Asianet Suvarna News Asianet Suvarna News

ಭಗವದ್ಗೀತೆ ಓದಿದರೆ ವ್ಯಕ್ತಿತ್ವ ವಿಕಸನ: ರಕ್ಷಣಾ ಸಚಿವ ರಾಜನಾಥ ಸಿಂಗ್‌

ಜ್ಞಾನ ಬಂಡಾರ ಆಗಿರುವ ಗೀತೆ ಯುವಕರಿಗೆ ಸ್ಫೂರ್ತಿ ಸೆಲೆ, ಜೀವನದಲ್ಲಿ ಅಳವಡಿಸಿಕೊಂಡರೆ ಸಮರ್ಪಕ ನಿರ್ಧಾರಕ್ಕೆ ಅನುಕೂಲ

Personality Development by Reading Bhagavad Gita Says Defence Minister Rajnath Singh grg
Author
First Published Dec 4, 2022, 8:30 AM IST

ಬೆಂಗಳೂರು(ಡಿ.04):  ಭಗವದ್ಗೀತೆಯನ್ನು ಸಮರ್ಪಕವಾಗಿ ಓದಿಕೊಂಡರೆ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಬೇರೆ ಕೃತಿಗಳನ್ನು ಓದುವ ಅಗತ್ಯ ಬರಲಾರದು ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಹೇಳಿದರು. ವಸಂತಪುರ ವೈಕುಂಠ ಬೆಟ್ಟದ ಇಸ್ಕಾನ್‌ ಶ್ರೀ ರಾಜಾಧಿರಾಜ ಗೋವಿಂದ ಮಂದಿರದಲ್ಲಿ ಗೀತಾ ಜಯಂತಿ ಹಿನ್ನೆಲೆಯಲ್ಲಿ ಶುಕ್ರವಾರ ‘ಗೀತಾ ದಾನ ಯಜ್ಞ ಮಹೋತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು. ಪಾಶ್ಚಿಮಾತ್ಯ ರಾಷ್ಟ್ರದಲ್ಲಿ ಸೆಲ್‌್ಫ ಹೆಲ್ಪ್‌ ಪುಸ್ತಕಗಳ ಓದುವುದು ಹೆಚ್ಚು. ಇವುಗಳನ್ನು ಓದುವುದರಿಂದ ವ್ಯಕ್ತಿಗತ ಸಮಸ್ಯೆ ನಿವಾರಿಸಿಕೊಂಡು ವಿಕಸನ ಹೊಂದಲು ಕಾರಣವಾಗುತ್ತದೆ ಎಂಬ ನಂಬಿಕೆಯಿದೆ. ಆದರೆ, ನನ್ನ ಪ್ರಕಾರ ನಾವು ಭಗವದ್ಗೀತೆ ಓದಿಕೊಂಡರೆ ಬೇರಾವುದೇ ಸೆಲ್ಪ್‌ ಹೆಲ್ಪ್‌ ಕೃತಿಗಳ ಓದುವ ಅಗತ್ಯ ಬರುವುದಿಲ್ಲ ಎಂದರು.

ಭಗವದ್ಗೀತೆಯನ್ನು ಕೇವಲ ಧಾರ್ಮಿಕ ಗ್ರಂಥ ಎಂದು ನೋಡಲಾಗಲ್ಲ. ಇದರಲ್ಲಿ ಜ್ಞಾನ ಭಂಡಾರದ ಗಂಗೆ ಅಡಗಿದೆ. ಯುವಕರಿಗೆ ಸ್ಫೂರ್ತಿಯ ಸೆಲೆಯಾಗುವ ವಿಚಾರಗಳಿವೆ. ಯುವ ಸಮುದಾಯ ಗೀತೆಯ ಮೌಲ್ಯಯುತ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸೂಕ್ತ ವೇಳೆಯಲ್ಲಿ ಸಮರ್ಪಕ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದರು.

