Asianet Suvarna News Asianet Suvarna News

ಬೆಳಗಾವಿ: ದ್ವಿಚಕ್ರ ವಾಹನ ಡಿಕ್ಕಿ, ಕರ್ತವ್ಯಕ್ಕೆ ಹೋಗ್ತಿದ್ದ ಪೇದೆ ಸಾವು

ಬೈಲಹೊಂಗಲ ತಾಲೂಕಿನ ನಾವಲಗಟ್ಟಿ ಗ್ರಾಮದವರಾದ, ಎಪಿಎಂಸಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಫಕ್ಕೀರಪ್ಪ ಅರ್ಜುನ ಉಪ್ಪಾರಟ್ಟಿ ಮೃತ ಪೇದೆ. ಬೆಳಗಾವಿ ತಾನಾಜಿ ಗಲ್ಲಿಯ ಅಶೀಶ ಪಾಟನೇಕರ ಹಾಗೂ ಅಮಿತ್‌ ಆನಂದಾಚೆ ಗಾಯಗೊಂಡವರು. 

Police Constable dies Due to Road Accident in Belagavi grg
Author
First Published Nov 15, 2023, 11:30 PM IST

ಬೆಳಗಾವಿ(ನ.15): ಕರ್ತವ್ಯಕ್ಕೆ ಹೋಗಲು ಬಸ್‌ಗಾಗಿ ಕಾದು ನಿಂತಿದ್ದಾಗ ದ್ವಿಚಕ್ರ ವಾಹನ ಸವಾರ ಡಿಕ್ಕಿ ಹೊಡೆದ ಪರಿಣಾಮ ಪೇದೆ ಸ್ಥಳದಲ್ಲಿಯೇ ಮೃತಪಟ್ಟು, ದ್ವಿಚಕ್ರ ವಾಹನ ಮೇಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಮಂಗಳವಾರ ನಡೆದಿದೆ.

ಬೈಲಹೊಂಗಲ ತಾಲೂಕಿನ ನಾವಲಗಟ್ಟಿ ಗ್ರಾಮದವರಾದ, ಎಪಿಎಂಸಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಫಕ್ಕೀರಪ್ಪ ಅರ್ಜುನ ಉಪ್ಪಾರಟ್ಟಿ (35) ಮೃತ ಪೇದೆ. ಬೆಳಗಾವಿ ತಾನಾಜಿ ಗಲ್ಲಿಯ ಅಶೀಶ ಪಾಟನೇಕರ ಹಾಗೂ ಅಮಿತ್‌ ಆನಂದಾಚೆ ಗಾಯಗೊಂಡವರು. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸೋಮವಾರ ಗ್ರಾಮದಲ್ಲಿ ಸ್ನೇಹಿತರು ಹಾಗೂ ಕುಟುಂಬಸ್ಥರೊಂದಿಗೆ ಸಂಭ್ರಮಿಸಿದ್ದ ಪೇದೆ ಫಕ್ಕೀರಪ್ಪ ಸಂಜೆ ಹೊತ್ತಿಗೆ ರಾತ್ರಿ ಕರ್ತವ್ಯ ಇರುವುದರಿಂದ ಬೆಳಗಾವಿಗೆ ಹೋಗುವುದಾಗಿ ಹೇಳಿ ನಾವಲಗಟ್ಟಿ ಗ್ರಾಮದಿಂದ ಬಂದಿದ್ದರು. ರಾತ್ರಿ ಠಾಣೆಯ ಸೆಂಟ್ರಿ ಕರ್ತವ್ಯ ಇರುವುದರಿಂದ ಕಾಕತಿಯಲ್ಲಿರುವ ಸ್ನೇಹಿತನ ಮನೆಗೆ ತೆರಳಿ ಕೆಲ ಸಮಯ ಕಳೆದಿದ್ದಾರೆ. ಕರ್ತವ್ಯದ ಸಮಯ ಆಗುತ್ತಿದ್ದಂತೆ ಸ್ನೇಹಿತನಿಗೆ ತಿಳಿಸಿ ಬಸ್‌ಗಾಗಿ ಕಾಕತಿಯ ಹೆದ್ದಾರಿ ಪಕ್ಕ ಕಾಯುತ್ತ ನಿಂತಿದ್ದರು.

