ಕೊರೋನಾ ವಾರಿಯರ್‌ ಆಶಾ ಕಾರ್ಯಕರ್ತೆ ಬಳಿ ಅನುಚಿತ ವರ್ತನೆ|ವ್ಯಕ್ತಿಯೊಬ್ಬನ ಬಂಧನ|ಲಗ್ಗೆರೆಯ ನರಸಿಂಹಯ್ಯ ಲೇಔಟ್‌ ನಿವಾಸಿ ಧನಂಜಯ್ಯ ಬಂಧಿತ ಆರೋಪಿ| ಆಶಾ ಕಾರ್ಯಕರ್ತೆ ಶಶಿಕಲಾ ಎಂಬುವರು ಕೊಟ್ಟ ದೂರಿನ ಮೇರೆಗೆ ಆರೋಪಿಯನ್ನು ಬಂಧನ|

ಬೆಂಗಳೂರು(ಏ.24): ಆಶಾ ಕಾರ್ಯಕರ್ತೆ ಬಳಿ ಅನುಚಿತ ವರ್ತನೆ ತೋರಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ನಂದಿನಿ ಲೇಔಟ್‌ ಪೊಲೀಸರು ಬಂಧಿಸಿದ್ದಾರೆ.

ಲಗ್ಗೆರೆಯ ನರಸಿಂಹಯ್ಯ ಲೇಔಟ್‌ ನಿವಾಸಿ ಧನಂಜಯ್ಯ ಬಂಧಿತ. ಆಶಾ ಕಾರ್ಯಕರ್ತೆ ಶಶಿಕಲಾ ಎಂಬುವರು ಕೊಟ್ಟ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಫುಡ್‌ ಡೆಲಿವರಿ ನೆಪದಲ್ಲಿ ಎರಡು ತಲೆ ಹಾವು ಮಾರಾಟಕ್ಕೆ ಯತ್ನ: ಇಬ್ಬರು ಅರೆಸ್ಟ್‌

ಲಗ್ಗೆರೆಯಲ್ಲಿ ಗುರುವಾರ ಬೆಳಗ್ಗೆ ಆರೋಗ್ಯ ತಪಾಸಣೆ ನಡೆಸಲು ಹೋಗಿದ್ದೆ. ಈ ವೇಳೆ ಸ್ಥಳಕ್ಕೆ ಬಂದ ಆರೋಪಿ, ಅಲ್ಲಿಯೇ ಇದ್ದ ಸ್ಯಾನಿಟೈಸರ್‌ನ್ನು ಹಾಕಿಕೊಂಡು, ಕೈ ಉರಿಯುತ್ತದೆ ಎಂದು ಖ್ಯಾತೆ ತೆಗೆದಿದ್ದ. ಸರ್ಕಾರ ಒದಗಿಸಿರುವ ಸ್ಯಾನಿಟೈಸರ್‌ ಬಳಕೆ ಮಾಡಲಾಗುತ್ತಿದೆ, ಇದನ್ನೆಲ್ಲಾ ಪ್ರಶ್ನೆ ಮಾಡಲು ನೀವ್ಯಾರು ಎಂದು ಪ್ರಶ್ನಿಸಿದೆ. ಈ ವೇಳೆ ಆರೋಪಿ ನನ್ನ ಹಿಡಿದು ಎಳೆದಾಡಿ, ಕೆಲಸಕ್ಕೆ ಅಡ್ಡಿಪಡಿಸಿದ ಎಂದು ಶಶಿಕಲಾ ದೂರು ನೀಡಿದ್ದರು. ಅಲ್ಲದೆ, ಸ್ಯಾನಿಟೈಸರ್‌ನ್ನು ಕೈಗೆ ಹಾಕಿಕೊಂಡರೆ ಉರಿಯುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವದಂತಿ ಹಬ್ಬಿಸಲು ಯತ್ನಿಸಿದ್ದ. ಆಶಾ ಕಾರ್ಯಕರ್ತೆ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.