CM Basavaraj Bommai: ಮೆಗಾ ಜವಳಿ ಪಾರ್ಕ್‌ಗೆ ಅನುದಾನ ಕೋರಿದ ಬೊಮ್ಮಾಯಿ

ಅನಾದಿಕಾಲದಿಂದಲೂ ಗೀತೆ ನಮ್ಮ ಪೂರ್ವಜರಿಗೆ ದಾರಿದೀಪ. ಅದರ ವ್ಯಾಖ್ಯಾನವೂ ಅನಂತವಾದುದು. ಗಾಂಧೀಜಿ, ಲೋಕಮಾನ್ಯ ತಿಲಕರು ತಮ್ಮದೇ ಆದ ದೃಷ್ಟಿಯಿಂದ ಗೀತೆಯನ್ನು ನೋಡಿದ್ದಾರೆ. ಭಗವದ್ಗೀತೆಯನ್ನು ಭಾರತ ಮಾತ್ರವಲ್ಲದೆ ಪ್ರಪಂಚದ ಹಲವು ದೇಶಗಳು ಒಪ್ಪಿ ಅಳವಡಿಸಿಕೊಂಡಿವೆ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ಸನಾತನ ಧರ್ಮವನ್ನು ಪಸರಿಸಲು ಇಸ್ಕಾನ್‌ ಹಮ್ಮಿಕೊಂಡಿರುವ ಧಾರ್ಮಿಕ ಕಾರ್ಯಗಳು ಹೆಚ್ಚು ಸಹಕಾರಿಯಾಗಿವೆ. ಕಳೆದ 25 ವರ್ಷದಲ್ಲಿ ಇಸ್ಕಾನ್‌ ಬೆಂಗಳೂರು ದೇಶ ಮಾತ್ರವಲ್ಲದೆ ಜಗತ್ತಿಗೆ ಭಗವದ್ಗೀತೆಯ ಕುರಿತಾದ ಸಂದೇಶಗಳನ್ನು ನೀಡುತ್ತಿದೆ. ಪ್ರಭುಪಾದರಿಂದಾಗಿ ಜಗತ್ತಿನಾದ್ಯಂತ ಶ್ರೀಕೃಷ್ಣನ ಭಕ್ತರು ರೂಪುಗೊಂಡಿರುವುದು ಅಚ್ಚರಿಯ ವಿಚಾರ ಎಂದರು.

ಇಸ್ಕಾನ್‌ ಮಧು ಪಂಡಿತ ದಾಸ ಮಾತನಾಡಿ, ಇಡೀ ತಿಂಗಳು ಗೀತಾದಾನ ಯಜ್ಞ ಮಹೋತ್ಸವ ನಡೆಯಲಿದೆ. ಈ ಅವಧಿಯಲ್ಲಿ ಇಸ್ಕಾನ್‌ನಿಂದ ಭಗವದ್ಗೀತೆಯ 1 ಲಕ್ಷ ಪ್ರತಿಗಳನ್ನು ಜನತೆಗೆ ವಿತರಿಸುವ ಗುರಿಯಿದೆ. ಗೀತೆಯ ಧ್ಯಾನ ರಾಷ್ಟ್ರವನ್ನು ಪರಿಪೂರ್ಣ ಪಥದತ್ತ ಕರೆದೊಯ್ಯಲು ಮಾರ್ಗದರ್ಶನ ನೀಡುತ್ತದೆ ಎಂದರು.

ಮುಖ್ಯಮಂತ್ರಿ ಬೊಮ್ಮಾಯಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಟಿ.ವಿ.ಮೋಹನದಾಸ್‌ ಪೈ, ಇಸ್ರೋದ ನಿರ್ದೇಶಕ ಡಾ.ಎಸ್‌.ಸೋಮನಾಥ, ಕಾಂತಾರ ಚಿತ್ರದ ನಾಯಕಿ ಸಪ್ತಮಿ ಗೌಡ ಸೇರಿ ಇತರರಿಗೆ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ಭಗವದ್ಗೀತೆಯ ಪ್ರತಿಯನ್ನು ನೀಡಿದರು.

ಕಂದಾಯ ಸಚಿವ ಆರ್‌.ಅಶೋಕ್‌, ಸಂಸದ ತೇಜಸ್ವಿ ಸೂರ್ಯ, ಶಾಸಕ ಎಂ.ಕೃಷ್ಣಪ್ಪ, ಕರ್ನಾಟಕ ಮತ್ತು ಕೇರಳ ಬ್ರಿಟಿಷ್‌ ಡೆಪ್ಯುಟಿ ಹೈಕಮಿಷನರ್‌ ಚಂದ್ರು ಅಯ್ಯರ್‌, ಕೆನಡಾದ ಚಂಡೀಗಡÜ ಕಾನ್ಸುಲೆಟ್‌ ಜನರಲ್‌ ಪ್ಯಾಟ್ರಿಕ್‌ ಹೇಬರ್ಚ್‌, ಗಾಯಕಿಯರಾದ ಎಸ್‌.ಐಶ್ವರ್ಯ ಮತ್ತು ಎಸ್‌.ಸೌಂದರ್ಯ ಉಪಸ್ಥಿತರಿದ್ದರು.

ಎಲ್ಲ ಸಮಸ್ಯೆಗೆ ಗೀತೆಯಲ್ಲಿ ಪರಿಹಾರ: ಬೊಮ್ಮಾಯಿ

ಜೀವನದ ಎಲ್ಲ ಸಮಸ್ಯೆಗೆ ಭಗವದ್ಗೀತೆಯಲ್ಲಿ ಪರಿಹಾರವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಇಸ್ಕಾನ್‌ನಿಂದ ನಡೆಯುತ್ತಿರುವ ಗೀತಾ ದಾನ ಯಜ್ಞ ಮಹತ್ವದ ಕಾರ್ಯ. ಕಷ್ಟಬಂದಾಗ ನಾವು ದೇವರ ಹಾಡು ಹಾಡುತ್ತೇವೆ. ಆದರೆ, ಭಗವದ್ಗೀತೆ ಎಂದರೆ ದೇವರೆ ಹಾಡಿದ ಹಾಡು. ಗೀತೆಯ ಪ್ರತಿ ಶ್ಲೋಕ, ಪ್ರತಿ ಪುಟದಲ್ಲಿ ಧರ್ಮದತ್ತವಾದ ಜೀವನದ ಸಾರವನ್ನು ಕಾಣಬಹುದು ಎಂದರು.

