ಮಂಗಳೂರು(ಮೇ 14): ವಂದೇ ಭಾರತ್ ಮಿಷನ್ ಅಡಿಯಲ್ಲಿ ದುಬೈನಿಂದ ಮಂಗಳೂರಿಗೆ ವಿಮಾನ ಬಂದಿಳಿದಿದೆ. ಸುಮಾರು 150ಕ್ಕೂ ಹೆಚ್ಚು ಕನ್ನಡಿಗರನ್ನು ತಾಯ್ನಾಡಿಗೆ ಮರಳಿಸಿದ ವಿಮಾನದ ಪೈಲಟ್ ಅರಬ್ಬೀ ಸಮುದ್ರದ ಮೇಲಿಂದ ಹಾರುವಾಗ ಭಾವುಕರಾದ್ರು. ಅದೇ ಸಂದರ್ಭ ಅವರು ಪ್ರಯಾಣಿಕರನ್ನುದ್ದೇಶಿಸಿ ಮಾತನಾಡಿದ್ದಾರೆ.

ವಂದೇ ಭಾರತ್‌ ಮಿಷನ್‌ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು ನನಗೆ ಮತ್ತು ನನ್ನ ತಂಡಕ್ಕೆ ಹೆಮ್ಮೆ ಎನಿಸುತ್ತಿದೆ. ಇದು ಮಂಗಳವಾರ ರಾತ್ರಿ ದುಬೈನಿಂದ ಮಂಗಳೂರಿಗೆ ಆಗಮಿಸಿದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಐಎಕ್ಸ್‌- 384 ಮೊದಲ ವಿಮಾನದ ಕ್ಯಾಪ್ಟನ್‌ ಪ್ರತ್ಯೂಷ್‌ ವ್ಯಾಸ್‌ 35 ಸಾವಿರ ಅಡಿ ಎತ್ತರದಿಂದ ಕಾಕ್‌ಪಿಟ್‌ನಲ್ಲಿ ಯಾನಿಗಳನ್ನು ಉದ್ದೇಶಿಸಿ ಹೇಳಿದ ಮಾತು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ದುಬೈ ಯಾನಿಗಳ ಪರದಾಟ, ಜಿಲ್ಲಾಡಳಿತ ವಿರುದ್ಧ ಗರಂ

ದುಬೈನಿಂದ ಮಂಗಳವಾರ ಸಂಜೆ 5.10ಕ್ಕೆ ಹೊರಟು ವಿಮಾನ ಆಗಸದಲ್ಲಿ ಅರಬ್ಬಿ ಸಮುದ್ರ ಮಧ್ಯೆ ಬರುತ್ತಿದ್ದಾಗ ಪೈಲಟ್‌ ಪ್ರತ್ಯೂಷ್‌ ವ್ಯಾಸ್‌ ಮೊದಲು ಇಂಗ್ಲಿಷ್‌ನಲ್ಲಿ ಹಾಗೂ ನಂತರ ಕನ್ನಡದಲ್ಲಿ ಮಾತು ಮುಂದುವರಿಸಿದರು.

ಪ್ರೀತಿಯ ಸಹೋದರ, ಸಹೋದರಿಯರೇ, ನಿಮಗೆಲ್ಲ ನನ್ನ ನಮಸ್ಕಾರ, ಕನ್ನಡದಲ್ಲಿ ಮಾತನಾಡುವಾಗ ತಪ್ಪಿದರೆ ದಯವಿಟ್ಟು ಕ್ಷಮಿಸಿ. ನಿಮ್ಮದೇ ಏರ್‌ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುವ ನಿಮಗೆ ಸ್ವಾಗತ. ವಂದೇ ಭಾರತ್‌ ಮಿಷನ್‌ ವಿದೇಶಗಳಿಂದ ಭಾರತೀಯರನ್ನು ಕರೆತರಲು ಬೃಹತ್‌ ಕಾರ್ಯಾಚರಣೆ ನಡೆಸುತ್ತಿದೆ. ಇದರಲ್ಲಿ ನಾವೆಲ್ಲ ಭಾಗಿಗಳಾಗಿದ್ದೇವೆ. ಇಂತಹ ಸನ್ನಿವೇಶಕ್ಕೆ ಎಲ್ಲರೂ ಸಾಕ್ಷಿಯಾಗುತ್ತಿದ್ದೇವೆ. ಈ ಕಾರ್ಯಾಚರಣೆಯನ್ನು ದೇಶಕ್ಕಾಗಿ ನಡೆಸಲು ತುಂಬ ಸಂತಸವಾಗುತ್ತಿದೆ ಎಂದಿದ್ದಾರೆ

ಮಂಗಳೂರಿಗೆ ಬಂದಿಳಿದ ದುಬೈ ಕನ್ನಡಿಗರಿದ್ದ ಮೊದಲ ವಿಮಾನ, ತಾಯ್ನೆಲ ತಲುಪಿದಾಗ ಭಾವುಕ ಸೆಲ್ಫಿ

ಈ ವಿಮಾನ ಇನ್ನು ಒಂದೂವರೆ ತಾಸಿನಲ್ಲಿ ಮಂಗಳೂರಿಗೆ ತಲುಪಲಿದೆ. ಸಹೋದ್ಯೋಗಿಗಳು ಸೇವೆಗೆ ತಯಾರಾಗಿದ್ದಾರೆ. ಸುರಕ್ಷತೆ ಸಲುವಾಗಿ ಅವರೊಂದಿಗೆ ಸಹಕರಿಸಿ. ಮಂಗಳೂರಿನಲ್ಲೂ ಸಿಬ್ಬಂದಿ ಜೊತೆಗೆ ಸಹಕರಿಸಿ. ನಂತರ ನೀವು ಬಹುಬೇಗ ಮನೆಗೆ ತಲುಪಲಿದ್ದೀರಿ, ಧನ್ಯವಾದ, ಜೈಹಿಂದ್‌ ಎಂದು ಹೇಳಿದ್ದಾರೆ.