ಬೆಂಗಳೂರು(ಫೆ.01): ವಿದ್ಯಾರ್ಥಿಗಳಿಗೆ ನಕಲಿ ಪಾಸ್‌ ಮಾಡಿಕೊಡುತ್ತಿದ್ದ ಸ್ಟುಡಿಯೋ ಮಾಲೀಕನನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯ ನಿವಾಸಿ ಸ್ಡುಡಿಯೋ ಮಾಲೀಕ ಮಧು (29) ಬಂಧಿತ. ಆರೋಪಿ ಮಧು ಕೆಲ ವರ್ಷಗಳಿಂದ ಅನ್ನಪೂರ್ಣೇಶ್ವರಿ ನಗರದಲ್ಲಿ ಎಂ.ಆರ್‌.ಡಿಜಿಟಲ್‌ ಸ್ಟುಡಿಯೋ ಹೊಂದಿದ್ದಾನೆ. ಸುಲಭವಾಗಿ ಹಣ ಮಾಡುವ ಉದ್ದೇಶದಿಂದ ಆರೋಪಿ ಪ್ಲಾಸ್ಟಿಕ್‌ ಕಾರ್ಡ್‌ಗೆ ಬಿಎಂಟಿಸಿ ಪಾಸ್‌ನಂತೆ ನಕಲಿ ಪಾಸ್‌ ಮಾಡಿ ಕೊಡುತ್ತಿದ್ದ ಎಂದು ಪೊಲೀಸರು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ವಿದ್ಯಾರ್ಥಿಯೊಬ್ಬ ಚೌಡೇಶ್ವರಿನಗರ ಪೈಪ್‌ಲೈನ್‌ನ ಬಸ್‌ ನಿಲ್ದಾಣದಲ್ಲಿ ಬಿಎಂಟಿಸಿ ಬಸ್‌ ಹತ್ತಿದ್ದು, ನಿರ್ವಾಹಕನಿಗೆ ವಿದ್ಯಾರ್ಥಿ ಪಾಸ್‌ ತೋರಿಸಿದ್ದ. ಅನುಮಾನಗೊಂಡ ನಿರ್ವಾಹಕ ವಿದ್ಯಾರ್ಥಿ ಬಸ್‌ ಪಡೆದು ಬಿಎಂಟಿಸಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಈ ವೇಳೆ ವಿದ್ಯಾರ್ಥಿ ಬಳಿ ಇದ್ದಿದ್ದು, ನಕಲಿ ಪಾಸ್‌ ಎಂಬುದು ಬಯಲಾಗಿದೆ. ಈ ಬಗ್ಗೆ ವಿದ್ಯಾರ್ಥಿಯನ್ನು ವಿಚಾರಿಸಿದಾಗ ದರ್ಶನ್‌ ಎಂಬುವರು ಹೇಳಿದಂತೆ ಅನ್ನಪೂರ್ಣೇಶ್ವರಿನಗರದಲ್ಲಿರುವ ಎಂ.ಆರ್‌.ಡಿಜಿಟಲ್‌ ಸ್ಟುಡಿಯೋದಲ್ಲಿ ಮಾಡಿಸಿದ್ದಾಗಿ ಬಾಯ್ಬಿಟ್ಟಿದ್ದ. ಈ ನಕಲಿ ಪಾಸ್‌ ಮಾಡಿ ಕೊಡಲು 250 ಪಡೆಯುತ್ತಿದ್ದ.

ಬಿಎಂಟಿಸಿ ಸಂಸ್ಥೆಗೆ ವಂಚಿಸಿ ಆರ್ಥಿಕ ನಷ್ಟ ಮಾಡಿ ಸರ್ಕಾರಿ ದಾಖಲೆ ನಕಲು ಮಾಡಿರುವ ಎಂ.ಆರ್‌.ಡಿಜಿಟಲ್‌ ಸ್ಟುಡಿಯೋ ಮಾಲೀಕನ ವಿರುದ್ಧ ಕ್ರಮಕೈಗೊಳ್ಳುವಂತೆ ದೂರು ನೀಡಿದ್ದರು, ಅದರಂತೆ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಅವರ ಮೇಲೆ ಎಫ್‌ಐಆರ್‌ ದಾಖಲಿಸಿಲ್ಲ ಪೊಲೀಸರು ಮಾಹಿತಿ ನೀಡಿದರು.