ಕೊಡಗು: ಟೆನ್ಷನ್ ಬಿಟ್ಟು ಬಿಂದಾಸ್ ಆಗಿ ಆಟವಾಡಿದ ಪೊಲೀಸರು..!
ಸದಾ ಒತ್ತಡದಲ್ಲಿ ಕೆಲಸ ಮಾಡುವ ಪೊಲೀಸರು ತಮಗಾಗಿಯೇ ಏರ್ಪಡಿಸಿದ್ದ ಕ್ರೀಡಾಕೂಟದಲ್ಲಿ ಭಾಗವಹಿಸಿ ಸಖತ್ತಾಗಿ ಎಂಜಾಯ್ ಮಾಡಿದ್ರು
ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು(ನ.20): ಯಾವಾಗಲೂ ಕಾನೂನು ಸುವ್ಯವಸ್ಥೆ, ಕೇಸು, ತನಿಖೆ ಅಂತ ಸದಾ ಬ್ಯುಸಿಯಾಗಿರುತ್ತಿದ್ದ ಪೊಲೀಸರು ಆ ಎಲ್ಲಾ ಜಂಜಾಟಗಳನ್ನು ಮರೆತು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಸಖತ್ ಎಂಜಾಯ್ ಮಾಡಿದ್ರು. ಅವರ ಆ ಎಂಜಾಯ್ ಮೆಂಟ್ ಹೇಗಿತ್ತು ನೀವೆ ನೋಡಿ.
ಧಮ್ ಕಟ್ಟಿ ತದೇಕ ಚಿತ್ತದಿಂದ ಓಡುತ್ತಿರುವ ಪುರುಷ ಪೊಲೀಸ್ ಸಿಬ್ಬಂದಿ, ಹಗ್ಗ ಹಿಡಿದು ಎಳೆಯಿರಿ, ಎಳೆಯಿರಿ ಎಂದು ಉಸಿರು ಬಿಗಿಹಿಡಿದು ಹಗ್ಗ ಜಗ್ಗುತ್ತಿರುವ ಮಹಿಳಾ ಪೊಲೀಸರು, ಫೋರ್ ಹೊಡೆಯಲೇ ಬೇಕು ಎಂದು ಬ್ಯಾಟ್ ಬೀಸುತ್ತಿರುವ ಯುವ ಪೊಲೀಸ್ ಪಡೆ. ಕೈಯಲ್ಲಿ ಸೊಪ್ಪು ಹಿಡಿದು ಚಿಯರ್ ಮಾಡಿ ಕ್ರೀಡಾಪಟುಗಳನ್ನು ಹುರಿದುಂಬಿಸುತ್ತಿರುವ ಚಿಯರ್ ಬಾಯ್ಸ್. ಹೌದು ಇಂತಹ ಕ್ಷಣಗಳಿಗೆ ಸಾಕ್ಷಿಯಾಗಿದ್ದು, ಕೊಡಗು ಜಿಲ್ಲಾ ಪೊಲೀಸರಿಗೆ ನಡೆದ ಕ್ರೀಡಾಕೂಟ.
ಸರ್ಕಾರಿ ಶಾಲೆ ಮಕ್ಕಳ ಊಟಕ್ಕೆ ಹುಳುಬಿದ್ದ ಅಕ್ಕಿ, ಬೇಳೆ ಬಳಕೆ
ಕೊಡಗು ಜಿಲ್ಲೆಯ ಮಡಿಕೇರಿ ಎಸ್ಪಿ ಕಚೇರಿ ಮೈದಾನದಲ್ಲಿ. ಪೊಲೀಸರ ವಾರ್ಷಿಕ ಕ್ರೀಡಾಕೂಟದ ಜಲಕ್ ಇದು. ನಿತ್ಯ ಅಭ್ಯಾಸ ಮಾಡುವ ಪೊಲೀಸರು ಕ್ರೀಡಾಪಟುಗಳಂತೆ ಓಡಿದರು. ಜಿಲ್ಲೆಯ ಪೊಲೀಸರಿಗೆ ಕಳೆದ ಮೂರು ದಿನಗಳಿಂದ ವಾರ್ಷಿಕ ಕ್ರೀಟಾ ಕೂಟವನ್ನ ಏರ್ಪಡಿಸಲಾಗಿತ್ತು. ಈ ಕ್ರೀಡಾಕೂಟದಲ್ಲಿ ಮೂರು ದಿನಗಳಿಂದಲ್ಲೂ ಪೊಲೀಸರು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಕೊಡಗಿನ ಎಲ್ಲ ಪೊಲೀಸ್ ಠಾಣೆಗಳಿಂದ ಆಗಮಿಸಿದ ಆರಕ್ಷಕ ಸಿಬ್ಬಂದಿ ತಮ್ಮ ಕ್ರೀಡಾ ಪ್ರತಿಭೆಯನ್ನು ಅನಾವರಣಗೊಳಿಸಿದ್ರು. ಜಿಲ್ಲೆಯ 900 ಕ್ಕೂ ಹೆಚ್ಚು ಸಿಬ್ಬಂದಿ ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಎಂಜಾಯ್ ಮಾಡಿದ್ರು. ಯಾವುದೇ ಹಿರಿ, ಕಿರಿಯಾಧಿಕಾರಿ ಅನ್ನೋ ಬೇಧ ಭಾವವಿಲ್ಲದೆ ಸ್ಪೂರ್ತಿಯಿಂದಲೇ ಕ್ರೀಡೆಗಳಲ್ಲಿ ಭಾಗವಹಿಸಿ ಎಂಜಾಯ್ ಎಂದು ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಹೇಳಿದರು.
