Asianet Suvarna News Asianet Suvarna News

ಬೆಂಗಳೂರಿನಲ್ಲಿ ಇಂದು ಮೋದಿ ಭರ್ಜರಿ ಶೋ..!

ಒಂದು ಸಾರ್ವಜನಿಕ ಸಮಾವೇಶ ಸೇರಿದಂತೆ ಒಟ್ಟು ಐದು ಅಧಿಕೃತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ 

PM Narendra Modi Will Be Come to Bengaluru on November 12th grg
Author
First Published Nov 11, 2022, 3:30 AM IST

ಬೆಂಗಳೂರು(ನ.11):  ಪ್ರಧಾನಿ ನರೇಂದ್ರ ಮೋದಿ ಅವರು ಇಂದು(ಶುಕ್ರವಾರ) ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮಿಂಚಿನ ಸಂಚಾರ ಕೈಗೊಂಡು ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಬೆಳಗ್ಗೆ ದೆಹಲಿಯಿಂದ ಆಗಮಿಸುವ ಅವರು ಒಂದು ಸಾರ್ವಜನಿಕ ಸಮಾವೇಶ ಸೇರಿದಂತೆ ಒಟ್ಟು ಐದು ಅಧಿಕೃತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದು, ಮಧ್ಯಾಹ್ನ ತಮಿಳುನಾಡಿನ ಮದುರೈಗೆ ಪ್ರಯಾಣಿಸಲಿದ್ದಾರೆ. ಶುಕ್ರವಾರದ ಭೇಟಿ ಸೇರಿದಂತೆ ಕಳೆದ ಆರು ತಿಂಗಳಲ್ಲಿ ಪ್ರಧಾನಿ ಮೋದಿ ಅವರು ಮೂರು ಬಾರಿ ಕರ್ನಾಟಕಕ್ಕೆ ಭೇಟಿ ನೀಡಿದಂತಾಗಲಿದೆ. ಜೂನ್‌ನಲ್ಲಿ ಬೆಂಗಳೂರು ಮತ್ತು ಮೈಸೂರಿಗೆ ಎರಡು ದಿನಗಳ ಭೇಟಿಗಾಗಿ ಆಗಮಿಸಿದ್ದರು. ಬಳಿಕ ಸೆಪ್ಟೆಂಬರ್‌ನಲ್ಲಿ ಮಂಗಳೂರಿಗೆ ಆಗಮಿಸಿದ್ದರು. ಆಗಲೂ ಹತ್ತು ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದರು.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಪ್ರಧಾನಿ ಮೋದಿ ಅವರು ತಿಂಗಳಿಗೊಮ್ಮೆಯಾದರೂ ಕರ್ನಾಟಕಕ್ಕೆ ಭೇಟಿ ನೀಡಬೇಕು ಎಂಬ ಬೇಡಿಕೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಹಲವು ನಾಯಕರು ವರಿಷ್ಠರ ಮುಂದಿಟ್ಟಿದ್ದರು. ಅದು ಹಂತ ಹಂತವಾಗಿ ಅನುಷ್ಠಾನಗೊಳ್ಳುವಂತೆ ಕಾಣುತ್ತಿದೆ.

ಪ್ರಧಾನಿ ಮೋದಿ ನಾಳೆ ಬೆಂಗಳೂರಿಗೆ, 5 ಕಾರ್ಯಕ್ರಮ, ಹಲವು ಮಾರ್ಗಸಂಚಾರ ಬದಲು

ಬಿಜೆಪಿಯಲ್ಲಿ ಸಂಭ್ರಮ:

ಮೋದಿ ಅವರ ಈ ಬಾರಿಯ ಭೇಟಿ ಸಹಜವಾಗಿಯೇ ಆಡಳಿತಾರೂಢ ಬಿಜೆಪಿ ಪಾಳೆಯದಲ್ಲಿ ಸಂಭ್ರಮ ಮೂಡಿಸಿದೆ. ಅದಕ್ಕೆ ಮುಖ್ಯ ಕಾರಣ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ನಾಡಪ್ರಭು ಕೆಂಪೇಗೌಡ ಅವರ ಬೃಹತ್‌ ಕಂಚಿನ ಪ್ರತಿಮೆ ಅನಾವರಣಗೊಳಿಸುತ್ತಿರುವುದು. ಹಳೆ ಮೈಸೂರು ಭಾಗದಲ್ಲಿ ಪ್ರಬಲವಾಗಿರುವ ಒಕ್ಕಲಿಗ ಸಮುದಾಯದ ಒಲವು ಗಳಿಸಲು ಇದು ನೆರವಾಗಬಹುದು ಎಂಬ ನಿರೀಕ್ಷೆಯೂ ಇದೆ.

