Asianet Suvarna News

ಕುಕ್ಕೆ ಗರ್ಭಗುಡಿಯಲ್ಲಿ ಫೋಟೋ, ವಿಡಿಯೋ ಮಾಡೋದು ನಿಷಿದ್ಧ

ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ದೇವರ ಮೂರ್ತಿಯ ಚಿತ್ರೀಕರಣಕ್ಕೆ ಹಿಂದಿನಿಂದಲೂ ತಡೆಯಿದೆ. ದೇವಳದ ಗರ್ಭಗುಡಿಯಲ್ಲಿ ನಡೆಯುವ ಸೇವೆಗಳನ್ನು ಛಾಯಾಗ್ರಹಣ ಹಾಗೂ ವೀಡಿಯೋ ಗ್ರಹಣ ಮಾಡುವುದು ದೇವಳದ ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ನಿಷಿದ್ಧವಾಗಿದೆ ಎಂಬ ಅಭಿಪ್ರಾಯವನ್ನು ಶ್ರೀ ದೇವಳದ ಪ್ರಧಾನ ಅರ್ಚಕರು ನೀಡಿದ್ದಾರೆ.

Photo video prohibited inside kukke temple
Author
Bangalore, First Published May 26, 2020, 9:20 AM IST
  • Facebook
  • Twitter
  • Whatsapp

ಸುಬ್ರಹ್ಮಣ್ಯ(ಮೇ 26): ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ದೇವರ ಮೂರ್ತಿಯ ಚಿತ್ರೀಕರಣಕ್ಕೆ ಹಿಂದಿನಿಂದಲೂ ತಡೆಯಿದೆ. ದೇವಳದ ಗರ್ಭಗುಡಿಯಲ್ಲಿ ನಡೆಯುವ ಸೇವೆಗಳನ್ನು ಛಾಯಾಗ್ರಹಣ ಹಾಗೂ ವೀಡಿಯೋ ಗ್ರಹಣ ಮಾಡುವುದು ದೇವಳದ ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ನಿಷಿದ್ಧವಾಗಿದೆ ಎಂಬ ಅಭಿಪ್ರಾಯವನ್ನು ಶ್ರೀ ದೇವಳದ ಪ್ರಧಾನ ಅರ್ಚಕರು ನೀಡಿದ್ದಾರೆ.

ಲಾಕ್‌ಡೌನ್‌ ಘೋಷಣೆಯಾದ ಬಳಿಕ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವನ್ನು ಮುಚ್ಚಲಾಗಿದ್ದು, ಭಕ್ತರಿಗೆ ಪ್ರವೇಶಾವಕಾಶ ನಿರ್ಬಂಧಿಸಲಾಗಿದೆ. ಇದೀಗ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೇ 26ರಿಂದ ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಆನ್‌ಲೈನ್‌ ಪೂಜಾ ವ್ಯವಸ್ಥೆಯನ್ನು ರಾಜ್ಯದ ಪ್ರಮುಖ ದೇವಳಗಳಲ್ಲಿ ಮಾಡುವುದಾಗಿ ಘೋಷಿಸಿದ್ದರು. ಈ ಕಾರಣದಿಂದ ಒಂದೊಮ್ಮೆ ಆನ್‌ಲೈನ್‌ ಪೂಜೆಗೆ ಅವಕಾಶ ಮಾಡಿಕೊಟ್ಟರೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಯಾವೆಲ್ಲ ಪೂಜೆಯನ್ನು ಮಾಡಲು ಅವಕಾಶವಿದೆ ಎಂದು ರಾಜ್ಯ ಧಾರ್ಮಿಕ ದತ್ತಿ ಆಯುಕ್ತರು ಪತ್ರ ಮುಖೇನ ವರದಿ ಕೇಳಿದ್ದರು. ಈ ಬಗ್ಗೆ ಕಾರ್ಯನಿರ್ವಹಣಾಧಿಕಾರಿಗಳು ಶ್ರೀ ದೇವಳದ ಪ್ರಧಾನ ಅರ್ಚಕರಲ್ಲಿ ವಿವರ ಪಡೆದುಕೊಂಡು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

 

