ಮುಂಡರಗಿ(ಮೇ.04): ಲಾಕ್‌ಡೌನ್‌ ಸಂದರ್ಭದಲ್ಲಿ ಇಲ್ಲಿನ ಇಂಡಿಯನ್‌ ಆಯಿಲ್‌ ಡೀಲರ್‌ ಹೇಮಂತಗೌಡ ಪಾಟೀಲ ಖಾಸಗಿ ವಾಹನಗಳಿಗೆ ಪೆಟ್ರೋಲ್‌ ಹಾಕದಂತೆ ನೋಡಿಕೊಳ್ಳುವ ಮೂಲಕ ಕೊರೋನಾ ಹರಡದಂತೆ ಜಾಗ್ರತಿ ಮೂಡಿಸಿದ್ದಾರೆ. 

ಕೊರೋನಾ ಸಂದರ್ಭದಲ್ಲಿ ಯಾರೂ ಮನೆಯಿಂದ ಹೊರಗಡೆಗೆ ಓಡಾಡದೇ ಎಲ್ಲರೂ ಮನೆಯಲ್ಲಿಯೇ ಇರಬೇಕೆಂಬ ನಿಯಮವಿದ್ದರೂ ಕೆಲವರು ವಿನಾಕಾರಣ ತಮ್ಮ ಮೋಟರ್‌ ಸೈಕಲ್‌ ಹಾಗೂ ಕಾರು ಸೇರಿದಂತೆ ಇತರ ವಾಹನಗಳನ್ನು ತೆಗೆದುಕೊಂಡು ಪೆಟ್ರೋಲ್‌, ಡೀಸೆಲ್‌ ಹಾಕಿಸಿಕೊಂಡು ಸುಮ್ಮನೇ ಓಡಾಡುತ್ತಿದ್ದರು. ಅಂಥವರನ್ನು ತಡೆಯುವುದಕ್ಕಾಗಿ ನಿತ್ಯವೂ ಹೇಮಂತಗೌಡ ಪಾಟೀಲ ಹಾಗೂ ಅವರ ಪುತ್ರ ಅಂಕಿತ್‌ ಸೇರಿ ಕೈಯಲ್ಲಿ ಕೋಲು ಹಿಡಿದುಕೊಂಡು ಖಾಸಗೀ ವಾಹನಗಳು ಬಂಕ್‌ಗೆ ಬರದಂತೆ ನೋಡಿಕೊಳ್ಳುತ್ತಿದ್ದಾರೆ.

ರೋಣದಲ್ಲಿ ದೃಢಪಟ್ಟ ಮಹಾಮಾರಿ ಕೊರೋನಾ: ಹುಬ್ಬಳ್ಳಿಯಲ್ಲಿ ಆತಂಕ

ಕೇವಲ ಸರ್ಕಾರಿ ಇಲಾಖೆ ವಾಹನಗಳು, ಆಸ್ಪತ್ರೆ ವಾಹನಗಳು, ಪುರಸಭೆ ವಾಹನಗಳು, ಆಸ್ಪತ್ರೆಗೆ ರೋಗಿಗಳನ್ನು ಕರೆದುಕೊಂಡು ಹೋಗುವ ಖಾಸಗಿ ವಾಹನಗಳಿಗೆ ಹಾಗೂ ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಅವಶ್ಯ ಸೇವೆ ಸಲ್ಲಿಸುವವರಿಗೆ ಮಾತ್ರ ಪೆಟ್ರೋಲ್‌, ಡೀಸೆಲ್‌ ನೀಡುವ ಮೂಲಕ ವಿನಾಕಾರಣ ಓಡಾಡಿ ಕೊರೋನಾ ಹರಡುವುದನ್ನು ತಡೆಯುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ.

ವಾರಿಯರ್ಸ್‌ಗೆ ಊಟದ ವ್ಯವಸ್ಥೆ:

ಇಷ್ಟೇ ಅಲ್ಲದೇ ಕಾರ್ಮಿಕರ ದಿನವಾದ ಮೇ 1ರ ಶುಕ್ರವಾರ ಮಧ್ಯಾಹ್ನ ಹೇಮಂತಗೌಡ ಪಾಟೀಲ ಹಾಗೂ ಕುಟುಂಬ ಎಲ್ಲ ಪೊಲೀಸ್‌ ಸಿಬ್ಬಂದಿಗೆ, ಪೌರ ಕಾರ್ಮಿಕರಿಗೆ, ವೈದ್ಯರಿಗೆ ಊಟದ ವ್ಯವಸ್ಥೆ ಮಾಡುವ ಮೂಲಕ ನಾವೂ ನಿಮ್ಮೊಂದಿಗಿದ್ದೇವೆ ಎಂದು ಮಾನವೀಯತೆ ಮೆರೆದಿದ್ದಾರೆ. ಇಷ್ಟೇ ಅಲ್ಲ ತೆರೆಮರೆಯಲ್ಲಿ ಇನ್ನೂ ಅನೇಕ ಬಡವರಿಗೆ, ಕಾರ್ಮಿಕರಿಗೆ ಸಹಾಯ ಸಹಕಾರ ಮಾಡುತ್ತಿದ್ದಾರೆ.