ಮಡಿಕೇರಿ(ಮೇ 26): ಇತ್ತೀಚಿನ ದಿನಗಳಲ್ಲಿ ಗ್ರಾಮಸ್ಥರ ಸಾಕು ಶ್ವಾನಗಳು ದಿಢೀರ್‌ ನಾಪತ್ತೆಯಾಗುತ್ತಿದ್ದು, ಜನತೆ ಆತಂಕಗೊಂಡಿದ್ದಾರೆ. ಮಡಿಕೇರಿ ತಾಲೂಕಿನ ಮದೆನಾಡು, ಕಾಟಕೇರಿ, ಜೋಡುಪಾಲ, 2ನೇ ಮೊಣ್ಣಂಗೇರಿ ಮತ್ತಿತರ ವ್ಯಾಪ್ತಿಯಲ್ಲಿ ಸಾಕು ನಾಯಿಗಳನ್ನು ಚಿರತೆ ಹೊತ್ತೊಯ್ದಿರುವ ಬಗ್ಗೆ ಶಂಕೆ ವ್ಯಕ್ತಗೊಂಡಿದ್ದು, ನಾಯಿಗಳನ್ನು ಕಳೆದುಕೊಂಡ ಗ್ರಾಮಸ್ಥರು ತಮ್ಮ ಅಸಾಯಕತೆ ತೋಡಿಕೊಂಡಿದ್ದಾರೆ.

ಮದೆನಾಡು ವ್ಯಾಪ್ತಿಯಲ್ಲಿ ಕಾಡಿಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಕಳೆದ 25 ದಿನಗಳಲ್ಲಿ ಹತ್ತಾರು ಶ್ವಾನಗಳು ಕಾಣೆಯಾಗಿವೆ. ಸಮೀಪದ ಕಾಡಿನಿಂದ ಚಿರತೆ ಬರುತ್ತಿದ್ದು, ಆಹಾರಕ್ಕಾಗಿ ಶ್ವಾನಗಳನ್ನು ಹಿಡಿದುಕೊಂಡು ಹೋಗುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಈ ಹಿಂದೆ ಚಿರತೆ ಓಡಾಟವನ್ನು ವ್ಯಕ್ತಿಯೊಬ್ಬರು ಪ್ರತ್ಯಕ್ಷವಾಗಿ ಕಂಡಿದ್ದರು. ಸಾರ್ವಜನಿಕರು ಮುದ್ದಾಗಿ ಸಾಕಿದ್ದ ನಾಯಿಗಳು ಚಿರತೆಗೆ ಆಹಾರವಾಗುತ್ತಿರುವುದು ಅವರಲ್ಲಿ ತೀವ್ರ ನೋವುಂಟು ಮಾಡಿದೆ.

ಗ್ರಾಮಗಳಲ್ಲೂ ಡಿಕೆಶಿ ಪದಗ್ರಹಣ ಕಾರ್ಯಕ್ರಮಕ್ಕೆ ಸಿದ್ಧತೆ

ಮರದ ಮೇಲಿತ್ತು ಶ್ವಾನವೊಂದರ ಕಳೇಬರ: ಮದೆನಾಡಿನ ಗ್ರಾಮಸ್ಥರೊಬ್ಬರ ಮನೆಯಲ್ಲಿದ್ದ ಶ್ವಾನ ಕಳೆದ 20 ದಿನಗಳ ಹಿಂದೆ ಕಾಣೆಯಾಗಿತ್ತು. ಶ್ವಾನಕ್ಕಾಗಿ ಪಕ್ಕದ ಊರಿನಲ್ಲೂ ಹುಡುಕಾಟ ನಡೆಸಿದರೂ ಪತ್ತೆಯಾಗಲಿಲ್ಲ. ಅದೊಂದು ದಿನ ಶ್ವಾನವೊಂದನ್ನು ಚಿರತೆಯೊಂದು ಹೊತ್ತುಕೊಂಡು ಹೋಯಿತು ಎಂದು ಅಲ್ಲಿನ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮಾರನೇ ದಿನ ಶ್ವಾನವನ್ನು ಹುಡುಕಿಕೊಂಡು ಹೋಗುವಾಗ ಕಾಡಿನ ಮರವೊಂದರಲ್ಲಿ ಶ್ವಾನದ ಕಳೇಬರ ಪತ್ತೆಯಾಗಿದ್ದು, ಶ್ವಾನದ ದೇಹ ಅರ್ಧ ತಿಂದ ಸ್ಥಿತಿಯಲ್ಲಿತ್ತು. ಚಿರತೆಯೇ ಶ್ವಾನವನ್ನು ಹೊತ್ತೊಯ್ದು ತಿಂದಿದೆ ಎಂದು ಶಂಕಿಸಲಾಗಿದೆ.

