ಮಂಗಳೂರು: ಚಪ್ಪಲಿ ಕದ್ದರೆಂದು ದೂರು, ಹುಡುಕಾಟ ನಡೆಸಿದ ಪೊಲೀಸರು..!
ಕಳೆದ ಭಾನುವಾರ ಮಂಗಳೂರು ನಗರದ ಬಾಲಂಭಟ್ ಹಾಲ್‌ನಲ್ಲಿ ಕಾರ್ಯಕ್ರಮವೊಂದು ನಡೆದಿತ್ತು. ಅಲ್ಲಿಗೆ ಬಂದಿದ್ದ ವ್ಯಕ್ತಿಯೊಬ್ಬರ ಚಪ್ಪಲಿ ಕಾಣೆಯಾಗಿತ್ತು. ಹುಡುಕಾಡಿ ಚಪ್ಪಲಿ ಸಿಗದೇ ಇದ್ದಾಗ ವ್ಯಕ್ತಿ ನೇರವಾಗಿ ಪೊಲೀಸ್ ಕಂಟ್ರೋಲ್ ರೂಂ ನಂಬರ್ 112ಗೆ ಕರೆ ಮಾಡಿ ದೂರಿದ್ದಾರೆ. ದೂರು ಬಂದ ಕೂಡಲೇ ಪರಿಶೀಲನೆಗೆ ಬಂದರು ಠಾಣೆ ಪೊಲೀಸರು ಬಾಲಂಭಟ್ ಹಾಲ್‌ಗೆ ಆಗಮಿಸಿ ಕರ್ತವ್ಯ ಪ್ರಜ್ಞೆ ಮೆರಿದ್ದಾರೆ.
ಮಂಗಳೂರು(ಜು.19): ದೇವಸ್ಥಾನ, ಜಾತ್ರೆ, ಸಮಾರಂಭಗಳಲ್ಲಿ ಚಪ್ಪಲಿ ಕಳಕೊಳ್ಳುವುದು ಸಾಮಾನ್ಯ. ಹುಡುಕಿದರೂ ಚಪ್ಪಲಿ ಸಿಗದೇ ಇದ್ದಾಗ ಅನೇಕರು ಅನಿವಾರ್ಯವಾಗಿ ಬರಿಗಾಲಲ್ಲೇ ಮನೆಗೆ ಹಿಂದಿರುಗುವುದೂ ಇದೆ. ಆದರೆ ಇಲ್ಲೊಬ್ಬ ತನ್ನ ಚಪ್ಪಲಿ ಕಳಕೊಂಡಿದ್ದಕ್ಕೆ ಕಂಟ್ರೋಲ್ ರೂಂ 112ಕ್ಕೆ ಕರೆ ಮಾಡಿ ಪೊಲೀಸರನ್ನು ಕರೆಸಿ ಹುಡುಕಾಡಿಸಿದ್ದಾನೆ.
ಕಳೆದ ಭಾನುವಾರ ಮಂಗಳೂರು ನಗರದ ಬಾಲಂಭಟ್ ಹಾಲ್‌ನಲ್ಲಿ ಕಾರ್ಯಕ್ರಮವೊಂದು ನಡೆದಿತ್ತು. ಅಲ್ಲಿಗೆ ಬಂದಿದ್ದ ವ್ಯಕ್ತಿಯೊಬ್ಬರ ಚಪ್ಪಲಿ ಕಾಣೆಯಾಗಿತ್ತು. ಹುಡುಕಾಡಿ ಚಪ್ಪಲಿ ಸಿಗದೇ ಇದ್ದಾಗ ವ್ಯಕ್ತಿ ನೇರವಾಗಿ ಪೊಲೀಸ್ ಕಂಟ್ರೋಲ್ ರೂಂ ನಂಬರ್ 112ಗೆ ಕರೆ ಮಾಡಿ ದೂರಿದ್ದಾರೆ. ದೂರು ಬಂದ ಕೂಡಲೇ ಪರಿಶೀಲನೆಗೆ ಬಂದರು ಠಾಣೆ ಪೊಲೀಸರು ಬಾಲಂಭಟ್ ಹಾಲ್‌ಗೆ ಆಗಮಿಸಿ ಕರ್ತವ್ಯ ಪ್ರಜ್ಞೆ ಮೆರಿದ್ದಾರೆ. ಹಾಲ್ ಬಳಿ ಚಪ್ಪಲಿಗಾಗಿ ಪೊಲೀಸರು ಹುಡುಕಾಟವನ್ನೂ ನಡೆಸಿದ್ದಾರೆ. ಚಪ್ಪಲಿ ಕಳೆದುಕೊಂಡ ವ್ಯಕ್ತಿ, ತಾನು ಇಲ್ಲೇ ಚಪ್ಪಲಿ ಇರಿಸಿದ್ದು, ಈಗ ಅದು ನಾಪತ್ತೆಯಾಗಿದೆ. ಯಾರೋ ಹಾಕಿಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.
ಕರಾವಳಿಯಲ್ಲಿ ವರುಣನ ಅಬ್ಬರ ಇಳಿಮುಖ: ಜು.21 ರ ಬಳಿಕ ಮಳೆ ಹೆಚ್ಚಳವಾಗುವ ಸಾಧ್ಯತೆ
ಬಳಿಕ ಪೊಲೀಸರು ಹಾಲ್‌ನಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಮಾರ್ಕೆಟ್‌ನಿಂದ ಸಾಮಗ್ರಿ ಹಾಕಲು ಬಂದ ವ್ಯಕ್ತಿಯೊಬ್ಬ ಚಪ್ಪಲಿ ಹಾಕಿಕೊಂಡು ತೆರಳಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಠಾಣೆಗೆ ಬಂದು ದೂರು ನೀಡುವಂತೆ ಪೊಲೀಸರು ಸೂಚಿಸಿದ್ದಾರೆ. ಆದರೆ ದೂರು ನೀಡಲು ವ್ಯಕ್ತಿ ನಿರಾಕರಿಸಿದ್ದಾನೆ.
ಪೊಲೀಸರು ಚಪ್ಪಲಿ ಕಳವು ದೂರಿಗೂ ಕ್ಷಿಪ್ರವಾಗಿ ಸ್ಪಂದಿಸಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಂದರು ಠಾಣಾಧಿಕಾರಿಗಳು, 112 ಸಂಖ್ಯೆಗೆ ಯಾರೇ ಕರೆ ಮಾಡಿ ಸಮಸ್ಯೆ ಹೇಳಿಕೊಂಡರೂ ನಾವು ಪರಿಶೀಲನೆ ನಡೆಸಲೇ ಬೇಕಾಗುತ್ತದೆ. ಬೆಕ್ಕು ಬಾವಿಗೆ ಬಿದ್ದಿದೆ, ಮನೆಗೆ ಹಾವು ಬಂದಿದೆ, ಮರ ಬಿದ್ದಿದೆ ಹೀಗೆ ಯಾವ ವಿಚಾರ ಇದ್ದರೂ ಸಮಸ್ಯೆ ಹೇಳಿ ಕರೆ ಮಾಡಿದಾಗ ಪೊಲೀಸರು ವಿಚಾರಿಸುವುದು ಸಾಮಾನ್ಯ ಎಂದಿದ್ದಾರೆ.