ಬೆಂಗಳೂರು [ಆ.16] :  ಎರಡು ದಿನಗಳ ಹಿಂದೆ ರಾತ್ರಿ ವೇಳೆ ಪೊಲೀಸರ ಗಸ್ತು ವಾಹನ (ಚೀತಾ) ಕದ್ದು ಬಳಿಕ ಮದ್ದೂರು ಸಮೀಪ ಬಿಟ್ಟು ಕಿಡಿಗೇಡಿಗಳು ಪರಾರಿಯಾಗಿರುವ ಸ್ವಾರಸ್ಯಕರ ಘಟನೆ ಬೆಳಕಿಗೆ ಬಂದಿದೆ.

ರಾಜರಾಜೇಶ್ವರಿ ನಗರ ಠಾಣೆಯ ಚೀತಾ ವಾಹನ ಕಳ್ಳತನವಾಗಿದ್ದು, ಚನ್ನಸಂದ್ರದ ಲಾಡ್ಜ್‌ ಪರಿಶೀಲನೆಗೆ ಗಸ್ತು ಸಿಬ್ಬಂದಿ ತೆರಳಿದ್ದಾಗ ಈ ಕೃತ್ಯ ನಡೆದಿದೆ. ತಪ್ಪಿಸಿಕೊಂಡಿರುವ ಆರೋಪಿಗಳಿಗೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

ಕೀ ಹಾಕದೆ ಹೋಗಿದ್ದ ಪೊಲೀಸರು:

ನಗರದ ಎಲ್ಲಾ ಠಾಣೆಗಳ ಗಸ್ತು ಸಿಬ್ಬಂದಿಗೆ ಆ.13ರಂದು ರಾತ್ರಿ ಪೊಲೀಸ್‌ ನಿಯಂತ್ರಣ ಕೊಠಡಿಯಿಂದ ತಮ್ಮ ಸರಹದ್ದಿನ ಲಾಡ್ಜ್‌, ಬಿಎಂಟಿಸಿ ಬಸ್‌ ನಿಲ್ದಾಣ, ಪಿಜಿ, ಮೆಟ್ರೋ, ರೈಲ್ವೆ ನಿಲ್ದಾಣಗಳ ಬಳಿ ಪರಿಶೀಲಿಸುವಂತೆ ಆದೇಶ ಬಂದಿತ್ತು. ಅದರಂತೆ ರಾತ್ರಿ ಪಾಳೆಯದ ಕರ್ತವ್ಯದಲ್ಲಿದ್ದ ರಾಜರಾಜೇಶ್ವರಿ ನಗರ ಠಾಣೆಯ ಸಹಾಯಕ ಸಬ್‌ ಇನ್‌ಸ್ಟೆಕ್ಟರ್‌ ರಂಗಸ್ವಾಮಯ್ಯ ಅವರು, ಚೀತಾ (ಬೈಕ್‌) ಸಿಬ್ಬಂದಿ ಗಿರೀಶ್‌ ಜತೆ ಲಾಡ್ಜ್‌ಗಳ ಪರಿಶೀಲನೆಗೆ ತೆರಳಿದ್ದರು. ಆಗ ಚಿನ್ನಸಂದ್ರ ಮುಖ್ಯ ರಸ್ತೆಯಲ್ಲಿರುವ ಪ್ರಿನ್ಸ್‌ ರಾಯಲ್‌ ಹೋಟೆಲ್‌ಗೆ ಹೋದ ಅವರು, ಚೀತಾ ವಾಹನದಲ್ಲಿ ಕೀ ಬಿಟ್ಟಿದ್ದರು.

ಹೋಟೆಲ್‌ ಕೆಲಸಗಾರರು, ‘ನಮ್ಮಲ್ಲಿ 101ನೇ ಸಂಖ್ಯೆ ಕೊಠಡಿಯಲ್ಲಿ ತಂಗಿರುವ ವ್ಯಕ್ತಿ ಬೇರೆ ಬೇರೆ ಹೆಸರಿನ ದಾಖಲಾತಿಗಳನ್ನು ನೀಡಿದ್ದು, ಆತನ ಬಗ್ಗೆ ಅನುಮಾನದೆ’ ಎಂದು ತಿಳಿಸಿದ್ದಾರೆ. ಪೊಲೀಸರು, ಶಂಕಿತ ವ್ಯಕ್ತಿ ವಿಚಾರಣೆಗೆ ಮುಂದಾದರು. ವಿಚಾರಣೆ ಮುಗಿಸಿ ಹೊರಬಂದಾಗ ಚೀತಾ ಕಾಣದೆ ಪೊಲೀಸರು ಗಾಬರಿಗೊಂಡಿದ್ದಾರೆ. ಕೂಡಲೇ ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿದ ಸಿಬ್ಬಂದಿ, ಚೀತಾದಲ್ಲಿದ್ದ ಜಿಪಿಎಸ್‌ ಮೂಲಕ ಹುಡುಕಾಟ ಆರಂಭಿಸಿದ್ದರು. ಮರುದಿನ ಬೆಳಗ್ಗೆ ಮದ್ದೂರು ಹತ್ತಿರ ರಸ್ತೆ ಬದಿ ಚೀತಾ ಪತ್ತೆಯಾಗಿದೆ. ಇದರೊಂದಿಗೆ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.

‘ಯಾರೋ ಕಿಡಿಗೇಡಿಗಳು ಕುಡಿದ ಮತ್ತಿನಲ್ಲಿ ಪೊಲೀಸ್‌ ವಾಹನ ಎಂದು ತಿಳಿಯದೆ ಚೀತಾವನ್ನು ತೆಗೆದುಕೊಂಡು ಹೋಗಿರಬಹುದು. ಬೆಳಗ್ಗೆ ವಾಹನದ ಮುಂದೆ ಪೊಲೀಸ್‌ ಎಂದು ಬರೆದಿರುವುದನ್ನು ನೋಡಿದ ಅವರು, ಭಯಗೊಂಡು ಮದ್ದೂರು ಬಳಿ ವಾಹನವನ್ನು ನಿಲ್ಲಿಸಿ ಪರಾರಿಯಾಗಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಆರೋಪಿಗಳ ಪತ್ತೆಗೆ ಮೈಸೂರು ರಸ್ತೆಯ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ವಶಕ್ಕೆ ಪಡೆದು ಪರಿಶೀಲಿಸುತ್ತಿದ್ದೇವೆ’ ಎಂದು ಅಧಿಕಾರಿಗಳ ಮಾಹಿತಿ ನೀಡಿದ್ದಾರೆ.