ಪಿರಿಯಾಪಟ್ಟಣ : ಗುರು- ಶಿಷ್ಯರ ನಡುವೆ ನಾಲ್ಕನೇ ಬಾರಿ ಕಾಳಗ!
ವಿಶ್ವ ಮಾರುಕಟ್ಟೆಯಲ್ಲಿ ಬಹುಬೇಡಿಕೆಯಲ್ಲಿರುವ ಉತ್ಕೃಷ್ಟದರ್ಜೆಯ ವರ್ಜೀನಿಯಾ ತಂಬಾಕು ಬೆಳೆಗೆ ಪ್ರಸಿದ್ಧಿಯಾಗಿದೆ ಪಿರಿಯಾಪಟ್ಟಣ. ಇಲ್ಲಿ ಕಳೆದ ನಾಲ್ಕು ಚುನಾವಣೆಗಳಿಂದಲೂ ಗುರು- ಶಿಷ್ಯರ ನಡುವೆಯೇ ಕಾಳಗ ನಡೆಯುತ್ತಿದೆ.
ಅಂಶಿ ಪ್ರಸನ್ನಕುಮಾರ್
ಮೈಸೂರು : ವಿಶ್ವ ಮಾರುಕಟ್ಟೆಯಲ್ಲಿ ಬಹುಬೇಡಿಕೆಯಲ್ಲಿರುವ ಉತ್ಕೃಷ್ಟದರ್ಜೆಯ ವರ್ಜೀನಿಯಾ ತಂಬಾಕು ಬೆಳೆಗೆ ಪ್ರಸಿದ್ಧಿಯಾಗಿದೆ ಪಿರಿಯಾಪಟ್ಟಣ. ಇಲ್ಲಿ ಕಳೆದ ನಾಲ್ಕು ಚುನಾವಣೆಗಳಿಂದಲೂ ಗುರು- ಶಿಷ್ಯರ ನಡುವೆಯೇ ಕಾಳಗ ನಡೆಯುತ್ತಿದೆ.
ಈಗಾಗಲೇ ಹಾಲಿ ಶಾಸಕ ಕೆ. ಮಹದೇವ್ ಅವರಿಗೆ ಮೊದಲ ಪಟ್ಟಿಯಲ್ಲಿಯೇ ಜೆಡಿಎಸ್ ಟಿಕೆಟ್ ಘೋಷಣೆಯಾಗಿದೆ. ಅದೇ ರೀತಿ ಮಾಜಿ ಸಚಿವ ಕೆ. ವೆಂಕಟೇಶ್ ಅವರಿಗೂ ಮೊದಲ ಪಟ್ಟಿಯಲ್ಲಿಯೇ ಟಿಕೆಟ್ ಸಿಕ್ಕಿದೆ. 2008ರ ಪೂರ್ವದಲ್ಲಿ ಈ ಇಬ್ಬರೂ ಒಂದೇ ಪಕ್ಷದಲ್ಲಿ ಗುರು- ಶಿಷ್ಯರಂತೆ ಇದ್ದವರು. ವೆಂಕಟೇಶ್ ಶಾಸಕರಾಗುತ್ತಿದ್ದರೆ, ಮಹದೇವ್ ಪಪಂ ಸದಸ್ಯಹಾಗೂ ಅಧ್ಯಕ್ಷರಾಗಿ ಕೆಲಸ ಮಾಡಿದವರು. ಸಿದ್ದರಾಮಯ್ಯ ಅವರೊಂದಿಗೆ ವೆಂಕಟೇಶ್ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಹೋದ ನಂತರ 2008 ರಲ್ಲಿ ಮಹದೇವ್ ಜೆಡಿಎಸ್ ಅಭ್ಯರ್ಥಿ. ಅತ್ಯಲ್ಪ ಮತಗಳ ಅಂತರದಿಂದ ಸೋಲು. 2013ರಲ್ಲಿ ಬಿಜೆಪಿ ಅಭ್ಯರ್ಥಿ ಸಣ್ಣಮೊಗೇಗೌಡರ ನಿಧನದಿಂದ ಚುನಾವಣೆ ಮಂದೂಡಲ್ಪಟ್ಟಿತು. ಹೀಗಾಗಿ ಮಹದೇವ್ ಮತ್ತೊಮ್ಮೆ ಕಡಿಮೆಯಿಂದ ಅಂತರದಲ್ಲಿ ಪರಾಭವ. 2018 ರಲ್ಲಿ ಜಯಭೇರಿ. ಈ ಬಾರಿ ಮತ್ತೊಮ್ಮೆ ಮುಖಾಮುಖಿ. ವೆಂಕಟೇಶ್ ಅವರಿಗೆ ಇದು 9ನೇ ಚುನಾವಣೆ. ಈವರೆಗೆ ಐದು ಬಾರಿ ಆಯ್ಕೆಯಾಗಿದ್ದು, ಮೂರು ಬಾರಿ ಸೋತಿದ್ದಾರೆ.