ಪರಿಶೀಲನೆಗೆ ಆಗ್ರಹ:

ಈ ವ್ಯಾಪ್ತಿಯಲ್ಲಿ ಗ್ರಾಮಸ್ಥರ ಸಾಕು ಶ್ವಾನಗಳು ಕಾಣೆಯಾಗುತ್ತಿದೆ. ಈ ಭಾಗದಲ್ಲಿ ಮನೆಗಳು ದೂರ ದೂರ ಇರುವುದರಿಂದ ಚಿರತೆ ಹಾವಳಿಯು ಗ್ರಾಮಸ್ಥರಲ್ಲಿ ಭಯದ ವಾತಾವರಣ ಮೂಡಿಸಿದೆ. ಮನೆಗಳು ದೂರು ಇರುವುದರಿಂದ ಗ್ರಾಮಸ್ಥರು ಸುರಕ್ಷತೆಗಾಗಿ ನಾಯಿಗಳನ್ನು ಸಾಕುತ್ತಿದ್ದರು. ಆದರೆ ಇದೀಗ ಶ್ವಾನಗಳೇ ಕಾಣೆಯಾಗುತ್ತಿರುವುದರಿಂದ ಭಯ ಪಡುವಂತಾಗಿದೆ. ಇದರಿಂದಾಗಿ ಚಿರತೆ ಓಡಾಟ ಇದ್ದರೆ ಅರಣ್ಯ ಇಲಾಖೆಯವರು ಪರಿಶೀಲನೆ ನಡೆಸಿ ಅದನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸಹ್ಯಾದ್ರಿಯಲ್ಲಿ ಸೆನ್ಸಾರ್‌ ಆಧಾರಿತ ಸ್ಯಾನಿಟೈಸರ್‌ ತಯಾರಿ

ನಮ್ಮ ಮನೆಯಲ್ಲಿದ್ದ ಶ್ವಾನ ಕಾಣೆಯಾಗಿ 20 ದಿನಗಳು ಕಳೆದಿದೆ. ಪಕ್ಕದ ಊರಿನಲ್ಲಿ ಹುಡುಕಾಡಿದರೂ ಈ ವರೆಗೆ ಪತ್ತೆಯಾಗಿಲ್ಲ. ಎರಡನೇ ಮೊಣ್ಣಂಗೇರಿಯಲ್ಲಿ ಶ್ವಾನವನ್ನು ಚಿರತೆಯೊಂದು ಹೊತ್ತು ಹೋಯಿತು ಎಂದು ಅಲ್ಲಿನ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಾಟಿಕೇರಿಯಲ್ಲೂ ವಿಚಾರಿಸಿದ ಸಂದರ್ಭ ಅಲ್ಲಿನ ಸಾಕು ನಾಯಿಗಳು ಕಾಣೆಯಾಗಿವೆ ಎಂದು ನಿವಾಸಿಗಳು ಹೇಳಿದ್ದಾರೆ. ಇದರಿಂದ ಆತಂಕ ಉಂಟಾಗಿದೆ ಎಂದು ಮದೆನಾಡು ನಿವಾಸಿ ಸುನೀತಾ ಶೆಟ್ಟಿ ತಿಳಿಸಿದ್ದಾರೆ.

ನಮ್ಮ ಊರಿನಲ್ಲಿ ಇತ್ತೀಚೆಗೆ ಐದಾರು ನಾಯಿಗಳು ಕಾಣೆಯಾಗಿದೆ. ಚಿರತೆಯೊಂದು ಹಗಲು ವೇಳೆಗೆ ನಾಯಿಯನ್ನು ಹಿಡಿದುಕೊಂಡು ಕಾಡಿನತ್ತ ಕೊಂಡೊಯ್ದಿದೆ ಎನ್ನಲಾಗುತ್ತಿದೆ. ನಾಯಿಯನ್ನು ಹುಡುಕಾಡಿದರೂ ಸಿಗಲಿಲ್ಲ. ಈ ಬಗ್ಗೆ ಅರಣ್ಯಾಧಿ​ಕಾರಿಗಳಿಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ ಎಂದು 2ನೇ ಮೊಣ್ಣಂಗೇರಿ ನಿವಾಸಿ ಶೇಷಪ್ಪ ಹೇಳಿದ್ದಾರೆ.

ಮದೆನಾಡು ವ್ಯಾಪ್ತಿಯಲ್ಲಿ ಶ್ವಾನಗಳು ಕಾಣೆಯಾಗುತ್ತಿರುವ ಬಗ್ಗೆ ಈವರೆಗೆ ಇಲಾಖೆಗೆ ಯಾವುದೇ ದೂರು ಬಂದಿಲ್ಲ. ಆದ್ದರಿಂದ ಸ್ಥಳ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಡಿಆರ್‌ಎಫ್‌ಒ ಬಾಬು ತಿಳಿಸಿದ್ದಾರೆ.

-ವಿಘ್ನೇಶ್‌ ಎಂ. ಭೂತನಕಾಡು