ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 10 ರಂದು ಬೆಂಗಳೂರಿನ ಮೆಟ್ರೋ ಹಳದಿ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಆರ್.ವಿ.ರೋಡ್ ನಿಂದ ಬೊಮ್ಮಸಂದ್ರವರೆಗಿನ ಈ ಮಾರ್ಗ 16 ನಿಲ್ದಾಣಗಳನ್ನು ಹೊಂದಿದೆ. ಮೆಟ್ರೋ ಫೇಸ್ 3 ಯೋಜನೆಗೂ ಶಂಕುಸ್ಥಾಪನೆ ನೆರವೇರಲಿದೆ.
ಬೆಂಗಳೂರು: ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ರಾಜಧಾನಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಬಹುನಿರೀಕ್ಷಿತ ಬೆಂಗಳೂರಿನ ಮೆಟ್ರೋ ಹಳದಿ ಮಾರ್ಗವನ್ನು ಇದೇ ಆಗಸ್ಟ್ 10ರಂದು ಮೋದಿ ಉದ್ಘಾಟಿಸಲಿದ್ದಾರೆ. ಇದೇ ದಿನ, ಮೆಟ್ರೋ ಫೇಸ್ 3 ಗೆ ಶಂಕು ಸ್ಥಾಪನೆ ಮಾಡುವ ನಿರೀಕ್ಷೆಯೂ ಇದೆ. ಈ ಕುರಿತು ಸಂಸದ ತೇಜಸ್ವಿ ಸೂರ್ಯ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಆರ್.ವಿ.ರೋಡ್ - ಬೊಮ್ಮಸಂದ್ರ
ಸಾಕಷ್ಟು ವರ್ಷಗಳಿಂದ ನಿರೀಕ್ಷೆಯಲ್ಲಿ ಇದ್ದ ಬೆಂಗಳೂರು ದಕ್ಷಿಣದ ಜನತೆಯ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ. ಸುಮಾರು 19.15 ಕಿಲೋಮೀಟರ್ ಉದ್ದದ ಈ ಹಳದಿ ಮಾರ್ಗವು ಆರ್.ವಿ.ರೋಡ್ ನಿಂದ ಬೊಮ್ಮಸಂದ್ರವರೆಗೆ ವಿಸ್ತರಿತವಾಗಿದ್ದು, ಸಿಲ್ಕ್ ಬೋರ್ಡ್ ಜಂಕ್ಷನ್ ಹಾಗೂ ಎಲೆಕ್ಟ್ರಾನಿಕ್ಸ್ ಸಿಟಿಯ ಮೂಲಕ ಸಂಪರ್ಕ ಕಲ್ಪಿಸುತ್ತದೆ. ಮಾರ್ಗದ ಒಟ್ಟು ನಿರ್ಮಾಣ ವೆಚ್ಚ ರೂ.5,056.99 ಕೋಟಿ.
16 ನಿಲ್ದಾಣಗಳೊಂದಿಗೆ ಆಧುನಿಕ ಹಳದಿ ಮಾರ್ಗ
ಈ ಮಾರ್ಗದಲ್ಲಿ ಒಟ್ಟು 16 ಮೆಟ್ರೋ ನಿಲ್ದಾಣಗಳಿವೆ. ಪ್ರತಿದಿನವೂ ಸುಮಾರು 25,000 ಪ್ರಯಾಣಿಕರು ಈ ಮಾರ್ಗದ ಪ್ರಯಾಣದ ನಿರೀಕ್ಷೆ ಹೊಂದಿದ್ದಾರೆ. ಪ್ರಾರಂಭದಲ್ಲಿ, ರೈಲುಗಳು ಪ್ರತಿ 25 ನಿಮಿಷಗಳ ಅಂತರದಲ್ಲಿ ಸಂಚರಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುರಕ್ಷತಾ ತಪಾಸಣೆ ಯಶಸ್ವಿ: ಸಾರ್ವಜನಿಕರಿಗೆ ಉದ್ಘಾಟನೆಯ ನಂತರ ಪ್ರವೇಶ
ಈ ಮೆಟ್ರೋ ಮಾರ್ಗಕ್ಕೆ ಅಗತ್ಯವಿದ್ದ ಕೇಂದ್ರ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತ ಎ.ಎಂ. ಚೌಧರಿ ಅವರು ಸುರಕ್ಷತಾ ತಪಾಸಣೆ ನಡೆಸಿ ಸುರಕ್ಷತೆಯ ವರದಿ ಸಲ್ಲಿಸಿದ್ದಾರೆ. ವರದಿಯಲ್ಲಿ ಕೆಲವು ಸಣ್ಣ ಪುಟ್ಟ ಷರತ್ತುಗಳನ್ನು ವಿಧಿಸಿ, BMRCL (ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್) ಅವುಗಳನ್ನು ಇತ್ತೀಚೆಗೇ ಸರಿಪಡಿಸುವ ಭರವಸೆ ನೀಡಿದೆ. ಹೀಗಾಗಿ ಈ ಮಾರ್ಗವನ್ನು ಆಗಸ್ಟ್ 10 ರಿಂದ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು.
ಮೆಟ್ರೋ ಫೇಸ್ 3: ಮುಂದಿನ ಹಂತದ ತಂತ್ರಜ್ಞಾನಕ್ಕೆ ಶಂಕುಸ್ಥಾಪನೆ
ಇದೇ ಸಂದರ್ಭದಲ್ಲಿ, ಮೆಟ್ರೋ ಫೇಸ್ 3 ಯೋಜನೆಗೂ ಪ್ರಧಾನಿಯವರು ಶಂಕುಸ್ಥಾಪನೆ ಮಾಡುವ ಸಾಧ್ಯತೆ ಇದೆ. ಈ ಹಂತವು 44.65 ಕಿಲೋಮೀಟರ್ ಉದ್ದವಿದ್ದು, ರೂ.15,611 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಈ ಮೂಲಕ, ಬೆಂಗಳೂರಿನ ಮೆಟ್ರೋ ಸಂಚಾರ ಇನ್ನಷ್ಟು ವ್ಯಾಪಕವಾಗಿ ವಿಸ್ತಾರಗೊಳ್ಳಲಿದೆ.