ಒಳಾಂಗಣದಲ್ಲಿ ವೀಡಿಯೋಗ್ರಹಣ ನಿಷಿದ್ಧ: ಸಂಪ್ರದಾಯದ ಪ್ರಕಾರ ಗರ್ಭಗುಡಿಯ ಒಳಗೆ ನೆರವೇರುವ ಧಾರ್ಮಿಕ ವಿದಿ ವಿಧಾನಗಳನ್ನು ಮತ್ತು ಯಾವುದೇ ಪೂಜೆಯನ್ನು ಕ್ಯಾಮರಾ ಅಥವಾ ವೀಡಿಯೋ ಮೂಲಕ ಸೆರೆ ಹಿಡಿಯುವುದು ನಿಷಿದ್ಧವಾಗಿದೆ. ಅಲ್ಲದೆ ಶ್ರೀ ದೇವಳದ ಒಳಾಂಗಣ ಮತ್ತು ಗರ್ಭಗುಡಿ ಪ್ರದೇಶದಲ್ಲಿ ಛಾಯಾಗ್ರಹಣ ಮತ್ತು ವಿಡಿಯೋ ಗ್ರಹಣ ನಿಷಿದ್ಧವಾಗಿದೆ. ಗರ್ಭಗುಡಿ ಬಿಟ್ಟು ಹೊರಭಾಗದ ನಾಗಪ್ರತಿಷ್ಠಾ ಮಂಟಪದಲ್ಲಿ ನೆರವೇರುವ ನಾಗಪ್ರತಿಷ್ಠೆ ಮತ್ತು ಶ್ರೀ ದೇವಳದ ಶೃಂಗೇರಿ ಮಠದಲ್ಲಿ ನಡೆಯುವ ಆಶ್ಲೇಷಾ ಬಲಿ ಸೇವೆಗಳನ್ನು ಆನ್‌ಲೈನ್‌ನಲ್ಲಿ ನೇರ ಪ್ರಸಾರ ಮಾಡಿ ತೋರಿಸಬಹುದು ಎಂದು ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ಕಾರ್ಯನಿರ್ವಹಣಾಧಿಕಾರಿಗಳು ಕೇಳಿದ ಮಾಹಿತಿಗೆ ಅಭಿಪ್ರಾಯ ನೀಡಿದ್ದಾರೆ.

 

ಶ್ರೀ ದೇವಳದ ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ದೇವಳದ ಗರ್ಭಗುಡಿಯ ಒಳಗೆ ನಡೆಯುವ ವಿದಿವಿಧಾನಗಳ ವೀಡಿಯೋ ಅಥವಾ ಪೊಟೋ ತೆಗೆಯುವ ಪದ್ಧತಿ ಇಲ್ಲ. ದೇವರ ದರುಶನ, ಮಹಾಪೂಜೆ ಸೇರಿದಂತೆ ಗರ್ಭಗುಡಿಯ ಒಳಗೆ ನೆರವೇರುವ ಧಾರ್ಮಿಕ ವಿದಿ ವಿಧಾನಗಳನ್ನು ಮತ್ತು ಯಾವುದೇ ಪೂಜೆಯನ್ನು ಕ್ಯಾಮರಾ ಅಥವಾ ವೀಡಿಯೋ ಮೂಲಕ ಸೆರೆ ಹಿಡಿಯುವುದು ನಿಷಿದ್ಧವಾಗಿದೆ ಎಂದು ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯ ತಿಳಿಸಿದ್ದಾರೆ.

ಆನ್‌ಲೈನ್‌ ಲೈವ್‌ ವಿಡಿಯೋ ಮುಖಾಂತರ ಸೇವೆ ಗಳನ್ನು ಮಾಡುವ ಬಗ್ಗೆ ಸರಕಾರದಿಂದ ಯಾವುದೇ ಮಾರ್ಗದರ್ಶಿಗಳು ಬಂದಿಲ್ಲ. ಈ ಬಗ್ಗೆ ಕೇವಲ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಶ್ರೀ ದೇವಳದ ರೂಢಿ ಸಂಪ್ರದಾಯದ ಪ್ರಕಾರ ಯಾವೆಲ್ಲಾ ಸೇವೆಗಳನ್ನು ಆನ್‌ಲೈನ್‌ ಮೂಲಕ ವೀಕ್ಷಣೆಗೆ ವ್ಯವಸ್ಥೆ ಮಾಡಬಹುದು ಎಂದು ನಡೆಸಬಹುದು ಎಂದು ಶ್ರೀ ದೇವಳದ ಪ್ರಧಾನ ಅರ್ಚಕರಲ್ಲಿ ಮಾಹಿತಿ ಕೇಳಿ ಅವರ ಅಭಿಪ್ರಾಯವನ್ನು ಕಳಿಸಲಾಗಿದೆ. ಈ ಹಿಂದಿನಿಂದ ದೇವರ ಹಲವು ಸೇವೆಗಳು ಆನ್‌ಲೈನ್‌ ಪಾವತಿ ಮೂಲಕ ನಡೆಯುತ್ತಿತ್ತು. ಅದಕ್ಕೆ ಪ್ರಸಾದ ಕಳಿಸುವ ವ್ಯವಸ್ಥೆ ಇತ್ತು ಎಂದು ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್‌ ತಿಳಿಸಿದ್ದಾರೆ.

Follow Us:
Download App:
  • android
  • ios