1 ಲಕ್ಷ ಭಗವದ್ಗೀತೆ ಪ್ರತಿ ಹಂಚಲಿರುವ ISKCON

ಭಾರತದ ಭಕ್ತಿ ಚಳವಳಿ ಶ್ರೇಷ್ಠವಾದುದು. ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಮಧ್ವಾಚಾರ್ಯರ, ಗೌತಮ ಬುದ್ಧರ ಕೊಡುಗೆ ಅಪಾರ. ಸ್ವಾತಂತ್ರ್ಯ ಹೋರಾಟದಲ್ಲೂ ಭಕ್ತಿ ಚಳವಳಿ ಪಾತ್ರ ಮಹತ್ವ ಪಡೆದಿದೆ. ಅವನತಿಯತ್ತ ಹೆಜ್ಜೆ ಹಾಕಿದ್ದ ನಮ್ಮ ಸಂಸ್ಕೃತಿ ಈಗ ಪುನರ್‌ಸ್ಥಾಪನೆ ಆಗುತ್ತಿದೆ. ಎಲ್ಲ ಧರ್ಮಗೃಂಥಗಳು ಕೊನೆಗೆ ಮಾನವನ ಅಭಿವೃದ್ಧಿಯನ್ನೇ ಹೇಳುತ್ತವೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.

ಕೃಷ್ಣನ ದರ್ಶನ ಪಡೆದ ಸಿಂಗ್‌

ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರನ್ನು ಪೂರ್ಣಕುಂಭ ಸ್ವಾಗತದ ಮೂಲಕ ಇಸ್ಕಾನ್‌ ಟೆಂಪಲ್‌ಗೆ ಬರಮಾಡಿಕೊಳ್ಳಲಾಯಿತು. ಅವರು ಮೊದಲು ಇಸ್ಕಾನ್‌ ಸಂಸ್ಥಾಪಕರಾದ ಭಕ್ತಿವೇದಾಂತ ಪ್ರಭುಪಾದ ಸ್ವಾಮಿ ಅವರ ದರ್ಶನ ಪಡೆದರು. ಬಳಿಕ ಶ್ರೀ ರಾಜಾಧಿರಾಜ ಗೋವಿಂದ ದೇವರ ದರ್ಶನಾಶೀರ್ವಾದ ಪಡೆದರು. ನಂತರ ದೇವಸ್ಥಾನ ಆವರಣದಲ್ಲಿರುವ ಸುದರ್ಶನ, ರಾಜಲಕ್ಷ್ಮಿ ಪದ್ಮಾವತಿ, ಲಕ್ಷ್ಮಿ ನರಸಿಂಹ ದೇವರಿಗೆ ವಂದಿಸಿದರು.

ಗೀತಾ ಜಯಂತಿ

ಜಯಂತಿ ಪ್ರಯುಕ್ತ ಸಂಗೀತ ವಿದ್ವಾಂಸ ವಿದ್ಯಾಭೂಷಣ ಅವರು ವಾಚಿಸಿರುವ ಭಗವದ್ಗೀತೆ, ಭಾವಾರ್ಥದ ವಿಡಿಯೋವನ್ನು ಸಚಿವ ರಾಜನಾಥ ಸಿಂಗ್‌ ಅವರು ಲೋಕಾರ್ಪಣೆ ಮಾಡಿದರು. ಕನ್ನಡ, ಇಂಗ್ಲಿಷ್‌, ಹಿಂದಿ ಸೇರಿ ಆರು ಭಾಷೆಯಲ್ಲಿನ ಅದರ ವ್ಯಾಖ್ಯಾನವನ್ನು ಬಿಡುಗಡೆ ಮಾಡಲಾಯಿತು. ಗೀತಾ ಜಯಂತಿ ಪ್ರಯುಕ್ತ ಇಸ್ಕಾನ್‌ ಮಂದಿರದ ಆವರಣದಲ್ಲಿ ಬೆಳಗ್ಗೆ ಹಾಗೂ ಸಂಜೆ 550ಕ್ಕೂ ಹೆಚ್ಚಿನ ಮಕ್ಕಳು ಗೀತೆಯ 700 ಶ್ಲೋಕಗಳನ್ನು ಪಠಿಸಿದರು. ಗೀತಾ ಜಯಂತಿ ಪ್ರಯುಕ್ತ ತಿರುಪತಿ ತಿಮ್ಮಪ್ಪನ ಮಾದರಿಯಲ್ಲಿಯೇ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಜತೆಗೆ ವಿಶೇಷವಾದ ಭಕ್ಷ್ಯಗಳನ್ನು ನೈವೇಧ್ಯ ಮಾಡಲಾಯಿತು. ಆಗಮಿಸಿದ್ದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
 

Follow Us:
Download App:
  • android
  • ios