ಬಿಜೆಪಿಯಿಂದ ಮಾಜಿ ಸಚಿವ ಸಿ.ಎಚ್. ವಿಜಯಶಂಕರ್ ಸ್ಪರ್ಧಿಸಬಯಸಿದ್ದಾರೆ. ಮಾಜಿ ಶಾಸಕ ಎಚ್.ಸಿ. ಬಸವರಾಜು, ಕೌಲನಹಳ್ಳಿ ಸೋಮಶೇಖರ್, ಆರ್.ಟಿ.ಸತೀಶ್ ಮತ್ತಿತರರು ಆಕಾಂಕ್ಷಿಗಳು.
ಕ್ಷೇತ್ರದ ಇತಿಹಾಸ
ಪಿರಿಯಾಪಟ್ಟಣ ಕ್ಷೇತ್ರ ಮೊದಲ ಸಾರ್ವತ್ರಿಕ ಚುನಾವಣೆ ನಡೆದ 1952 ರಿಂದಲೂ ಅಸ್ತಿತ್ವದಲ್ಲಿದೆ. ಆಗ ಪಕ್ಷೇತರರಾದ ಎಸ್.ಎಂ. ಮರಿಯಪ್ಪ ಅವರು ಕಾಂಗ್ರೆಸ್‌ನ ಎಚ್.ಎಂ. ಚನ್ನಬಸಪ್ಪ ಅವರನ್ನು ಸೋಲಿಸಿ, ಆಯ್ಕೆಯಾಗಿದ್ದರು. 1957 ರಲ್ಲಿ ಕಾಂಗ್ರೆಸ್ ಎನ್.ಆರ್. ಸೋಮಣ್ಣ ಅವರು ಪಕ್ಷೇತರರಾದ ಟಿ. ವೆಂಕಟರಾಂ ಅವರನ್ನು ಸೋಲಿಸಿ, ಆಯ್ಕೆಯಾಗಿದ್ದರು. 1962 ರಲ್ಲಿ ಕಾಂಗ್ರೆಸ್‌ನ ಕೆ.ಎಂ. ದೇವಯ್ಯ ಅವರು ಸ್ವತಂತ್ರ ಪಾರ್ಟಿಯಿಂದ ಸ್ಪರ್ಧಿಸಿದ್ದ ಟಿ. ವೆಂಕಟರಾಂ ಅವರನ್ನು ಸೋಲಿಸಿ, ಆಯ್ಕೆಯಾಗಿದ್ದರು. 1967 ರಲ್ಲಿ ಪಕ್ಷೇತರರಾದ ಎಚ್.ಎಂ. ಚನ್ನಬಸಪ್ಪ ಅವರು ಕಾಂಗ್ರೆಸ್‌ನ ಕೆ.ಪಿ. ಕರಿಯಪ್ಪ ಅವರನ್ನು ಸೋಲಿಸಿ, ಆಯ್ಕೆಯಾಗಿದ್ದರು. 1972 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ ಎಚ್.ಎಂ. ಚನ್ನಬಸಪ್ಪ ಅವರು ಸಂಸ್ಥಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕೆ.ಪಿ. ಕರಿಯಪ್ಪ ಅವರನ್ನು ಸೋಲಿಸಿ, ಎರಡನೇ ಬಾರಿ ಆಯ್ಕೆಯಾಗಿ, ಸಚಿವರೂ ಆದರು. ಈ ಐದೂ ಚುನಾವಣೆಗಳಲ್ಲಿ ಇಬ್ಬರೇ ಅಭ್ಯರ್ಥಿಗಳಿದ್ದು, ಗೆಲುವಿಗಾಗಿ ನೇರ ಹಣಾಹಣಿ ನಡೆದಿರುವುದು ವಿಶೇಷ.