ಉಡುಪಿ ನಾಲ್ಕು ಕೊಲೆ ಪ್ರಕರಣ: ನರಹಂತಕ ಪ್ರವೀಣ್‌ ಚೌಗಲೆ ಖೆಡ್ಡಾಗೆ ಬಿದ್ದಿದ್ದು ಹೀಗೆ!

ಇದೇ ಸಮಯಕ್ಕೆ ದ್ವಿಚಕ್ರ ವಾಹನದಲ್ಲಿ ಆಶೀಶನು ಅಮಿತ್‌ನನ್ನು ಕೂರಿಸಿಕೊಂಡು ವೇಗವಾಗಿ ಚಲಾಯಿಸಿಕೊಂಡು ಬಂದು ರಸ್ತೆ ಪಕ್ಕ ಬಸ್‌ಗಾಗಿ ಕಾದು ನಿಂತಿದ್ದ ಪೊಲೀಸ್ ಪೇದೆ ಫಕ್ಕೀರಪ್ಪಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ರಭಸಕ್ಕೆ ಪೇದೆಗೆ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ದ್ವಿಚಕ್ರ ಮೇಲಿದ್ದ ಇಬ್ಬರಿಗೂ ಗಂಭೀರವಾಗಿ ಗಾಯವಾಗಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಕಾಕತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಕಾಕತಿ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ನಗರ ಪೊಲೀಸ್‌ ಆಯುಕ್ತ ಸಿದ್ದರಾಮಪ್ಪ.ಎಸ್‌.ಎನ್‌, ಡಿಸಿಪಿಗಳಾದ ರೋಹನ್‌, ಸ್ನೇಹಾ.ಪಿ.ವಿ, ಗ್ರಾಮೀಣ ಎಸಿಪಿ ವಿ.ಗಿರೀಶ, ಪೊಲೀಸ್‌ ಇನ್ಸ್‌ಪೆಕ್ಟರ್‌ಗಳಾದ ವಿಜಯಕುಮಾರ ಸಿನ್ನೂರ, ವಿಶ್ವನಾಥ ಕಟ್ಟಿ ಸೇರಿದಂತೆ ಇತರರು ಆಗಮಿಸಿ ಅಂತಿಮ ನಮನ ಸಲ್ಲಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಮುಗಿಲು ಮುಟ್ಟಿದ ಆಕ್ರಂದನ

ಅತ್ಯಂತ ಕಡುಬಡತನದಲ್ಲಿಯೇ ಪೊಲೀಸ್‌ ಪೇದೆಯಾಗಿ ಕರ್ತವ್ಯಕ್ಕೆ ಸೇರಿದ್ದ ಫಕ್ಕೀರಪ್ಪ ಉಪ್ಪಾರಟ್ಟಿ, ಕಾಕತಿ, ಹಿರೇಬಾಗೇವಾಡಿಯಲ್ಲಿ ಸೇವೆ ಸಲ್ಲಿಸಿ, ಸದ್ಯ ಬೆಳಗಾವಿ ನಗರದ ಎಪಿಎಂಸಿ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬಸ್ಥರು, ಸ್ನೇಹಿತರು ಹಾಗೂ ಗ್ರಾಮಸ್ಥರಿಗೆ ಈ ದುರ್ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಮಮ್ಮಲ ಮರುಕಪಟ್ಟರು. ಇತ್ತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ನಂತರ ಪೊಲೀಸ್‌ ಇಲಾಖೆಯಿಂದ ಗಾಳಿಯಲ್ಲಿ 3 ಸುತ್ತು ಗುಂಡು ಹಾರಿಸಿ, ಸರ್ಕಾರಿ ಗೌರವ ಸಲ್ಲಿಸಿದ ಬಳಿಕ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಮೃತ ಪೇದೆ, ತಂದೆ, ತಾಯಿ, ಹಿರಿಯ ಸಹೋದರ ಸೇರಿದಂತೆ ಅಪಾರ ಬಂಧು-ಬಳಗ ಇದೆ.

Follow Us:
Download App:
  • android
  • ios