ಪ್ರಧಾನಿ ನೇತೃತ್ವದಲ್ಲಿ ಜಾರಿಗೆ ತರಲಾದ ಗತಿ ಶಕ್ತಿ ಯೋಜನೆ ದೇಶದ ಮೂಲಸೌಕರ್ಯದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ ಎಂದು ನವಮಂಗಳೂರು ಬಂದರು ಪ್ರಾಧಿಕಾರ ಅಧ್ಯಕ್ಷ ಡಾ.ಎ.ವಿ.ರಮಣ ಹೇಳಿದರು. 

ಮಂಗಳೂರು (ಅ.21): ಪ್ರಧಾನಿ ನೇತೃತ್ವದಲ್ಲಿ ಜಾರಿಗೆ ತರಲಾದ ಗತಿ ಶಕ್ತಿ ಯೋಜನೆ ದೇಶದ ಮೂಲಸೌಕರ್ಯದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ ಎಂದು ನವಮಂಗಳೂರು ಬಂದರು ಪ್ರಾಧಿಕಾರ(ಎನ್‌ಎಂಪಿಎ) ಅಧ್ಯಕ್ಷ ಡಾ.ಎ.ವಿ.ರಮಣ ಹೇಳಿದರು. ನವಮಂಗಳೂರು ಬಂದರು ಪ್ರಾಧಿಕಾರ ಮುರ್ಮುಗೋವಾ ಮತ್ತು ಕೊಚ್ಚಿನ್‌ ಬಂದರು ಪ್ರಾಧಿಕಾರಗಳ ಸಹಯೋಗದಲ್ಲಿ ಗುರುವಾರ ಕೇಂದ್ರ ಬಂದರುಗಳು ಮತ್ತು ಶಿಪ್ಪಿಂಗ್‌ ಸಚಿವಾಲಯದ ಮಾರ್ಗಸೂಚಿ ಪ್ರಕಾರ ಹಮ್ಮಿಕೊಂಡ ಎರಡು ದಿನಗಳ ‘ಪಿಎಂ ಗತಿ ಶಕ್ತಿ ಮಲ್ಟಿ ಮೋಡಲ ಮ್ಯಾರಿಟೈಮ ರೀಜನಲ್ ಕಾನ್‌ಕ್ಲೇವ್‌ 2022’ ಉದ್ಘಾಟಿಸಿ ಮಾತನಾಡಿದರು. ಕಳೆದ ವರ್ಷ ಜಾರಿಯಾದ ಪಿಎಂ ಗತಿ ಶಕ್ತಿಯಡಿ 101 ಯೋಜನೆಗಳನ್ನು 56,831 ಕೋಟಿ ರು. ವೆಚ್ಚದಲ್ಲಿ ರೂಪಿಸಲಾಗಿದೆ. 4,423 ಕೋಟಿ ರು. ವೆಚ್ಚದ 13 ಯೋಜನೆಗಳು ಪೂರ್ಣಗೊಂಡಿವೆ. ಈ ಯೋಜನೆಗಳಿಂದ ಶೀಘ್ರವಾಗಿ ಸರಕು ವಿಲೇವಾರಿ ಸಾಧ್ಯವಾಗಲಿದೆ ಎಂದರು. ಆಧುನಿಕ ಮೂಲಸೌಕರ್ಯಗಳ ಅಭಿವೃದ್ಧಿಗೆ ಪಿಎಂ ಗತಿ ಶಕ್ತಿ ಯೋಜನೆ ರೂಪಿಸಲಾಗಿದೆ. ಯೋಜನೆಯಡಿ 25 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಜಾಲ ವಿಸ್ತರಣೆಯಾಗಲಿದೆ. ಲಾಜಿಸ್ಟಿಕ್ಸ್‌ ವೆಚ್ಚ ಕಡಿಮೆ ಮಾಡುವುದು ಸರ್ಕಾರದ ಗುರಿಯಾಗಿದೆ. ಮೂಲಸೌಕರ್ಯಗಳ ಅನುಷ್ಠಾನದ ವಿಷಯದಲ್ಲಿ ಸಮನ್ವಯತೆ ತರಲು ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ ಎಂದರು.