ಹ್ಯಾಟ್ರಿಕ್ ಸೋಲು
1978 ರಲ್ಲಿ ಜನತಾಪಕ್ಷದ ಕೆ.ಎಸ್. ಕಾಳಮರೀಗೌಡರು ಇಂದಿರಾ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಕೆ.ಪಿ. ಕರಿಯಪ್ಪ ಅವರನ್ನು ಸೋಲಿಸಿ, ಆಯ್ಕೆಯಾದರು. ಕರಿಯಪ್ಪ ಅವರಿಗೆ ಇದು ಹ್ಯಾಟ್ರಿಕ್ ಸೋಲು. ಎಲ್. ಆನಂದ್ ಪಕ್ಷೇತರರಾಗಿ ಗಮನ ಸೆಳೆದಿದ್ದರು. 1983ರ ವೇಳೆಗೆ ಕೆ.ಎಸ್. ಕಾಳಮರೀಗೌಡರು ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದರು. ಜನತಾಪಕ್ಷದಿಂದ ಸಿ. ರಾಮರಾಜೇ ಅರಸು, ಬಿಜೆಪಿಯಿಂದ ಡಾ.ಕೆ.ಆರ್. ತಮ್ಮಯ್ಯ ಕಣದಲ್ಲಿದ್ದರು. ಪಕ್ಷೇತರರಾದ ಕೆ. ಸಿದ್ದಪ್ಪ ಕೂಡ ಗಮನ ಸೆಳೆದಿದ್ದರು.
1985 ರಲ್ಲಿ ಕಾಳಮರೀಗೌಡರ ಬದಲಿಗೆ ಕಾಂಗ್ರೆಸ್ ಟಿಕೆಟ್ ಎಲ್. ಆನಂದ್ ಅವರ ಪಾಲಾಗಿತ್ತು. ಜನತಾಪಕ್ಷದ ಕೆ. ವೆಂಕಟೇಶ್ ಗೆದ್ದರು. ಎಚ್. ಸಣ್ಣಪ್ಪ ಪಕ್ಷೇತರರಾಗಿ ಗಮನ ಸೆಳೆದಿದ್ದರು. ಬಿಜೆಪಿಯಿಂದ ಕೆ.ಆರ್. ತಮ್ಮಯ್ಯ ಮತ್ತೆ ಸ್ಪರ್ಧಿಸಿದ್ದರು. 1989 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಕೆ.ಎಸ್. ಕಾಳಮರೀಗೌಡರು ಮೂರನೇ ಬಾರಿ ಗೆದ್ದರು. ಜನತಾಪಕ್ಷದ ಎಸ್.ಎಂ. ಅನಂತರಾಮು, ಜನತಾದಳದ ಕೆ. ವೆಂಕಟೇಶ್ ಕ್ರಮವಾಗಿ 2 ಮತ್ತು 3ನೇ ಸ್ಥಾನ ಗಳಿಸಿದ್ದರು. 1994 ರಲ್ಲಿ ಜನತಾದಳದ ಕೆ. ವೆಂಕಟೇಶ್ ಎರಡನೇ ಬಾರಿ ಗೆದ್ದರು. ಕಾಂಗ್ರೆಸ್‌ನಿಂದ ಕೆ.ಎಸ್. ಕಾಳಮರೀಗೌಡ, ಬಿಜೆಪಿಯಿಂದ ಚೌಡಯ್ಯ ಸ್ಪರ್ಧಿಸಿದ್ದರು. ವೆಂಕಟೇಶ್ ಅವರು ಜೆ.ಎಚ್. ಪಟೇಲರ ಸಂಪುಟದಲ್ಲಿ ಸಚಿವರಾದರು.
1999 ರಲ್ಲಿ ಬಿಜೆಪಿಯ ಎಚ್.ಸಿ. ಬಸವರಾಜು ಗೆದ್ದರು. ಕಾಂಗ್ರೆಸ್‌ನಿಂದ ಕೆ.ಎಸ್. ಕಾಳಮರೀಗೌಡ, ಜೆಡಿಎಸ್‌ನಿಂದ ಕೆ. ವೆಂಕಟೇಶ್ ಅಭ್ಯರ್ಥಿಗಳಾಗಿದ್ದರು. ಬಸವರಾಜು ಮಾಜಿ ಸಚಿವ ಎಚ್.ಎಂ. ಚನ್ನಬಸಪ್ಪ ಅವರ ಪುತ್ರ.
