Asianet Suvarna News Asianet Suvarna News

Chikkamagaluru: ಯುವ ವಕೀಲ ಪ್ರೀತಮ್ ಮೇಲೆ ಪೊಲೀಸರ ಹಲ್ಲೆ: ಸಿಐಡಿ ತನಿಖೆ ಆರಂಭ!

ಯುವ ವಕೀಲ ಪ್ರೀತಮ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದ್ದು, ಈ ಹಿನ್ನಲೆಯಲ್ಲಿ ಸಿಐಡಿ ಅಧಿಕಾರಿಗಳು ಚಿಕ್ಕಮಗಳೂರಿಗೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. 
 

Police attack on young lawyer Preetham CID investigation begins at Chikkamagaluru gvd
Author
First Published Dec 6, 2023, 8:45 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಡಿ.06): ಯುವ ವಕೀಲ ಪ್ರೀತಮ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದ್ದು, ಈ ಹಿನ್ನಲೆಯಲ್ಲಿ ಸಿಐಡಿ ಅಧಿಕಾರಿಗಳು ಚಿಕ್ಕಮಗಳೂರಿಗೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಸಿಐಡಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್, ಡಿವೈಎಸ್ಪಿ ಉಮೇಶ್ ಮತ್ತು ಕಾನೂನು ಸಲಹೆಗಾರ ಕಾಳೆ ಅವರು ಪ್ರಕರಣದಲ್ಲಿನ ಮಾಹಿತಿಯನ್ನು ಕಲೆ ಹಾಕಲು ಮುಂದಾಗಿದ್ದಾರೆ. ತನಿಖೆ ಇನ್ನೇರೆಡು ದಿನಗಳು ಮುಂದುವರೆಯುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ರಾಜ್ಯಮಟ್ಟದಲ್ಲಿ ಭಾರೀ ಸದ್ದು ಮಾಡಿದ್ದ ಪ್ರಕರಣ: ಯುವ ವಕೀಲ ಪ್ರೀತಮ್ ಅವರ ಮೇಲಿನ ಹಲ್ಲೆ ಪ್ರಕರಣ ರಾಜ್ಯಮಟ್ಟದಲ್ಲಿ ಬಾರೀ ಸದ್ದು ಮಾಡಿತ್ತು. ಈ ಸಂಬಂಧ ಹೈಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು. ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಕೀಲರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಘಟನೆ ಖಂಡಿಸಿ ರಾಜ್ಯಾದ್ಯಂತ ವಕೀಲರು ಪ್ರತಿಭಟನೆ ನಡೆಸಿದ್ದರು. ಪ್ರತಿಯಾಗಿ ಪೊಲೀಸರು ತಮ್ಮ ಕರ್ತವ್ಯಕ್ಕೆ ವಕೀಲರು ಅಡ್ಡಿಪಡಿಸಿದ್ದಾರೆ ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಪೊಲೀಸರು ಪ್ರತಿಭಟನೆ ನಡೆಸಿದ್ದರು. 

ಅಕ್ಕಿ ಹಗರಣದ ತನಿಖೆ ಮುಗಿಯುವವರೆಗೆ ಚುನಾವಣೆ ಬೇಡ: ಎಸ್.ಗಂಗಾಧರ್

ಪ್ರಕರಣದ ಗಂಭೀರತೆಯನ್ನು ಅರಿತ ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ತನಿಖೆ ಹೊಣೆಯನ್ನು ಸಿಐಡಿವಹಿಸಿರುವುದಕ್ಕೆ ಉಚ್ಚ ನ್ಯಾಯಾಲಯ ಸಮ್ಮತಿಸಿದೆ. ಪ್ರಕರಣದ ವಿಚಾರಣೆಯನ್ನು ನಿನ್ನೆ (ಮಂಗಳವಾರ) ಮುಖ್ಯನ್ಯಾಯಾಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾಯಾಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರನ್ನೊಳಗೊಂಡ ವಿಭಾಗೀಯ ಪೀಠ ಕೈಗೆತ್ತಿಕೊಂಡು ಡಿ.12ಕ್ಕೆ ಮುಂದೂಡಿದೆ. ಇದರ ಬೆನ್ನಲ್ಲೆ ಸಿಐಡಿ ಪೊಲೀಸರು ನಗರಕ್ಕೆ ಆಗಮಿಸಿ ಪ್ರಕರಣದ ತನಿಖೆಗೆ ಮುಂದಾಗಿದ್ದಾರೆ.

