳೂರಿಗೆ ಬಂದ ನಂತರ ಭ್ರಷ್ಟಾಚಾರ ಹೆಚ್ಚಾಗಿದೆ. ಠಾಣೆಗಳಲ್ಲಿ ಇನ್ಸ್ಪೆಕ್ಟರ್ ಗಳಿಗೆ ಭಯ ಇಲ್ಲದೇ ಹಣ ಮಾಡ್ತಾ ಇದಾರೆ. ನಾನು ಕಮಿಷನರ್ ವಿರುದ್ದ ದೂರು ಕೊಟ್ಟಿದ್ದೇನೆ. ಹೀಗಿರುವಾಗ ಕಮಿಷನರ್ ಬಳಿ ವಿಚಾರಣೆಗೆ ಹೋಗಿ ನನ್ನತ್ರ ಇರೋ ಸಾಕ್ಷ್ಯ ಕೊಟ್ಟರೆ ಅವರು ನಾಶಪಡಿಸಲ್ವಾ? ಹಾಗಾಗಿ ನಾನು ಕಮಿಷನರ್ ಕರೆಯೋ ವಿಚಾರಣೆಗೆ ಹಾಜರಾಗಲ್ಲ ಎಂದು ಮಂಗಳೂರು ಕಮಿಷನರ್ ಶಶಿಕುಮಾರ್ ವಿರುದ್ಧವೇ ಕಬೀರ್ ಉಳ್ಳಾಲ್ ಸುದ್ದಿಗೋಷ್ಟಿ ನಡೆಸಿ ಗಂಭೀರ ಆರೋಪ ಮಾಡಿದ್ದಾರೆ.

ತಿಂಗಳ 5 ದಿನ ಮರಳು ಮಾಮೂಲು ವಸೂಲಿ!

ಪೊಲೀಸ್ ಠಾಣೆಗಳಲ್ಲಿ ‌ಬ್ರೋಕರ್ ಗಳು ಇದ್ದಾರೆ. ಪ್ರತೀ ಠಾಣಾ ವ್ಯಾಪ್ತಿಯ ಮರಳು ಸಾಗಾಟಗಾರರು ತಿಂಗಳ 1 ರಿಂದ 5 ತಾರೀಖಿನವರೆಗೆ ಪೊಲೀಸ್ ಇನ್ಸ್ಪೆಕ್ಟರ್ ಗಳ ಮನೆಗೆ ತೆರಳಿ ಮಾಮೂಲಿ ಸಂದಾಯ ಮಾಡಬೇಕು. ಠಾಣೆಯಿಂದ ಅವರು ಮನೆಗೆ ಹೋದ ನಂತರ ಈ ದಂಧೆ‌ ನಡೆಯುತ್ತದೆ. ಅದರ ಜೊತೆಗೆ ಹಲವು ಕೇಸ್ ಗಳಲ್ಲಿ ಸೂಟ್ಕೇಸ್ ಹೋಗಿದೆ. ಇದರ ಬಗ್ಗೆ ಮಾಹಿತಿ ಕೊಡಲು ಜನರು ಇದ್ದಾರೆ. ಆದರೆ ಕಮಿಷನರ್ ಗೆ ಕೊಡಲ್ಲ, ಅವರು ಭಯ ಪಡ್ತಾ ಇದ್ದಾರೆ. ಲೋಕಾಯುಕ್ತದವರು ಕೇಳಿದ್ರೆ ಎಲ್ಲಾ ಸಾಕ್ಷ್ಯ ಕೊಡ್ತೇವೆ.

ಕಬೀರ್ ಕೊಟ್ಟ ಲೋಕಾಯುಕ್ತ ದೂರಿನಲ್ಲಿ ಏನಿದೆ?