ಹ್ಯಾಟ್ರಿಕ್ ಗೆಲವು
2004 ರಲ್ಲಿ ಕೆ. ವೆಂಕಟೇಶ್ ಜೆಡಿಎಸ್ ಅಭ್ಯರ್ಥಿಯಾಗಿ ಗೆದ್ದರು. ಎಚ್.ಸಿ. ಬಸವರಾಜು ಜನತಾಪಕ್ಷದ ಅಭ್ಯರ್ಥಿಯಾಗಿದ್ದರು. ಕಾಂಗ್ರೆಸ್‌ನಿಂದ ಕೆ.ಎಸ್. ಚಂದ್ರೇಗೌಡ, ಬಿಜೆಪಿಯಿಂದ ಎಚ್.ಡಿ. ಗಣೇಶ್, ಬಿಎಸ್ಪಿಯಿಂದ ಕೃಷ್ಣ ಸ್ಪರ್ಧಿಸಿದ್ದರು. 2008 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ. ವೆಂಕಟೇಶ್ ಗೆದ್ದರು. ಜೆಡಿಎಸ್‌ನಿಂದ ಕೆ. ಮಹದೇವ್, ಬಿಜೆಪಿಯಿಂದ ಎಚ್.ಡಿ. ಗಣೇಶ್, ಬಿಎಸ್ಪಿಯಿಂದ ಬಿ.ಎಸ್. ರಾಮಚಂದ್ರ ಕಣದಲ್ಲಿದ್ದರು. 2013 ರಲ್ಲಿ ಕಾಂಗ್ರೆಸ್‌ನ ಕೆ. ವೆಂಕಟೇಶ್ ಸತತ ಮೂರು ಬಾರಿ ಗೆದ್ದು, ಹ್ಯಾಟ್ರಿಕ್ ಸಾಧನೆ ಮಾಡಿದರು. ಒಟ್ಟಾರೆ ಅವರದ್ದು ಐದನೇ ಗೆಲವು. ಜೆಡಿಎಸ್‌ನಿಂದ ಕೆ. ಮಹದೇವ್, ಬಿಜೆಪಿಯಿಂದ ಆರ್.ಟಿ. ಸತೀಶ್, ಬಿಎಸ್ಸಾರ್ ಕಾಂಗ್ರೆಸ್‌ನಿಂದ ಎಚ್.ಡಿ. ಗಣೇಶ್, ಕೆಜೆಪಿಯಿಂದ ಎಚ್.ಸಿ. ಬಸವರಾಜು ಸ್ಪರ್ಧಿಸಿದ್ದರು.
2018 ರಲ್ಲಿ ಜೆಡಿಎಸ್‌ನ ಕೆ. ಮಹದೇವ್ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸೋಲು ತಪ್ಪಿಸಿಕೊಂಡರು. ಕಾಂಗ್ರೆಸ್‌ನ ಕೆ. ವೆಂಕಟೇಶ್ ಸೋತು, ಸತತ ನಾಲ್ಕನೇ ಗೆಲವು ತಪ್ಪಿಸಿಕೊಂಡರು. ಬಿಜೆಪಿಯಿಂದ ಉದ್ಯಮಿ ಎಸ್. ಮಂಜುನಾಥ್ ಕಣದಲ್ಲಿದ್ದರು.
ಮತದಾರರ ವಿವರ
ಒಟ್ಟು ಮತದಾರರು-1,88,806
ಪುರುಷರು- 94,906
ಮಹಿಳೆಯರು- 93,896
ಇತರರು- 4
ಮತಗಟ್ಟೆಗಳು-235
2018ರ ಫಲಿತಾಂಶ
ಕೆ. ಮಹದೇವ- ಜೆಡಿಎಸ್- 77317, ಗೆಲವು
ಕೆ. ವೆಂಕಟೇಶ್- ಕಾಂಗ್ರೆಸ್- 69893
ಕೆ.ಎಸ್. ಮಂಜುನಾಥ್- ಬಿಜೆಪಿ- 3974
(ಇದಲ್ಲದೆ ಇನ್ನೂ 7 ಮಂದಿ ಪಕ್ಷೇತರರು ಕಣದಲ್ಲಿದ್ದರು)
ಸ್ವಾರಸ್ಯಗಳು
- ಮೊದಲ ಚುನಾವಣೆಯಿಂದಲೂ ಈ ಕ್ಷೇತ್ರ ಅಸ್ತಿತ್ವದಲ್ಲಿದೆ. ಮೊದಲ ಐದು ಚುನಾವಣೆಗಳಲ್ಲಿ ಇಬ್ಬರೇ ಅಭ್ಯರ್ಥಿಗಳಿದ್ದರು. ಕೆ.ಪಿ. ಕರಿಯಪ್ಪ ಅವರ ಸತತ ಮೂರು ಚುನಾವಣೆಗಳಲ್ಲಿ ಸೋತಿದ್ದಾರೆ.