ಮುಂದುವರಿದ ವಕೀಲರ ಮೌನ ಪ್ರತಿಭಟನೆ: ವಕೀಲರು ಮತ್ತು ಪೊಲೀಸರ ನಡುವಿನ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರು ಮೌನ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ವಕೀಲ ಪ್ರೀತಮ್ ಮೇಲೆ ಹಲ್ಲೆ ನಡೆಸಿರುವ ಆರು ಮಂದಿ ಪೊಲೀಸರನ್ನ ಬಂಧಿಸುವಂತೆ ಆಗ್ರಹಿಸಿ ವಕೀಲರು ಕೈಗೆ ಕೆಂಪು ಪಟ್ಟಿಯನ್ನ ಕಟ್ಟಿಕೊಂಡು ಕೋರ್ಟಿಗೆ ಹಾಜರಾಗಿದ್ದಾರೆ. ಇನ್ನೂ  ಇಂದು (ಬುಧವಾರ) ಕೋರ್ಟಿಗೆ ಹಾಜರಾದ ವಕೀಲರು ತಮಗೆ ಸಂಬಂಧಪಟ್ಟ ಪ್ರಕರಣಗಳ ಮುಂದಿನ ಡೇಟ್ ಪಡೆದು ವಾಪಸ್ಸಾಗಿದ್ದಾರೆ. ಅಷ್ಟೇ ಅಲ್ಲದೆ ಆರು ಮಂದಿ ಪೊಲೀಸರ ಬಂಧನವಾಗುವವರೆಗೂ ಕೂಡ ಕೋರ್ಟ್ ಕಲಾಪದಲ್ಲಿ ಭಾಗವಹಿಸದಿರಲು ತೀರ್ಮಾನಿಸಿದ್ದು. ಮೌನ ಪ್ರತಿಭಟನೆಯ ಮೂಲಕ ಹೋರಾಟವನ್ನು ಮುಂದುವರಿಸಿದ್ದಾರೆ.

ಅರ್ಜುನನ ಸಾವಿನಿಂದ ನೋವು, ಕಾಫಿನಾಡಿನಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ಸ್ಥಗಿತ!

ವಕೀಲ ಪ್ರೀತಮ್ ಗೆ ಜಾಮೀನು ಮಂಜೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ವಕೀಲರು- ಪೊಲೀಸರ  ನಡುವಿನ ಗಲಾಟೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲ್ಲೆಗೊಳಗಾಗಿದ್ದ ವಕೀಲ ಪ್ರೀತಮ್ ಗೆ ಜಾಮೀನು ಮಂಜೂರಾಗಿದೆ. ಜಿಲ್ಲಾ ಮುಖ್ಯ ನ್ಯಾಯಾಧೀಶ ನಂದೀಶ್ ಅವರು ಜಾಮೀನು ಮಂಜೂರು ಮಾಡಿದ್ದು, ತನಿಖೆಗೆ ಸಹಕರಿಸುವಂತೆ ಸೂಚನೆ ನೀಡಿ ಜಾಮೀನು ನೀಡಿದ್ದಾರೆ. ವಕೀಲ ಪ್ರೀತಮ್ ಮೇಲೆ ಐಪಿಸಿ ಸೆಕ್ಷನ್ 353ರ ಅಡಿ ಪ್ರಕರಣ ದಾಖಲಿಸಲಾಗಿತ್ತು. 353 ಸರ್ಕಾರಿ  ಅಧಿಕಾರಕ್ಕೆ ಅಡ್ಡಿಪಡಿಸಿದಾಗ ಹಾಕುವ ಸೆಕ್ಷನ್ ಆಗಿದ್ದು, ಇದನ್ನ ಪ್ರೀತಮ್ ಅವರ ಮೇಲೆ ಹಾಕಲಾಗಿತ್ತು. ಹಲ್ಲೆಗೊಳಗಾಗಿದ್ದ ಪ್ರೀತಮ್ ರನ್ನು ಸ್ವಯಂಪ್ರೇರಿತರಾಗಿ ನ್ಯಾಯಕ್ಕೆ ಹಾಜರುಪಡಿಸಿದ್ದ ವಕೀಲರು ಜಾಮೀನು ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

Follow Us:
Download App:
  • android
  • ios