ಬಜೆಟ್ ಪೂರ್ವ ಸಭೆ: ಬೆಂಗಳೂರು ಅಭಿವೃದ್ಧಿಗೆ ಪ್ಲಾನಿಂಗ್ ಏನು..?
ಬೆಂಗಳೂರು ನಗರದ ಅಭಿವೃದ್ಧಿಗೆ ಕೈಗೊಳ್ಳಬಹುದಾದ ಯೋಜನೆಗಳ ಕುರಿತ ಬಜೆಟ್ ಪೂರ್ವಭಾವಿ ಸಭೆ ನಡೆದಿದೆ. ಹಲವು ವಿಚಾರಗಳನ್ನು ಕುರಿತು ಬೆಂಗಳೂರು ಅಭಿವೃದ್ಧಿ ಕುರಿತ ಬಜೆಟ್ ಪೂರ್ವ ಸಭೆಯಲ್ಲಿ ಚರ್ಚಿಸಲಾಗಿದೆ. ಏನೇನು ಚರ್ಚಿಸಲಾಯ್ತು..? ಎನೇನು ಪ್ಲಾನಿಂಗ್ ಇದೆ.? ಇಲ್ಲಿ ಓದಿ.
ಬೆಂಗಳೂರು(ಫೆ.05): ಸುಂದರ ಮತ್ತು ಸ್ವಸ್ಥ ನಗರಕ್ಕಾಗಿ ನೂತನ ಪಾರ್ಕಿಂಗ್ ನೀತಿ, ಹಳೆ ವಾಹನಗಳ ಸ್ಕ್ರಾಪ್ ಯಾರ್ಡ್, ಎಲ್ಲ ರಸ್ತೆಗಳಲ್ಲಿ ಕಡ್ಡಾಯ ಬೀದಿ ದೀಪ ಮತ್ತು ಉತ್ತಮ ಪಾದಚಾರಿ ರಸ್ತೆ ನಿರ್ಮಾಣ ಸೇರಿದಂತೆ ಹಲವು ವಿಚಾರಗಳನ್ನು ಕುರಿತು ಬೆಂಗಳೂರು ಅಭಿವೃದ್ಧಿ ಕುರಿತ ಬಜೆಟ್ ಪೂರ್ವ ಸಭೆಯಲ್ಲಿ ಚರ್ಚಿಸಲಾಯಿತು.
ಬೆಂಗಳೂರು ನಗರದ ಅಭಿವೃದ್ಧಿಗೆ ಕೈಗೊಳ್ಳಬಹುದಾದ ಯೋಜನೆಗಳ ಕುರಿತ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ನಗರದ ಪ್ರಮುಖ ರಸ್ತೆಗಳ ಅಭಿವೃದ್ಧಿ ಮತ್ತು ನಿರ್ಮಾಣ, ಬೃಹತ್ ನೀರುಗಾಲುವೆ ಅಭಿವೃದ್ಧಿ, ಸಂಚಾರ ವ್ಯವಸ್ಥೆ ಸುಧಾರಣೆ, ಸಮಗ್ರ ಟ್ರಾಫಿಕ್ ನಿರ್ವಹಣೆಗೆ ಏಕೀಕೃತ ನಿಯಂತ್ರಣ ಕೇಂದ್ರ, ಘನ ತ್ಯಾಜ್ಯ ನಿರ್ವಹಣೆ, ಮುಂದಿನ ಮೂರು ವರ್ಷಗಳಲ್ಲಿ 1200 ಕಿ.ಮೀ. ಪಾದಚಾರಿ ರಸ್ತೆ ಅಭಿವೃದ್ಧಿ ಹಾಗೂ ನಗರದ ಒಂಬತ್ತು ಕಡೆಗಳಲ್ಲಿ ವಿದ್ಯುತ್ ಚಿತಾಗಾರ ವ್ಯವಸ್ಥೆ ಕಲ್ಪಿಸುವ ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಆದಾಯ ಹೆಚ್ಚಳಕ್ಕೆ ಕ್ರಮ:
ಮುಂಬೈ ಮಾದರಿಯಲ್ಲಿ ನಗರದಲ್ಲೂ 24/7 ಶಾಪಿಂಗ್ ನಡೆಸಲು ಹಾಗೂ ವಸತಿಯೇತರ ಪ್ರದೇಶಗಳಲ್ಲಿ ಮತ್ತು ಮದ್ಯ ಪೂರೈಕೆ ಮಾಡದ ಮಳಿಗೆಗಳಲ್ಲಿ ಮಾತ್ರ 24/7 ವಹಿವಾಟು ನಡೆಸಲು ಅವಕಾಶ ಕಲ್ಪಿಸುವುದು. ಸಾರಿಗೆ ಆಧಾರಿತ ಅಭಿವೃದ್ಧಿ ನೀತಿ (ಟಿಓಡಿ)ಯನ್ನು ಬಿಎಂಆರ್‌ಸಿಎಲ್ ಜಾಲ ಹಾಗೂ ಬಿಎಂಟಿಸಿ ನಿಲ್ದಾಣಗಳ ಬಳಿ ಅನುಷ್ಠಾನಗೊಳಿಸುವ ಮೂಲಕ ಮೂಲಸೌಕರ್ಯ ಯೋಜನೆಗಳಿಗೆ ಬಂಡವಾಳ ಆಕರ್ಷಣೆ ಮಾಡಲಾಗುತ್ತದೆ ಎಂದರು.
ಪ್ರಸ್ತಾವನೆಗಳು:
ಬೆಂಗಳೂರು ಟ್ರಾನ್ಸಿಟ್ ಚಾಲೆಂಜ್ ಫಂಡ್ ಪ್ರಸ್ತಾವನೆಗೆ .50 ಕೋಟಿ ಬೇಡಿಕೆ, ಬೆಂಗಳೂರಿನಲ್ಲಿ ಗಾಳಿ ಗುಣಮಟ್ಟನಿಗಾ ಕೇಂದ್ರಗಳ ಸಂಖ್ಯೆ ದ್ವಿಗುಣಗೊಳಿಸಲು .52.5 ಕೋಟಿ, ಬಿಬಿಎಂಪಿ ವ್ಯಾಪ್ತಿಯ ಉದ್ಯಾನವನಗಳನ್ನು ಅರಣ್ಯೀಕರಣ ಮಾಡಿ, ನಗರದ ಸೌಂದರ್ಯ ಹೆಚ್ಚಿಸುವ ಜತೆಗೆ ವಾಯು ಮಾಲಿನ್ಯ ನಿಯಂತ್ರಿಸಲು .300 ಕೋಟಿ ಅನುದಾನಕ್ಕೆ ಮನವಿ, ಪಾಲಿಕೆ ವ್ಯಾಪ್ತಿಯಲ್ಲಿ ಕ್ರೀಡಾ ಮೂಲಭೂತ ಸೌಕರ್ಯಕ್ಕೆ .250 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
ಕೇಂದ್ರದಿಂದ ಲಾಟರಿ: GST ಬಿಲ್ ಕೇಳಿ ಪಡೆಯಿರಿ, 1 ಕೋಟಿ ರು. ಬಹುಮಾನ ಗೆಲ್ಲಿ!
ಸಭೆಯಲ್ಲಿ ಶಾಸಕರಾದ ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜು, ಎಸ್.ಆರ್.ವಿಶ್ವನಾಥ್, ಗೋಪಾಲಯ್ಯ, ಕೃಷ್ಣಪ್ಪ, ರಘು ಸೇರಿದಂತೆ ನಗರದ ಬಿಜೆಪಿ ಶಾಸಕರು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.