ಕರಾವಳಿಯಲ್ಲಿ ವರುಣನ ಅಬ್ಬರ ಇಳಿಮುಖ: ಜು.21 ರ ಬಳಿಕ ಮಳೆ ಹೆಚ್ಚಳವಾಗುವ ಸಾಧ್ಯತೆ
ಜು.17ರಿಂದ 20ರವರೆಗೆ ನಾಲ್ಕು ದಿನಗಳ ಕಾಲ ದ.ಕ. ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುವ ಹಳದಿ ಅಲರ್ಟ್ ನೀಡಲಾಗಿದೆ. ಅದರ ಬಳಿಕ ಮಳೆ ಹೆಚ್ಚಳವಾಗುವ ಸಾಧ್ಯತೆಯಿದೆ.
ಉಡುಪಿ/ಮಂಗಳೂರು(ಜು.17): ಕರಾವಳಿಯಲ್ಲಿ ಭಾನುವಾರ ಮಳೆಯ ತೀವ್ರತ ಕಡಿಮೆಯಿತ್ತು. ಉಡುಪಿ ಜಿಲ್ಲೆಯಲ್ಲಿ ಮಳೆ ಮತ್ತೆ ಹಿಮ್ಮುಖವಾಗಿದೆ. ಶನಿವಾರ ರಾತ್ರಿ ಸಾಧಾರಣ ಮಳೆಯಾಗಿದ್ದರೆ, ಭಾನುವಾರ ಎರಡು ಬಾರಿ ಸಾಧಾರಣ ಮಳೆಯಾಗಿದೆ.
ಶನಿವಾರ ಮಳೆಗೆ ಕಾಪು ತಾಲೂಕಿನ ಏಣಗುಡ್ಡೆ ಗ್ರಾಮದ ಆಸೀಫ್ ಮನೆಗೆ 40 ಸಾವಿರ ರು. ಹಾಗೂ ಪಡು ಗ್ರಾಮದ ಗಣೇಶ್ ಎಂಬವರ ಮನೆಗೆ ಸಿಡಿಲು ಬಡಿದು ಸುಮಾರು 40 ಸಾವಿರ ರು. ನಷ್ಟಉಂಟಾಗಿದೆ. ಭಾನುವಾರ ಮುಂಜಾನೆ ವರೆಗೆ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 28.10 ಮಿ.ಮೀ. ಮಳೆಯಾಗಿದೆ. ತಾಲೂಕುವಾರು ಉಡುಪಿ 9.10, ಬ್ರಹ್ಮಾವರ 24.80, ಕಾಪು 11.20, ಕುಂದಾಪುರ 22.30, ಬೈಂದೂರು 23.10, ಕಾರ್ಕಳ 17.20, ಹೆಬ್ರಿ 22.10. ಮಿ.ಮೀ. ಮಳೆ ದಾಖಲಾಗಿದೆ.
ಮೀನು ಪ್ರಿಯರಿಗೆ ಸಿಹಿಸುದ್ದಿ: ಸಾಂಪ್ರದಾಯಿಕ ಮೀನುಗಾರಿಕೆಗೆ ಕಡಲಿಗಿಳಿದ ನಾಡದೋಣಿಗಳು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಸಾಧಾರಣ ಮಳೆಯಾಗಿದೆ. ಬೆಳಗ್ಗೆ ಜಿಲ್ಲೆಯ ಅನೇಕ ಕಡೆಗಳಲ್ಲಿ ಉತ್ತಮ ಮಳೆಯಾಗಿದ್ದರೆ, ಬಳಿಕ ಕೆಲಕಾಲ ಬಿಸಿಲು ಆವರಿಸಿತ್ತು. ಸಂಜೆ ವೇಳೆಗೆ ಅಲ್ಪ ಮಳೆಯಾಗಿದೆ.ಭಾನುವಾರ ಬೆಳಗ್ಗಿನಿಂದ ಸೋಮವಾರ ಬೆಳಗ್ಗಿನವರೆಗೆ ಜಿಲ್ಲೆಯಲ್ಲಿ ಸರಾಸರಿ 24 ಮಿ.ಮೀ. ಮಳೆ ದಾಖಲಾಗಿದೆ. ಮಂಗಳೂರಿನಲ್ಲಿ 25 ಮಿಮೀ, ಬಂಟ್ವಾಳದಲ್ಲಿ 20.1 ಮಿಮೀ, ಬೆ ಳ್ತಂಗಡಿಯಲ್ಲಿ 31.6 ಮಿಮೀ, ಪುತ್ತೂರಿನಲ್ಲಿ 11.5 ಮಿಮೀ, ಕಡಬ 19.2 ಮಿಮೀ, ಸುಳ್ಯದಲ್ಲಿ 36.7 ಮಿಮೀ ಮಳೆಯಾಗಿದೆ.
ನಾಲ್ಕು ದಿನ ಹಳದಿ ಅಲರ್ಟ್:
ಜು.17ರಿಂದ 20ರವರೆಗೆ ನಾಲ್ಕು ದಿನಗಳ ಕಾಲ ದ.ಕ. ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುವ ಹಳದಿ ಅಲರ್ಟ್ ನೀಡಲಾಗಿದೆ. ಅದರ ಬಳಿಕ ಮಳೆ ಹೆಚ್ಚಳವಾಗುವ ಸಾಧ್ಯತೆಯಿದೆ.