- ಈ ಕ್ಷೇತ್ರದಿಂದ ಎರಡು ಬಾರಿ ಗೆದ್ದಿದ್ದ ಎಚ್.ಎಂ. ಚನ್ನಬಸಪ್ಪ ನೀರಾವರಿ ಸಚಿವರೂ ಆಗಿದ್ದರು. ಪಕ್ಕದ ಕೆ.ಆರ್. ನಗರ ಕ್ಷೇತ್ರದಲ್ಲಿ ಒಮ್ಮೆ ಗೆಲವು ಮತ್ತೊಮ್ಮೆ ಸೋಲು ಕಂಡವರು. ಅವರ ಪುತ್ರ ಎಚ್.ಸಿ. ಬಸವರಾಜು ಒಮ್ಮೆ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಚನ್ನಬಸಪ್ಪ ಅವರ ಪುತ್ರಿ ರಾಣಿ ಸತೀಶ್ ವಿಧಾನ ಪರಿಷತ್ ಸದಸ್ಯೆಯಾಗಿ ಉಪ ಸಭಾಪತಿ ಹಾಗೂ ಮಂತ್ರಿಯಾಗಿದ್ದರು. ಹಟ್ಟಿಚಿನ್ನದ ಗಣಿಯ ಅಧ್ಯಕ್ಷರೂ ಆಗಿದ್ದರು.
- ಕೆ.ಎಸ್. ಕಾಳಮರೀಗೌಡರು ಮೂರು ಬಾರಿ ಆಯ್ಕೆಯಾಗಿದ್ದರು. ಆದರೆ ಅವರ ಸಹೋದರ ಕೆ.ಎಸ್. ಚಂದ್ರೇಗೌಡ ಒಮ್ಮೆ ಸೋತರು. ಗೌಡರು ಮೂರು ಬಾರಿ ಗೆದ್ದರೂ ಮಂತ್ರಿಯಾಗಲಿಲ್ಲ.
- ಈ ಕ್ಷೇತ್ರದಿಂದ ಮೂರು ಬಾರಿ ಸತತವಾಗಿ ಗೆದ್ದು, ಹ್ಯಾಟ್ರಿಕ್ ಬಾರಿಸಿರುವ ಕೆ. ವೆಂಕಟೇಶ್ ಒಟ್ಟಾರೆ ಐದು ಬಾರಿ ಗೆದ್ದಿದ್ದು, ಜೆ.ಎಚ್. ಪಟೇಲರ ಸಂಪುಟದಲ್ಲಿ ಕಾಡಾ ಸಚಿವರಾಗಿದ್ದರು. ಅವರ ಪುತ್ರ ನಿತಿನ್ ಕಳೆದ ಜಿಪಂ ಚುನಾವಣೆಯಲ್ಲಿ ಅತ್ಯಲ್ಪ ಮತಗಳ ಅಂತರದಲ್ಲಿ ಸೋತರು.
- ಈ ಕ್ಷೇತ್ರದಲ್ಲಿ 1985 ರಿಂದ 1999 ರವರೆಗೆ ಕಿತ್ತೂರಿನ ದಾಯಾದಿಗಳಾದ ಕೆ.ಎಸ್. ಕಾಳಮರೀಗೌಡರು ಹಾಗೂ ಕೆ. ವೆಂಕಟೇಶ್ ನಡುವೆ ಕದನ. ಕಾಳಮರೀಗೌಡರ ನಿಧನ, ಕೆ. ವೆಂಕಟೇಶ್ ಕಾಂಗ್ರೆಸ್ ಸೇರ್ಪಡೆಯೊಂದಿಗೆ ಈ ಕದನ ನಿಂತಿತು. ವೆಂಕಟೇಶ್ ಕಾಂಗ್ರೆಸ್ ಸೇರ್ಪಡೆಯಿಂದಾಗಿ ಕಾಳಮರೀಗೌಡರ ಕುಟುಂಬದವರಿಗೆ ಟಿಕೆಟ್ ಸಿಗಲಿಲ್ಲ. ಗೌಡರ ಪುತ್ರಿ ಮಂಜುಳಾ ರಾಜ್ ಎರಡು ಬಾರಿ ಜಿಪಂ ಸದಸ್ಯೆಯಾಗಿದ್ದರು. ಅವರ ಇನ್ನೊರ್ವ ಸಹೋದರನ ಪುತ್ರ ಕೆ. ಎಸ್. ಮಂಜುನಾಥ್ ಜೆಡಿಎಸ್‌ನಿಂದ ಜಿಪಂ ಸದಸ್ಯರಾಗಿದ್ದರು.