ಏನೇನು ಕಾರ್ಯಕ್ರಮ:

ಶುಕ್ರವಾರ ಬೆಳಗ್ಗೆ 6.20ಕ್ಕೆ ದೆಹಲಿಯಿಂದ ವಿಶೇಷ ವಿಮಾನದಿಂದ ಪ್ರಯಾಣ ಬೆಳೆಸಿ 9ಗಂಟೆಗೆ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಮೋದಿ ಅವರು ಆಗಮಿಸಲಿದ್ದಾರೆ. ಬಳಿಕ ಅಲ್ಲಿಂದ 9.45ಕ್ಕೆ ವಿಧಾನಸೌಧಕ್ಕೆ ರಸ್ತೆ ಮಾರ್ಗವಾಗಿ ಮೋದಿ ಅವರು ವಿಧಾನಸೌಧದ ಶಾಸಕರ ಭವನದ ಪ್ರವೇಶ ದ್ವಾರದಲ್ಲಿರುವ ಕನಕದಾಸ ಮತ್ತು ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಶುಕ್ರವಾರ ಕನಕ ಜಯಂತಿ ಇರುವುದರಿಂದ ಕನಕದಾಸ ಪ್ರತಿಮೆಗೆ ಮಾಲಾರ್ಪಣೆ ಮಾಡುತ್ತಿರುವುದು ಮಹತ್ವ ಪಡೆದುಕೊಂಡಿದೆ.

2 ರೈಲಿಗೆ ಚಾಲನೆ:

ನಂತರ 10.20ಕ್ಕೆ ರಸ್ತೆಯ ಮೂಲಕ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಬಂದು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಮತ್ತು ಭಾರತ್‌ ಗೌರವ ಕಾಶಿ ದರ್ಶನ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಅಲ್ಲಿನ ಕಾರ್ಯಕ್ರಮ ಮುಗಿಸಿ ರಸ್ತೆಯ ಮೂಲಕ ಎಎಫ್‌ಟಿಸಿಸಿ ಹೆಲಿಪ್ಯಾಡ್‌ಗೆ ಬಂದು ಅಲ್ಲಿಂದ ಹೆಲಿಕಾಪ್ಟರ್‌ ಮೂಲಕ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ.

ಏರ್ಪೋರ್ಟ್‌ ಉದ್ಘಾಟನೆ, ಕೆಂಪೇಗೌಡ ಪ್ರತಿಮೆ ಅನಾವರಣ:

11.30ರ ಸುಮಾರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್‌- 2 ಉದ್ಘಾಟನೆ ಮಾಡಲಿದ್ದಾರೆ. ತದನಂತರ ಮಧ್ಯಾಹ್ನ 12 ಗಂಟೆಗೆ ನಾಡಪ್ರಭು ಕೆಂಪೇಗೌಡ ಅವರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. 20 ನಿಮಿಷಗಳ ಕಾಲ ಪ್ರಧಾನಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಸಾರ್ವಜನಿಕ ಸಭೆ:

ಪ್ರತಿಮೆ ಅನಾವರಣ ಬಳಿಕ ರಸ್ತೆಯ ಮೂಲಕ ಸಾರ್ವಜನಿಕ ಸಮಾರಂಭಕ್ಕೆ 12.20ಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮಧ್ಯಾಹ್ನ 1.45ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ತಮಿಳುನಾಡಿನ ಮದುರೈಗೆ ಪ್ರಯಾಣ ಬೆಳೆಸಲಿದ್ದಾರೆ.

ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿಯವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯರಿಂದ ಪ್ರಶ್ನೆಗಳ ಸುರಿಮಳೆ

ಬೃಹತ್‌ ಸಮಾವೇಶಕ್ಕೆ 2 ಲಕ್ಷ ಜನ

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಮಾವೇಶಕ್ಕಾಗಿ ಬಿಜೆಪಿ ಸರ್ಕಾರ ಸಕಲ ಸಿದ್ಧತೆ ನಡೆಸಿದ್ದು, ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಹೊಂದಿದೆ. ದೂರದಿಂದ ಆಗಮಿಸುವ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗುತ್ತಿದೆ. ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಯಾವ್ಯಾವ ಕಾರ್ಯಕ್ರಮ?

ಬೆಳಿಗ್ಗೆ 9.45 ಕನಕದಾಸ, ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ
ಬೆಳಿಗ್ಗೆ 10.20 ವಂದೇಭಾರತ್‌, ಕಾಶಿ ದರ್ಶನ ರೈಲಿಗೆ ಚಾಲನೆ
ಬೆಳಿಗ್ಗೆ 11.30 ಕೆಂಪೇಗೌಡ ಏರ್ಪೋರ್ಚ್‌ನ ಟರ್ಮಿನಲ್‌ 2ಗೆ ಚಾಲನೆ
ಮಧ್ಯಾಹ್ನ 12.00 ಕೆಂಪೇಗೌಡ ಪ್ರತಿಮೆ ಅನಾವರಣ
ಮಧ್ಯಾಹ್ನ 12.20 ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ
 

Follow Us:
Download App:
  • android
  • ios