ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು(ಏ.17): ಮಹಾಮಾರಿ ಕೊರೋನಾ ಹಾವಳಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಬಡವರ ನೋವಿಗೆ ಮಿಡಿದಿರುವ ಕಾನ್‌ಸ್ಟೇಬಲ್‌ವೊಬ್ಬರು, ತಮ್ಮ ಮನೆ ಮತ್ತು ಠಾಣೆಯಲ್ಲಿ ಆಹಾರ ತಯಾರಿಸಿ ಪ್ರತಿ ದಿನ 20-30 ಜನರ ಹಸಿವು ನೀಗಿಸುತ್ತಿದ್ದಾರೆ.

ಫ್ರೇಜರ್‌ಟೌನ್‌ ಸಂಚಾರ ಪೊಲೀಸ್‌ ಠಾಣೆ ಯಮನಪ್ಪ ಕೊನಾರಿ ಅವರೇ ಅಂತಃಕರಣವುಳ್ಳ ಕಾನ್‌ಸ್ಟೇಬಲ್‌. ಇದಕ್ಕೆ ಇನ್‌ಸ್ಪೆಕ್ಟರ್‌ ರಾವ್‌ ಗಣೇಶ್‌ ಜನಾರ್ದನ್‌ ಹಾಗೂ ಸಿಬ್ಬಂದಿ ಸಾಥ್‌ ಕೊಟ್ಟಿದ್ದಾರೆ. 
ಲಾಕ್‌ಡೌನ್‌ ಶುರುವಾದ ದಿನದಿಂದಲೂ ಯಮುನಪ್ಪ, ತನ್ನ ಠಾಣಾ ಸರಹದ್ದಿನಲ್ಲಿ ಆಹಾರ ಸಿಗದೆ ಸಂಕಷ್ಟಕ್ಕೆ ಸಿಲುಕಿರುವ ನಿರ್ಗತಿಕರನ್ನು ಪತ್ತೆ ಹಚ್ಚಿ ನೆರವಾಗುತ್ತಿದ್ದಾರೆ. ಕೆಲವರಿಗೆ ಆಹಾರ ಮಾತ್ರವಲ್ಲ ಹಣ ಹಾಗೂ ವಸತಿ ವ್ಯವಸ್ಥೆಯನ್ನು ಸಹ ಕಲ್ಪಿಸುತ್ತಿದ್ದಾರೆ. ಬಡವರ ಬಗ್ಗೆ ಯಮನಪ್ಪ ಕೊನಾರಿಗೆ ಮರುಗುತ್ತಾರೆ. ಠಾಣೆಯಲ್ಲಿ ಅವರಿಗೆ ನೀಡಿದ ಆಹಾರವನ್ನು ನಿರ್ಗತಿಕ ಜನರನ್ನು ಹುಡುಕಿಕೊಂಡು ಹಂಚುತ್ತಾರೆ ಎಂದು ಇನ್‌ಸ್ಪೆಕ್ಟರ್‌ ಗಣೇಶ್‌ ಹೇಳುತ್ತಾರೆ.

ಆಟೋ ತಡೆದ ಪೊಲೀಸರು: ವೃದ್ಧ ತಂದೆಯನ್ನು ಹೊತ್ತುಕೊಂಡೇ ಸಾಗಿದ ಮಗ, ವಿಡಿಯೋ ವೈರಲ್

ಬದುಕು ಕಲಿಸಿದ ಹಸಿವು:

ನನ್ನೂರು ಸಿಂದಗಿ ತಾಲೂಕಿನ ಮದನಹಳ್ಳಿ. ನಮ್ಮದು ರೈತ ಕುಟುಂಬ. ಬಾಲ್ಯದಿಂದಲೂ ನನಗೆ ಹಸಿವಿನ ನೈಜ ಅನುಭವವಿದೆ. ಹಾಗಾಗಿ ಸಂಕಟದಲ್ಲಿದ್ದವರ ಕಂಡರೆ ಸಹಜವಾಗಿ ನೋವಾಗುತ್ತದೆ ಎಂದು ಯಮನಪ್ಪ ಭಾವುಕರಾಗಿ ನುಡಿಯುತ್ತಾರೆ.

ಬೆಂಗಳೂರಿಗೆ 2007ರಲ್ಲಿ ಕೆಲಸ ಅರಸಿ ಬಂದು ಖಾಸಗಿ ಕಂಪನಿಯೊಂದರಲ್ಲಿ ಸೇಲ್ಸ್‌ಮ್ಯಾನ್‌ ಆಗಿ ಸೇರಿದೆ. ಆದರೆ ತಿಂಗಳು ದುಡಿದಿದ್ದರೂ ಕಂಪನಿ ವೇತನ ನೀಡದೆ ಕಳುಹಿಸಿತು. ಇದರಿಂದ ಬೀದಿ ಪಾಲಾದೆ. ಜೇಬಿನಲ್ಲಿ ನಯಾಪೈಸೆ ಇರಲಿಲ್ಲ. ಅಂದು ಲಾಲ್‌ಬಾಗ್‌ ರಸ್ತೆಯಲ್ಲಿ ನಡೆದುಕೊಂಡು ಬರುವಾಗ ಸಿಕ್ಕ ದಾವಣಗೆರೆ ಮೂಲದ ಕಟ್ಟಡ ಕಾರ್ಮಿಕರ ಬಳಿ ನನ್ನ ಸಂಕಷ್ಟವನ್ನು ಹೇಳಿಕೊಂಡಾಗ ತಮ್ಮ ಜೊತೆ ಕೆಲಸಕ್ಕೆ ಸೇರಿಸಿಕೊಂಡರು. ದುಡಿದ 300ಯಲ್ಲಿ ರೈಲಿನಲ್ಲಿ ಊರಿಗೆ ಮರಳಿದೆ. 2012ರಲ್ಲಿ ಪೊಲೀಸ್‌ ಕಾನ್‌ಸ್ಟೇಬಲ್‌ ಆದೆ. ಪ್ರಸ್ತುತ ಸಂಚಾರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ಬಡ ಬಗ್ಗರು ಸಿಕ್ಕರೆ ಕೈಲಾದ ಸಹಾಯ ಮಾಡುತ್ತೇನೆ ಎಂದು ಹೇಳಿದರು.

ಐದಾರು ಮಂದಿಗೆ ಪ್ರತಿ ದಿನ ಮನೆಯಲ್ಲಿ ಅಡುಗೆ ಮಾಡಿಸಿ ವಿತರಿಸುತ್ತೇನೆ. ಠಾಣೆಯಲ್ಲಿ ಪೊಲೀಸರಿಗೆ ಆಹಾರ ತಯಾರಿಸುತ್ತೇವೆ. ಅದರಲ್ಲಿ 20-30 ಹಸಿದವರಿಗೆ ಪೂರೈಸಲಾಗುತ್ತದೆ. ಇನ್‌ಸ್ಪೆಕ್ಟರ್‌ ರಾವ್‌ ಗಣೇಶ್‌ ಜನಾರ್ದನ್‌ ಬೆಂಬಲಿಸುತ್ತಾರೆ ಎಂದು ಯಮನಪ್ಪ ಕೊನಾರಿ ಹೇಳುತ್ತಾರೆ.