ಉಳ್ಳಾಲ ಪೊಲೀಸ್ ಠಾಣೆಯ ಅಧಿಕಾರಿಗಳಾದ ಇನ್ಸ್ ಪೆಕ್ಟರ್ ಸಂದೀಪ್, ಎಸ್.ಐ ಪ್ರದೀಪ್  ಎಂಬವರು ಪ್ರಕರಣಗಳಲ್ಲಿ ಠಾಣೆಗೆ ಬರುವವರೊಂದಿಗೆ ಹಣ ವಸೂಲು ಮಾಡಲು ಹಮೀದ್ ಎಂಬ ಬ್ರೋಕರ್ ಇಟ್ಟುಕೊಂಡಿದ್ದು, ಗಾಂಜಾ ಮಾಫಿಯ, ಮರಳು ಮಾಫಿಯ, ಹೊಟೇಲ್ ಮಾಲೀಕರಿಗೆ ಪ್ರತಿಯೊಂದರಲ್ಲಿ ಹಣದ ಬೇಡಿಕೆಯನ್ನು ಇಟ್ಟು ಜನರ ನೆಮ್ಮದಿಯನ್ನು ಹಾಳು ಮಾಡಿದ್ದಾರೆ. ಇಬ್ಬರು ಅಧಿಕಾರಿಗಳು ಉಳ್ಳಾಲಕ್ಕೆ ಬಂದ ಬಳಿಕ ಕೋಟ್ಯಂತರ ರೂ. ಸಂಪಾದಿಸಿದ್ದಾರೆ. ಈ ಕುರಿತು ಇ-ಮೇಲ್ ಮೂಲಕ ಹಲವು ಇಲಾಖೆಯ ಮುಖ್ಯಸ್ಥರು, ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು, ಎಸಿಬಿ, ಎಡಿಜಿಪಿ, ದ.ಕ ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು ಎಲ್ಲರಿಗೂ ಭ್ರಷ್ಟಾಚಾರದ ವಿರುದ್ಧ ದೂರು ನೀಡಿದರೂ ಯಾವುದೇ ಸ್ಪಂದನೆಯಿಲ್ಲ. ಪೊಲೀಸರ ಭ್ರಷ್ಟಾಚಾರದ  ಬಗ್ಗೆ ದೂರು ನೀಡಿರುವುದಕ್ಕೆ ತನಗೆ ಬೆದರಿಕೆಯನ್ನು ಹಾಕಲಾಗಿದೆ. ಅಲ್ಲದೇ ದೂರು ನೀಡಿದ ಬಗ್ಗೆ ತನ್ನನ್ನೇ ವಿಚಾರಣೆ ನಡೆಸಲಾಗುತ್ತಿದೆ ಎಂದು ದೂರು ನೀಡಿದ್ದರು. ಕೇರಳದ ಹೊಸಂಗಡಿಯಲ್ಲಿ ರಾಜಧಾನಿ ಹೆಸರಿನ ಚಿನ್ನದ ಅಂಗಡಿ ದರೋಡೆ ಮಾಡಿದ ಕಳ್ಳರಿಂದ ಜಪ್ತಿ ಮಾಡಿದ ಚಿನ್ನ ಮತ್ತು ಬೆಳ್ಳಿಯನ್ನು ಇನ್ಸ್ ಪೆಕ್ಟರ್ ಸಂದೀಪ್  ನ್ಯಾಯಾಲಯಕ್ಕೆ ನೀಡದೇ ಅವರ ಮನೆಗೆ ಸಾಗಿಸಿರುವ ಬಗ್ಗೆ ದೂರಲಾಗಿದೆ. ಚಿನ್ನದಂಗಡಿ ದರೋಡೆ ನಡೆಸಿದವರನ್ನು 5 ಕಿ.ಮೀ ದೂರ ಸಂಚರಿಸುವಾಗಲೇ  ಅವರನ್ನು ಕೇರಳ ಗಡಿಭಾಗದಲ್ಲಿ ಬಂಧಿಸಿದ್ದಾರೆ. ಆರೋಪಿಗಳು ಕೆಎ-೦೨-ಎಎ-೮೨೩೯ ಇನೋವಾ ಕಾರನ್ನು ಬಾಡಿಗೆಗೆ ಪಡೆದುಕೊಳ್ಳುವಾಗ  ಬಾಬಾಬುಡಾನ್ ಗಿರಿ ತೆರಳಲೆಂದು  ಪಡೆದುಕೊಂಡಿದ್ದರು. ಈ ಕಾರಿನಲ್ಲಿ ಜಿಪಿಎಸ್ ಅಳವಡಿಸಿತ್ತು. ಕಾರು ಮಾಲೀಕರು ಸಂಶಯದ ಮೇರೆಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದರ ತನಿಖೆ ಕೈಗೆತ್ತಿಕೊಂಡಿದ್ದ ಉಳ್ಳಾಲ ಇನ್ಸ್ ಪೆಕ್ಟರ್ ಸಂದೀಪ್, ಎಸ್.ಐ ಪ್ರದೀಪ್ ಮತ್ತು ಪೊಲೀಸರು ಕೇರಳಕ್ಕೆ ತೆರಳಿ ಬಂಧಿಸಿದ್ದಾರೆ. ಈ ವೇಳೆ 14 ಕೆ.ಜಿ ಬೆಳ್ಳಿ, ಬೆಲೆಬಾಳುವ ವಾಚ್ ಹಾಗೂ ಲಕ್ಷಕ್ಕಿಂತಲೂ ಅಧಿಕ ಹಣವಿತ್ತು. ಇದನ್ನು ಮಂಜೇಶ್ವರ ಪೊಲೀಸರಿಗೆ ಒಪ್ಪಿಸದೇ ಇಬ್ಬರೂ ಹಂಚಿಕೊಂಡು ಮಂಗಳೂರು  ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಚಿನ್ನದ ಅಂಗಡಿಯ ಮಾಲೀಕರು ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಕಾರು ಚಾಲಕ ಹಾಗೂ ಅಂಗಡಿ ಮಾಲೀಕರನ್ನು ವಿಚಾರಣೆ ನಡೆಸಿದರೆ ಸಂಪೂರ್ಣ ಮಾಹಿತಿ ಹೊರಬರುತ್ತದೆ ಎಂದು ದೂರು ನೀಡಿದ್ದರು. 

