ಬಸ್‌ ನಿಲ್ದಾಣದಲ್ಲಿ ಪ್ಲಾಸ್ಟಿಕ್‌ ಬಾಟಲಿ ಕ್ರಷಿಂಗ್‌ ಮಿಷನ್‌| ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಯಂತ್ರ ಅಳವಡಿಸಲು ಮುಂದಾದ ಖಾಸಗಿ ಕಂಪನಿ|ಕೆಎಸ್ಸಾರ್ಟಿಸಿಯಿಂದ ಜಾಗ, ವಿದ್ಯುತ್‌|ಪ್ರಯಾಣಿಕರಿಗೆ ಅರಿವು|

ಮೋಹನ ಹಂಡ್ರಂಗಿ

ಬೆಂಗಳೂರು(ನ.22): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಸಾರ್ಟಿಸಿ)ವು ನಗರದ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಪ್ರಥಮ ಬಾರಿಗೆ ಅತ್ಯಾಧುನಿಕ ತಂತ್ರಜ್ಞಾನದ ‘ಪ್ಲಾಸ್ಟಿಕ್‌ ಬಾಟಲಿ ಪುಡಿ ಮಾಡುವ ಯಂತ್ರ’ ಅಳವಡಿಸಲು ಮುಂದಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರಾಜಧಾನಿಯ ಹೃದಯ ಭಾಗದಲ್ಲಿ ಇರುವ ಕೆಂಪೇಗೌಡ ಬಸ್‌ ನಿಲ್ದಾಣ ಸದಾ ಪ್ರಯಾಣಿಕರ ದಟ್ಟಣೆಯಿಂದ ಕೂಡಿರುವ ಪ್ರಮುಖ ಸ್ಥಳ. ನಿತ್ಯ ಈ ಭಾಗದಲ್ಲಿ ಸಂಚರಿಸುವ ಲಕ್ಷಾಂತರ ಪ್ರಯಾಣಿಕರು ಬಳಸಿ ಬಿಸಾಡುವ ಪ್ಲಾಸ್ಟಿಕ್‌ ಬಾಟಲಿ ಭಾರೀ ಪ್ರಮಾಣದಲ್ಲಿ ಕಸದ ಬುಟ್ಟಿ ಸೇರುತ್ತಿವೆ. ಪರಿಸರಕ್ಕೆ ಮಾರಕವಾಗಿರುವ ಈ ಪ್ಲಾಸ್ಟಿಕ್‌ ಬಾಟಲಿಗಳನ್ನು ಪುನರ್‌ ಬಳಕೆಗೆ ಅನುವಾಗುವಂತೆ ಪುಡಿ ಮಾಡಿ ವಿಲೇವಾರಿ ಮಾಡಲು ಬಸ್‌ ನಿಲ್ದಾಣದಲ್ಲಿ ಬಾಟಲಿ ಪುಡಿ ಮಾಡುವ ಯಂತ್ರ ಅಳವಡಿಸಲು ನಿರ್ಧರಿಸಲಾಗಿದೆ ಎಂದು ಕೆಎಸ್ಸಾರ್ಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಸಿಎಸ್‌ಆರ್‌ ಫಂಡ್‌ ಬಳಕೆ:

