ಬೆಂಗಳೂರು(ಡಿ.05): ಮರಾಠ ಸಮುದಾಯ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಡಿ.5ರಂದು ಕನ್ನಡಪರ ಸಂಘಟನೆಗಳು ಬಂದ್‌ಗೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾತ್ರೋರಾತ್ರಿ ಸಂಘಟನೆಗಳ ಪ್ರಮುಖರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

"

ಬಂದ್‌ಗೆ ನಗರ ಪೊಲೀಸರು ಅನುಮತಿ ನೀಡಿಲ್ಲ. ಹೀಗಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದ್ದು, ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಕೆಲವರು ಬಲವಂತವಾಗಿ ಬಂದ್‌ ಮಾಡಿಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ರಾತ್ರಿ ಇಡೀ ಕಾರ್ಯಾಚರಣೆ ನಡೆಸಿರುವ ಪೊಲೀಸರು ಕನ್ನಡಪರ ಸಂಘಟನೆಗಳ ಕೆಲ ಪ್ರಮುಖರು ಹಾಗೂ ರೌಡಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದಿದ್ದಾರೆ ಎಂದು ಹಿರಿಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಇಂದು ಕರ್ನಾಟಕ ಬಂದ್, ರಾಜ್ಯದ ಗಡಿ ಕ್ಲೋಸ್: ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ!

16000 ಪೊಲೀಸ್‌ ಭದ್ರತೆಗೆ:

"

ಭದ್ರತೆಗೆ ನಗರದಲ್ಲಿ 16 ಸಾವಿರ ಪೊಲೀಸರು, 33 ಕೆಎಸ್‌ಆರ್‌ಪಿ, 32 ಸಿಎಆರ್‌ ತುಕಡಿಗಳನ್ನು ನಿಯೋಜಿಸಲಾಗಿದೆ. ಹೊಯ್ಸಳ ಮತ್ತು ಪೊಲೀಸ್‌ ಗಸ್ತು ಹೆಚ್ಚಳ ಮಾಡಲಾಗುತ್ತದೆ. ಮೂವರು ಹೆಚ್ಚುವರಿ ಪೊಲೀಸ್‌ ಆಯುಕ್ತರ ನೇತೃತ್ವದಲ್ಲಿ 12 ಡಿಸಿಪಿಗಳು ಭದ್ರತೆಯಲ್ಲಿ ತೊಡಗಲಿದ್ದಾರೆ ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ಪಂತ್‌ ತಿಳಿಸಿದರು.

ಶಾಂತಿ ಕದಡಿದರೆ ಬಂಧನ:

"

ಕರ್ನಾಟಕ ಬಂದ್‌ ಅಥವಾ ಪ್ರತಿಭಟನಾ ಮೆರವಣಿಗೆ ಸಂಬಂಧ ಯಾವುದೇ ಸಂಘಟನೆ ಇದುವರೆಗೂ ಅನುಮತಿ ಕೇಳಿಲ್ಲ. ಹೀಗಾಗಿ ಬಲವಂತವಾಗಿ ಅಂಗಡಿ ಮುಚ್ಚಿಸುವುದು, ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸುವುದು ಮಾಡುವುದು, ಅನಗತ್ಯವಾಗಿ ಸಮಾಜದಲ್ಲಿ ಶಾಂತಿ ಕದಡುವುದನ್ನು ಮಾಡಿದರೆ ಅಂತಹವರನ್ನು ಬಂಧಿಸಲಾಗುವುದು ಎಂದು ಆಯುಕ್ತರು ಎಚ್ಚರಿಸಿದ್ದಾರೆ.