ಬೆಳಗಾವಿ(ಏ.30): ಸಿಆರ್‌ಪಿಎಫ್‌ ಯೋಧ ಹಾಗೂ ಪೊಲೀಸರ ನಡುವಿನ ಜಟಾಪಟಿಗೆ ಸಂಬಂಧಿಸಿದಂತೆ ಯೋಧನನ್ನು ಪೊಲೀಸರು ಬಾಸುಂಡೆ ಬರುವಂತೆ ಥಳಿಸಿರುವ ಫೊಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ನಡೆದ ಗಲಾಟೆಯಲ್ಲಿ ಯೋಧ ಹಾಗೂ ಪೊಲೀಸರು ಪರಸ್ಪರ ಹಲ್ಲೆ ಮಾಡಿದ್ದ ವಿಡಿಯೋ ಹಾಗೂ ಕೈಕೊಳ ಹಾಕಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದೀಗ ಸದಲಗಾ ಪೊಲೀಸರು ಯೋಧನನ್ನು ಬಾಸುಂಡೆ ಬರುವಂತೆ ಥಳಿಸಿರುವ ಫೋಟೋ ವೈರಲ್‌ ಆಗಿದೆ. ಪೇದೆ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಏ. 23 ರಂದು ಸದಲಗಾ ಪೊಲೀಸರು ಬಂಧಿಸಿದ್ದರು. 

ಯೋಧನ ಮೇಲೆ ಪೊಲೀಸರ ದರ್ಪ: ಶಾಸಕರಿಗೆ ಮೃದುಧೋರಣೆ, ದೇಶ ಕಾಯುವವರಿಗೆ ಕಠಿಣ ಶಿಕ್ಷೆ!

ಯೋಧನ ಕೈಗೆ ಕೋಳ ತೊಡಿಸಿ ಠಾಣೆಯಲ್ಲಿ ಕೂರಿಸಿದ್ದರು. ಯೋಧನನ್ನು ಕಳ್ಳನಂತೆ ನಡೆಸಿಕೊಂಡ ಪೊಲೀಸರ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಅದಕ್ಕೂ ಮುಂಚೆ ಪೊಲೀಸರು ಯೋಧನನ್ನು ಹಿಗ್ಗಾಮುಗ್ಗಾ ಥಳಿಸಿದ್ದು, ಮೈಮೇಲೆ ಬಾಸುಂಡೆ ಮೂಡಿವೆ. ಐದು ದಿನಗಳ ಕಾಲ ಹಿಂಡಲಗಾ ಜೈಲಿನಲ್ಲಿದ್ದ ಯೋಧ ಸಚಿನ್‌ ಸಾವಂತಗೆ ಚಿಕ್ಕೋಡಿ ಒಂದನೇ ಜೆಎಂಎಫ್‌ ನ್ಯಾಯಾಲಯ ಮಂಗಳವಾರ ಜಾಮೀನು ಮಂಜೂರು ಮಾಡಿದ್ದರಿಂದ ಸಿಆರ್‌ಪಿಎಫ್‌ ಅಧಿಕಾರಿಗಳು ಯೋಧನನ್ನು ಖಾನಾಪುರದಲ್ಲಿರುವ ಕ್ಯಾಂಪ್‌ಗೆ ಕರೆದೊಯ್ದಿದ್ದರು.