ಅಂದಹಾಗೆ ಈ ಯೋಜನೆಗೆ ನಿಗಮವು ಯಾವುದೇ ಹಣ ವಿನಿಯೋಗಿಸುತ್ತಿಲ್ಲ. ‘ಗ್ರೀನ್‌ ರೀಸೈಕ್ಲೋ ಪ್ಲಾಸ್ಟ್‌ ಸೆಲ್ಯೂಷನ್‌ ಪ್ರೈವೇಟ್‌ ಲಿಮಿಟೆಡ್‌’ ಕಂಪನಿಯು ಸಾಮಾಜಿಕ ಹೊಣೆಗಾರಿಕೆ ನಿಧಿ(ಸಿಎಸ್‌ಆರ್‌ ಫಂಡ್‌)ಯಡಿ ಬಸ್‌ ನಿಲ್ದಾಣದಲ್ಲಿ ‘ಬಯೋಕ್ರಕ್ಸ್‌ ಜಿ ಮಿಷನ್‌’ ಹೆಸರಿನ ಈ ಪ್ಲಾಸ್ಟಿಕ್‌ ಬಾಟಲಿ ಪುಡಿ ಮಾಡುವ ಯಂತ್ರ ಅಳವಡಿಕೆಗೆ ಮುಂದೆ ಬಂದಿದೆ. ಕೆಎಸ್ಸಾರ್ಟಿಸಿ ಈ ಕಂಪನಿಗೆ ನಿಲ್ದಾಣದಲ್ಲಿ ಕೇವಲ ಜಾಗ ಮತ್ತು ವಿದ್ಯುತ್‌ ಮಾತ್ರ ಒದಗಿಸಲಿದೆ. ಪ್ರಾಯೋಗಿಕವಾಗಿ ನಿಲ್ದಾಣದಲ್ಲಿ ಒಂದು ಯಂತ್ರ ಮಾತ್ರ ಅಳವಡಿಸಲು ನಿರ್ಧರಿಸಲಾಗಿದೆ. ಸಾಧಕ-ಬಾಧಕ ಅಧ್ಯಯನ ಮಾಡಿ ಮುಂದಿನ ದಿನಗಳಲ್ಲಿ ನಿಗಮದ ಪ್ರಮುಖ ಬಸ್‌ ನಿಲ್ದಾಣಗಳಲ್ಲೂ ಈ ಯಂತ್ರ ಅಳವಡಿಸುವ ಉದ್ದೇಶವಿದೆ.

ದಿನಕ್ಕೆ 2400 ಬಾಟಲಿ ಪುಡಿ:

ಸುಮಾರು 3 ಲಕ್ಷ ವೆಚ್ಚದ ಈ ಯಂತ್ರವು ದಿನಕ್ಕೆ 2400 ಬಾಟಲಿ ಪುಡಿ ಮಾಡಬಹುದು. ಗರಿಷ್ಠ ಎರಡು ಲೀಟರ್‌ ಸಾಮರ್ಥ್ಯದ ಪ್ಲಾಸ್ಟಿಕ್‌ ಬಾಟಲಿಗಳನ್ನು ಕೆಲವೇ ಸೆಕೆಂಡ್‌ಗಳಲ್ಲಿ ಪುಡಿಗಟ್ಟಲಿದೆ. ಈ ಒಂದು ಯಂತ್ರದಿಂದ ವಾರ್ಷಿಕ 17.2 ಟನ್‌ ಪ್ಲಾಸ್ಟಿಕ್‌ ತ್ಯಾಜ್ಯ ಉತ್ಪಾದಿಸಿ, ಅದನ್ನು ಕಸದಬುಟ್ಟಿ ತಯಾರಿಕೆ, ಟಾಯ್‌ಲೆಟ್‌ ಕ್ಯಾಬಿನ್‌ ಮೊದಲಾದ ವಸ್ತುಗಳ ಉತ್ಪಾದನೆಗೆ ಮರುಬಳಕೆ ಮಾಡಬಹುದು.

ಪ್ರಯಾಣಿಕರಿಗೆ ಅರಿವು:

ಬಸ್‌ ನಿಲ್ದಾಣದಲ್ಲಿ ಈ ಯಂತ್ರ ಅಳವಡಿಕೆ ಬಳಿಕ ಯಂತ್ರ ಬಳಕೆ ಕುರಿತು ಪ್ರಯಾಣಿಕರಿಗೆ ಅರಿವು ಮೂಡಿಸಲಿದೆ. ನೀರು ಅಥವಾ ತಂಪು ಪಾನೀಯ ಕುಡಿದ ಬಳಿಕ ಖಾಲಿ ಬಾಟಲಿಗಳನ್ನು ಕಸದ ಬುಟ್ಟಿಗೆ ಹಾಕುವ ಬದಲು ಈ ಯಂತ್ರದೊಳಗೆ ಹಾಕುವಂತೆ ಜಾಗೃತಿ ಮೂಡಿಸಲಿದೆ.