ಒಂದೇ ಡಿಜಿಟಲ್ ವೇದಿಕೆಯಲ್ಲಿ 16 ವಲಯಗಳಲ್ಲಿ ಅಭಿವೃದ್ಧಿ ಯೋಜನೆಗಳನ್ನು ತರಲಾಗುತ್ತದೆ. ರಸ್ತೆ, ರೈಲ್ವೆ, ವಾಯುಯಾನ, ಬಂದರು, ಸಾರ್ವಜನಿಕ ಸಾರಿಗೆ, ಜಲಮಾರ್ಗ ಮತ್ತು ಲಾಜಿಸ್ಟಿಕ್ಸ್‌ ಮೂಲಸೌಕರ್ಯಗಳು ಸರ್ಕಾರದ ಆದ್ಯತೆಯ ಕ್ಷೇತ್ರಗಳಾಗಿವೆ. ರಾಜ್ಯ ಸರ್ಕಾರಗಳು ಅಭಿವೃದ್ಧಿಪಡಿಸುತ್ತಿರುವ ಮೂಲಸೌಕರ್ಯ ಯೋಜನೆಗಳು ಕೂಡ ಪಿಎಂ ಗತಿಶಕ್ತಿ ಮಾಸ್ಟರ್‌ ಪ್ಲಾನ್‌ನ ಭಾಗವಾಗಿದೆ. ಯೋಜನೆಯು ಮುಂದಿನ 25 ವರ್ಷಗಳ ದೀರ್ಘಾವಧಿಯ ಗುರಿ ಸಾಧಿಸುವ ಉದ್ದೇಶ ಹೊಂದಿದೆ ಎಂದರು.

PM Gati Shakti: ಪಿಎಂ ಗತಿಶಕ್ತಿಗೆ ಬೆಂಗ್ಳೂರು ರೈಲ್ವೆ ವಿಭಾಗ ಆಯ್ಕೆ

2022-23ರಲ್ಲಿ ಪಿಎಂ ಗತಿಶಕ್ತಿ ಮಾಸ್ಟರ್‌ ಪ್ಲಾನ್‌ ಅಡಿಯಲ್ಲಿ ಸಾವಿರಾರು ಎಕ್ಸ್‌ಪ್ರೆಸ್‌ ವೇಗಳ ನಿರ್ಮಾಣವನ್ನು ತ್ವರಿತಗೊಳಿಸಲು ಸರ್ಕಾರ ನಿರ್ಧರಿಸಿದೆ. 2022-23ರ ವೇಳೆಗೆ 25,000 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಜಾಲ ವಿಸ್ತರಿಸಲು ಯೋಜನೆ ಹಾಕಿದೆ. ಬಹು ಮಾದರಿ ಲಾಜಿಸ್ಟಿಕ್ಸ್‌ ಪಾರ್ಕ್ಗಳನ್ನು ಸ್ಥಾಪಿಸಲು ಹೊರಟಿದೆ. ಈ ಎಲ್ಲ ಯೋಜನೆಗಳನ್ನು ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುತ್ತಿದೆ ಎಂದರು.

ದೇಶದ ಬಂದರುಗಳ ಸುಧಾರಣೆಗೆ 800ಕ್ಕೂ ಅಧಿಕ ಯೋಜನೆ: ಕೇಂದ್ರ ಸಚಿವ ಸರ್ಬಾನಂದ ಸೋನೊವಾಲ್‌

ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್‌ ಮೋಹನ್‌, ಮಲ್ಟಿಮೋಡೆಲ್‌ ಕನೆಕ್ಟಿವಿಟಿ ಕಮಿಟಿಯ ಅಧ್ಯಕ್ಷ ವಿನೀತ್‌ ಕುಮಾರ್‌, ಐಆರ್‌ಟಿಎಸ್‌ ವಿಶೇಷ ಅಧಿಕಾರಿ ಜಯಕುಮಾರ್‌, ಕೊಚ್ಚಿನ್‌ ಬಂದರು ಅಧ್ಯಕ್ಷ ವಿಕಾಸ ನಾಲ್ವಾರ್‌, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಡಿಪಿಐಐಟಿ ಲಾಜಿಸ್ಟಿಕ್‌ ವಿಭಾಗದ ಅಸೋಸಿಯೇಟ್‌ ಡೈರೆಕ್ಟರ್‌ ರಾಜೇಶ್‌ ಮೆನನ್‌, ಮುರ್ಮುಗೋವಾ ಬಂದರು ಅಧ್ಯಕ್ಷ ಜಿ.ಪಿ.ರೈ ಡಿ.,ಕೆಸಿಸಿಐ ನಿರ್ದೇಶಕ ಜೀತನ್‌ ಸಿಕ್ವೇರಿಯಾ ಮತ್ತಿತರರಿದ್ದರು.