ಅಕ್ರಮವಾಗಿ ಸ್ಫೋಟಕ ಸಾಮಗ್ರಿ ಸಾಗಾಟ: ಆರೋಪಿ ಸೆರೆ
ರಟ್ಟಿನ ಬಾಕ್ಸ್‌ನಲ್ಲಿ ಸ್ಫೋಟಕವನ್ನು ದ್ವಿಚಕ್ರವಾಹನದಲ್ಲಿ ಸಾಗಿಸುತ್ತಿದ್ದ ಆರೋಪಿ| ಸ್ಫೋಟಕ ಸಾಮಗ್ರಿಗಳನ್ನು ಪಡೆದು ಅವುಗಳನ್ನು ಕ್ವಾರಿಗಳಲ್ಲಿ ಬಳಸಲು ತೆಗೆದುಕೊಂಡು ಹೋಗುತ್ತಿದ್ದೆ ಎಂದು ತಿಳಿಸಿದ ಆರೋಪಿ| ಈ ಸಂಬಂಧ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು|
ಹಾವೇರಿ(ನ.08): ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಸ್ಫೋಟಕ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಜಾರ್ಖಂಡ ಮೂಲದ ವ್ಯಕ್ತಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜಾರ್ಖಂಡ್‌ನ ಅಜಯಕುಮಾರ ಯಾದವ (24) ಬಂಧಿತ ಆರೋಪಿ. ಈತ ಶುಕ್ರವಾರ ಮಧ್ಯಾಹ್ನ ಬ್ಯಾಡಗಿ ಠಾಣಾ ವ್ಯಾಪ್ತಿಯ ಛತ್ರದಿಂದ ಆಲಗೇರಿ ಕಡೆಗೆ ಹೋಗುವ ರಸ್ತೆಯಲ್ಲಿ ರಟ್ಟಿನ ಬಾಕ್ಸ್‌ನಲ್ಲಿ ಸ್ಫೋಟಕವನ್ನು ದ್ವಿಚಕ್ರವಾಹನದಲ್ಲಿ ಸಾಗಿಸುತ್ತಿದ್ದ. ಈ ಸಂದರ್ಭದಲ್ಲಿ ಪೊಲೀಸರು ಸಂಶಯಗೊಂಡು ವ್ಯಕ್ತಿಯನ್ನು ತಡೆದು ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಜಕಾಲುವೆ ಒತ್ತುವರಿ: ಮಾಜಿ ಸಚಿವ ಲಮಾಣಿ ಸೇರಿ 13 ಜನರಿಗೆ ನೋಟಿಸ್
ಆರೋಪಿ ಜಾರ್ಖಂಡ್‌ನ ಕೊಡೆರ್ಮಾ ತಾಲೂಕಿನ ಚೋಪ್ನಾದಿ ವಾಸಿಯಾಗಿದ್ದು, ವೆಂಕಟಾಪುರದ ಗುತ್ತಿಗೆದಾರ ಕುಮಾರ ಕೆ. ಕಬ್ಬೂರ ಅವರ ಕ್ರಷರ್ ಉಸ್ತುವಾರಿ ನೋಡಿಕೊಳ್ಳುವ ರಾಣಿಬೆನ್ನೂರಿನ ಮಾಲತೇಶ ಎಂಬವರಿಂದ ಸ್ಫೋಟಕ ಸಾಮಗ್ರಿಗಳನ್ನು ಪಡೆದು ಅವುಗಳನ್ನು ಕ್ವಾರಿಗಳಲ್ಲಿ ಬಳಸಲು ತೆಗೆದುಕೊಂಡು ಹೋಗುತ್ತಿದ್ದ ಎಂದು ತಿಳಿಸಿದ್ದಾನೆ.
ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದಾಳಿಯಲ್ಲಿ ಆಂತರಿಕ ಭದ್ರತಾ ವಿಭಾಗದ ಹಾವೇರಿ- ಗದಗ ಘಟಕದ ಪೊಲೀಸ್ ನಿರೀಕ್ಷಕರಾದ ಈರಯ್ಯಾ ಎಂ. ಮಠಪತಿ, ಸಿಬ್ಬಂದಿಗಳಾದ ಅನಿಲ್‌ಕುಮಾರ ಬಿಜಾಪುರ, ಎಂ.ಎಚ್. ಗುಡಗೂರ, ಸುನಿಲ್ ಹುಚ್ಚಣ್ಣವರ, ಶಿವಮೂರ್ತಿ ಕುರಿ, ದುರ್ಗಪ್ಪ ಕೊಡ್ಲೇರ ಭಾಗವಹಿಸಿದ್ದರು. ಹಿರಿಯ ಅಧಿಕಾರಿಗಳು ಈ ಕಾರ್ಯವನ್ನು ಶ್ಲಾಘಿಸಿದ್ದಾರೆ ಎಂದು ಆಂತರಿಕ ಭದ್ರತಾ ವಿಭಾಗದ ಉತ್ತರವಲಯದ ಉಸ್ತುವಾರಿ ಅಧಿಕಾರಿ ಡಿವೈಎಸ್‌ಪಿ ಅನಿಲ್‌ಕುಮಾರ ತಿಳಿಸಿದ್ದಾರೆ.