ಎಲ್ಲ ವರ್ಗದ ನಾಯಕ ಪ್ರಧಾನಿ ನರೇಂದ್ರ ಮೋದಿ; ಸಚಿವ ಈಶ್ವರಪ್ಪ
ದೇಶದ ನೇತಾರ ಯಾರೆಂದು ಕೇಳಿದರೆ ನರೇಂದ್ರ ಮೋದಿ ಎಂದು ಇಡೀ ದೇಶದ ಜನತೆ ಹೇಳುತ್ತಿದ್ದಾರೆ. ಎಲ್ಲಾ ವರ್ಗದ ಜನರು ನರೇಂದ್ರ ಮೋದಿಯವರ ಆಡಳಿತ ಮೆಚ್ಚಿದ್ದಾರೆ ಎಂದು ಶಿವಮೊಗ್ಗ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಜೂ.08): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸರ್ಕಾರದ ಸಾಧನೆಗಳನ್ನು ಜನತೆಗೆ ತಿಳಿಸುವ ಅಭಿಯಾನಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ ನಗರದಲ್ಲಿ ಚಾಲನೆ ನೀಡಿದರು.
ಭಾನುವಾರ ಗುಂಡಪ್ಪ ಶೆಡ್-ಮಲ್ಲೇಶ್ವರ ನಗರದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ, ಮನೆ ಮನೆಗೆ ತೆರಳಿ ಸರ್ಕಾರದ ಸಾಧನೆಗಳ ಕುರಿತ ಮಾಹಿತಿಯುಳ್ಳ ಕರಪತ್ರಗಳನ್ನು ಸಾರ್ವಜನಿಕರಿಗೆ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ನೇತಾರ ಯಾರೆಂದು ಕೇಳಿದರೆ ನರೇಂದ್ರ ಮೋದಿ ಎಂದು ಇಡೀ ದೇಶದ ಜನತೆ ಹೇಳುತ್ತಿದ್ದಾರೆ. ಎಲ್ಲಾ ವರ್ಗದ ಜನರು ನರೇಂದ್ರ ಮೋದಿಯವರ ಆಡಳಿತ ಮೆಚ್ಚಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಎರಡನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಮೇ 30ಕ್ಕೆ ಒಂದು ವರ್ಷ ಕಳೆದಿದೆ. ಈ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ದೇಶದೆಲ್ಲೆಡೆ ನಡೆದಿದೆ. ದೇಶದ ಯುವಕರ ನೇತಾರರಾಗಿ ಹೊರ ಹೊಮ್ಮಿದ್ದಾರೆ. ದೇಶದ ರಕ್ಷಣೆ ವಿಚಾರದಲ್ಲಿ ದಿಟ್ಟಕ್ರಮ ಕೈಗೊಂಡಿದ್ದಾರೆ. ದೇಶದ ಬೆನ್ನೆಲುಬಾದ ರೈತರ ಸಂಕಷ್ಟಕ್ಕೆ ನೆರವಿನ ಹಸ್ತ ಚಾಚಿದ್ದಾರೆ. ಮೋದಿ ಆಡಳಿತ ಅವಧಿಯಲ್ಲಿ ಜಗತ್ತೇ ಭಾರತವನ್ನು ನಿಬ್ಬೆರಗಾಗಿ ನೋಡ ತೊಡಗಿದೆ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಎರಡೂವರೆ ತಿಂಗಳ ಬಳಿಕ ದೇವರ ದರ್ಶನ ಭಾಗ್ಯ..!
ಹಾಗೆಯೇ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಕೂಡ ಒಂದು ವರ್ಷ ಪೂರೈಸಿದೆ. ಈ ಅವಧಿಯಲ್ಲಿ ಸಾಕಷ್ಟುಜನಪರ ಕಾರ್ಯಕ್ರಮಗಳನ್ನು ರಾಜ್ಯದ ಜನತೆಗೆ ನೀಡಿದೆ. ರಾಜ್ಯ ಬಿಜೆಪಿ ಸರ್ಕಾರದ ಆಡಳಿತವನ್ನು ಜನತೆ ಮೆಚ್ಚಿಕೊಂಡಿದ್ದಾರೆ ಎಂದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ತುಂಬಿದೆ. ಹಾಗಾಗಿ ಮನೆ ಮನೆಗೆ ತೆರಳಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ಕರಪತ್ರ ಹಂಚಲಾಗುತ್ತಿದೆ. ಇದಕ್ಕೆ ಜನರು ನಿರೀಕ್ಷೆಗೂ ಮೀರಿ ಬೆಂಬಲ ನೀಡುತ್ತಿದ್ದಾರೆ ಎಂದರು.
ಪ್ರಪಂಚದಲ್ಲಿಯೇ ನಮ್ಮ ದೇಶವನ್ನು ಅತ್ಯುನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗಲಿದ್ದೇವೆ. ಇದಕ್ಕೆ ನಾವು ಪ್ರಧಾನಮಂತ್ರಿ ಅವರ ಜೊತೆಗಿದ್ದೇವೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು. ಇದೇ ಸಂದರ್ಭದಲ್ಲಿ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಅವರ ಸಾಧನೆಗಳ ಕಿರುಹೊತ್ತಗೆಯನ್ನು ಸಾರ್ವಜನಿಕರಿಗೆ ನೀಡಲಾಯಿತು.