ಪೊಲೀಸ್ ಸಿಬ್ಬಂದಿಗೆ ಅಂತಾನೇ ಡಿಎಆರ್ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಏರ್ಪಡಿಸಲಾಗಿತ್ತು. ಕ್ರಿಕೆಟ್, ವಾಲಿಬಾಲ್, ಕಬ್ಬಡ್ಡಿ ಮತ್ತು ಟ್ರಾಕ್ ಅಂಡ್ ಫೀಲ್ಡ್ ಈವೆಂಟ್ ಗಳಲ್ಲಿ ಸ್ಪರ್ಧೆ ನಡೆದಿದ್ದು ಕೊಡಗು ಜಿಲ್ಲೆಯ ಪೆÇಲೀಸರು ಭಾಗವಹಿಸಿ ತಮ್ಮ ಪ್ರತಿಭೆಯನ್ನ ಅನಾವರಣಗೊಳಿಸಿದ್ರು. ವಿಶೇಷವಾಗಿ ಪುರುಷರು ಹಾಗೂ ಮಹಿಳಾ ಸಿಬ್ಬಂದಿಗೆ ಪ್ರತ್ಯೇಕವಾಗಿ ನಡೆದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಸ್ಪರ್ಧಿಗಳು ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಎರಡು ತಂಡಗಳ ನಡುವೆ ನಡೆದ ಹಗ್ಗ ಜಗ್ಗಟಾದ ಫೈನಲ್ ಪಂದ್ಯ ಎಲ್ಲ ಪ್ರೋಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು. ಕ್ರೀಡಾಕೂಟದಲ್ಲಿ ಪೊಲೀಸರ ದೈಹಿಕ ಮತ್ತು ತಾಂತ್ರಿಕ ಸಾಮರ್ಥ್ಯವನ್ನು ಇಲ್ಲಿ ಅನಾವರಣಗೊಳಿಸಿಕೊಂಡಿದ್ದೇವೆ ಎಂದು ಪೊಲೀಸ್ ಸಿಬ್ಬಂದಿ ಭವ್ಯ ಹೇಳಿದ್ದಾರೆ.
ಒಟ್ಟಿನಲ್ಲಿ ಸದಾ ಒತ್ತಡದಲ್ಲಿ ಕೆಲಸ ಮಾಡುವ ಪೊಲೀಸರು ತಮಗಾಗಿಯೇ ಏರ್ಪಡಿಸಿದ್ದ ಕ್ರೀಡಾಕೂಟದಲ್ಲಿ ಭಾಗವಹಿಸಿ ಸಖತ್ತಾಗಿ ಎಂಜಾಯ್ ಮಾಡಿದ್ರು. ಕ್ರೀಡಾಕೂಟದಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿ ಅಷ್ಟೇ ಅಲ್ಲ ಅವರ ಕುಟುಂಬದವರು ಭಾಗವಹಿಸಿ ಪೊಲೀಸ್ ಸಿಬ್ಬಂದಿಯ ಕ್ರೀಡಾ ಶಕ್ತಿ ಸಾಮರ್ಥ್ಯವನ್ನು ನೋಡಿ ಎಂಜಾಯ್ ಮಾಡುವುದರ ಜೊತೆಗೆ ಅವರಿಗೆ ಪ್ರೋತ್ಸಾಹ ನೀಡಿ ಹುರಿದುಂಬಿಸಿದರು.