- ಡಾ.ಕೆ.ಆರ್. ತಮ್ಮಯ್ಯ ಈ ಕ್ಷೇತ್ರದಿಂದ ಎರಡು ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಗಣನೀಯ ಮತಗಳನ್ನು ಪಡೆದಿದ್ದರು. ತಾಲೂಕಿನಲ್ಲಿ ಬಿಜೆಪಿಗೆ ಬುನಾದಿ ಹಾಕಿದವರಲ್ಲಿ ಅವರೂ ಒಬ್ಬರು. ಅವರ ಪುತ್ರಿ ಕೆ.ಟಿ. ಪದ್ಮಲತಾ 1987 ರಲ್ಲಿ ಜಿಪಂ ಸದಸ್ಯೆಯಾಗಿದ್ದರು.
- ಟಿ. ವೆಂಕಟರಾಂ, ಎಲ್. ಆನಂದ್, ರಾಮರಾಜೇ ಅರಸ್, ಚೌಡಯ್ಯ ಮತ್ತಿತರರು ಈ ಕ್ಷೇತ್ರದಿಂದ ಅದೃಷ್ಟಪರೀಕ್ಷೆ ಮಾಡಿದ್ದಾರೆ.
- ಪಿರಿಯಾಪಟ್ಟಣದಿಂದ ಈವರೆಗೆ ಮೂರು ಬಾರಿ ಸ್ಪರ್ಧಿಸಿರುವ ಎಚ್.ಡಿ. ಗಣೇಶ್ ಒಮ್ಮೆ ಜ್ಯೋತಿಷಿಗಳ ಸಲಹೆ ಮೇರೆಗೆ ಟಿ.ಡಿ. ಗಣೇಶ್ ಎಂದು ಬದಲಿಸಿಕೊಂಡಿದ್ದರೂ ಗೆಲ್ಲಲಿಲ್ಲ.
ಎಚ್.ಎಂ. ಚನ್ನಬಸಪ್ಪ. ಕೆ.ಎಸ್. ಕಾಳಮರೀಗೌಡ, ಕೆ. ವೆಂಕಟೇಶ್, ಎಚ್.ಸಿ. ಬಸವರಾಜು, ಕೆ. ಮಹದೇವ್
1952- ಎಸ್.ಎಂ. ಮರಿಯಪ್ಪ (ಪಕ್ಷೇತರ)
1957- ಎನ್.ಆರ್. ಸೋಮಣ್ಣ (ಕಾಂಗ್ರೆಸ್)
1962- ಕೆ.ಎಂ. ದೇವಯ್ಯ (ಕಾಂಗ್ರೆಸ್)
1967- ಎಚ್.ಎಂ. ಚನ್ನಬಸಪ್ಪ (ಪಕ್ಷೇತರ)
1972- ಎಚ್.ಎಂ. ಚನ್ನಬಸಪ್ಪ (ಕಾಂಗ್ರೆಸ್)
1978- ಕೆ.ಎಸ್. ಕಾಳಮರೀಗೌಡ (ಜನತಾಪಕ್ಷ)
1983- ಕೆ.ಎಸ್. ಕಾಳಮರೀಗೌಡ (ಕಾಂಗ್ರೆಸ್)
1985- ಕೆ. ವೆಂಕಟೇಶ್ (ಜನತಾಪಕ್ಷ)
1989- ಕೆ.ಎಸ್. ಕಾಳಮರೀಗೌಡ (ಕಾಂಗ್ರೆಸ್)
1994- ಕೆ. ವೆಂಕಟೇಶ್ (ಜನತಾದಳ)
1999- ಎಚ್.ಸಿ. ಬಸವರಾಜು (ಬಿಜೆಪಿ)
2004- ಕೆ. ವೆಂಕಟೇಶ್ (ಜೆಡಿಎಸ್)
2008, 2013- ಕೆ. ವೆಂಕಟೇಶ್ (ಕಾಂಗ್ರೆಸ್)
2018- ಕೆ. ಮಹದೇವ್ (ಜೆಡಿಎಸ್)