ಶಾಸಕ ಯು.ಟಿ.ಖಾದರ್‌ಗೆ ರಾಹುಲ್‌ ಪಿಎ ಹೆಸರಲ್ಲಿ ನಕಲಿ ಕರೆ, ಮಂಗಳೂರು ಕಮಿಷನರ್ ಗೆ ದೂರು

 ತೊಕ್ಕೊಟ್ಟುವಿನಲ್ಲಿಯೂ ರಾಜಧಾನಿ ಚಿನ್ನದ ಅಂಗಡಿಯಿದ್ದು, ಅದಕ್ಕಾಗಿ ಮಂಗಳೂರು ನ್ಯಾಯಾಲಯದಲ್ಲಿಯೂ 2021ರ ಜು.26 ರಂದು ಎಫ್ ಐ ಆರ್ 171/2021 ದಾಖಲಾದರೆ, ಕೇರಳದ ಕಾಸರಗೋಡು ನ್ಯಾಯಾಲದಲ್ಲಿ ಆರ್.ಪಿ. ನಂ.457/2021/ಎಫ್ ಸಿಎಂ  ನ್ಯಾಯಾಲಯ ಸೇರಿ ಎರಡು ಪ್ರಕರಣಗಳು ದಾಖಲಾಗಿದೆ. ಪೊಲೀಸ್ ಕಮೀಷನರ್ ಶಶಿಕುಮಾರ್ ನಗರಕ್ಕೆ ಬಂದ ನಂತರ ಭ್ರಷ್ಟಾಚಾರ ಮಿತಿಮೀರಿದೆ. ಅವರ ಬೆಂಬಲವೂ ಇರುವುದರಿಂದ ಮಂಗಳೂರಿನ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಭ್ರಷ್ಟಾಚಾರ ವ್ಯಾಪಾರದಂತೆ ನಡೆಯುತ್ತಿದೆ. ಇದರಿಂದ ನಿಷ್ಠಾವಂತ ಪೊಲೀಸ್ ಅಧಿಕಾರಿಗಳು ತಲೆ ತಗ್ಗಿಸುವಂತಾಗಿದೆ. ಮೂವರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿದರೆ ಅಕ್ರಮ ಸಂಪತ್ತನ್ನು ಪತ್ತೆಹಚ್ಚಬಹುದು. ದೂರುದಾರರಿಗೆ ಜೀವಕ್ಕೆ ಬೆದರಿಕೆಯಿರುವುದರಿಂದ ಗೌಪ್ಯತೆಯನ್ನು ಕಾಪಾಡುವಂತೆ ನಿವೇದಿಸಿಕೊಂಡಿದ್ದರು.  ಅಧಿಕಾರ ದುರುಪಯೋಗ ಮತ್ತು ಲಂಚದ ಆಪಾದನೆ ಮಾಡಿರುವುದರಿಂದ ಕರ್ನಾಟಕ ಲೋಕಾಯುಕ್ತ ಕಲಂ.9 ರಡಿ ಯಲ್ಲಿ ತನಿಖೆ ನಡೆಸುವುದು ಸೂಕ್ತ ಎಂದು ಕರ್ನಾಟಕ ಲೋಕಾಯುಕ್ತ ಬೆಂಗಳೂರು ನೋಟೀಸಿನಲ್ಲಿ ತಿಳಿಸಿ ಕಮಿಷನರ್ ಶಶಿಕುಮಾರ್ ಗೆ ತನಿಖಾ ವರದಿ ಸಲ್ಲಿಸಲು ಸೂಚಿಸಿತ್ತು. ಅದರಂತೆ ‌ಕಮಿಷನರ್ ಎಸಿಪಿ ನೇತೃತ್ವದಲ್ಲಿ ತನಿಖೆಗೆ ಆದೇಶ ಮಾಡಿದ್ದರು.

Latest Videos
Follow Us:
Download App:
  • android
  • ios