ಹುಬ್ಬಳ್ಳಿ(ಜು.26): ಇಲ್ಲಿನ ಕಿಮ್ಸ್‌ನಲ್ಲಿ ಈ ವರೆಗೆ 13 ಕೊರೋನಾ ಸೋಂಕಿತರಿಗೆ ಪ್ಲಾಸ್ಮಾ ಥೆರಪಿಯನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದ್ದು, ಈಗಾಗಲೇ ಐವರು ಗುಣಮುಖ ಹೊಂದಿದ್ದಾರೆ.

ಕೋವಿಡ್‌-19 ಸೋಂಕಿತಗೆ ರಾಜ್ಯದಲ್ಲಿ ಮೊದಲು ಪ್ಲಾಸ್ಮಾ ಥೆರಪಿಯನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಮೈಲುಗಲ್ಲು ಸ್ಥಾಪಿಸಿದ ಕೀರ್ತಿ ಕಿಮ್ಸ್‌ ವೈದ್ಯರದ್ದು. ಗುಣಮುಖರಾದವರಿಗೆ ಪ್ಲಾಸ್ಮಾ ದಾನ ಮಾಡುವಂತೆ ಪ್ರೇರೇಪಿಸುವ ಸಲುವಾಗಿ ವಿಶೇಷ ತಂಡವನ್ನು ರಚಿಸಲಾಗಿದೆ. ಹೀಗಾಗಿ ಇಲ್ಲಿ ಪ್ಲಾಸ್ಮಾ ಥೆರಪಿ ನಿರಂತರವಾಗಿ ನಡೆದಿದೆ.

ಕಿಮ್ಸ್‌ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಮಾತನಾಡಿ, ಈಗಾಗಲೇ 13 ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ನಡೆಸಲಾಗಿದೆ. ಇದರಲ್ಲಿ 80 ವರ್ಷದ ಒಬ್ಬ ವೃದ್ಧರೂ ಸೇರಿದ್ದಾರೆ. ಥೆರಪಿಯಿಂದ ಅವರ ಸುಧಾರಣೆ ಕುರಿತು ಕೊಂಚ ಅನುಮಾನವಿದೆ. ಉಳಿದಂತೆ ಐವರು ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ. ಉಳಿದವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದರು.

ಧಾರವಾಡ: ನೌಕರನಿಗೆ ಅಂಟಿದ ಕೊರೋನಾ, ಟಾಟಾ ಮಾರ್ಕೊಪೊಲೊ ಕಂಪನಿ ಬಂದ್‌

ವಿಶೇಷ ತಂಡದ ಫಲ:

ಆರಂಭದಲ್ಲಿ ಪ್ಲಾಸ್ಮಾ ದಾನಕ್ಕೆ ಗುಣಮುಖರುವ ಸೋಂಕಿತರು ಹಿಂದೇಟು ಹಾಕಿದರು. ಯಾವಾಗ ಖಬರಸ್ತಾನ ಕಾಯುವ ವ್ಯಕ್ತಿ ಪ್ಲಾಸ್ಮಾ ದಾನ ಮಾಡಿದರೊ ಬಳಿಕ ಪರಿಸ್ಥಿತಿ ಬದಲಾಗಿದೆ. ಇದೀಗ ಗುಣಮುಖರು ದಾನಕ್ಕೆ ಮುಂದೆ ಬರುತ್ತಿದ್ದಾರೆ. ಇನ್ನು, ಸೋಂಕಿನಿಂದ ಅರಾಮಾಗುತ್ತಿದ್ದಂತೆ ಡಾ. ರಾಮು ಕೌಲಗುಡ್ಡ ಸೇರಿದಂತೆ ರಚಿಸಲಾದ ವಿಶೇಷ ತಂಡ ಪ್ಲಾಸ್ಮಾ ದಾನದ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ಇದು ಕೂಡ ಪ್ಲಾಸ್ಮಾ ಕೊರತೆ ನೀಗಲು ಕಾರಣವಾಗಿದೆ ಎಂದರು.

ಎಬಿ ಪಾಸಿಟಿವ್‌ ಅಗತ್ಯ:

ಪ್ಲಾಸ್ಮಾ ಚಿಕಿತ್ಸೆಯಲ್ಲಿ ಎಬಿ ಪಾಸಿಟಿವ್‌ ರಕ್ತದ ಗುಂಪಿನವರು ಯುನಿವರ್ಸಲ್‌ ಡೋನರ್ಸ್‌ ಎನಿಸಿಕೊಂಡಿದ್ದಾರೆ. ಆದರೆ ಇದೇ ಗುಂಪಿನವರ ಪ್ಲಾಸ್ಮಾ ಕೊರತೆ ನಮಗಿದೆ. ಈ ಗುಂಪಿನ ಪ್ಲಾಸ್ಮಾವನ್ನು ಯಾರಿಗೆ ಬೇಕಾದರೂ ನೀಡಬಹುದು. ಹೀಗಾಗಿ ಇದರ ಕುರಿತು ಪ್ರಯತ್ನ ನಡೆದಿದೆ ಎಂದು ಡಾ. ಅಂಟರತಾನಿ ಹೇಳುತ್ತಾರೆ.

13 ರೋಗಿಗಳಿಗೆ ಪ್ಲಾಸ್ಮಾ ಥೆರಪಿ ನಿರ್ವಹಿಸಿದ್ದೇವೆ. ಐವರು ಸಂಪೂರ್ಣ ಗುಣಮುಖವಾಗಿದ್ದಾರೆ. ಎಬಿ ಪಾಸಿಟಿವ್‌ ರಕ್ತದ ಗುಂಪಿನ ಪ್ಲಾಸ್ಮಾ ಅಗತ್ಯವಿದೆ ಎಂದು ಕಿಮ್ಸ್‌ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಅವರು ತಿಳಿಸಿದ್ದಾರೆ.