ಬೆಂಗಳೂರು(ಏ.24): ಫುಡ್‌ ಡೆಲಿವರಿ ಮಾಡುವ ಬ್ಯಾಗ್‌ನಲ್ಲಿ ಎರಡು ತಲೆ ಹಾವು ಮಾರಾಟ ಮಾಡಲು ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಗುರಪ್ಪನಪಾಳ್ಯ ನಿವಾಸಿ ಮೊಹಮ್ಮದ್‌ ರಿಜ್ವಾನ್‌ (28) ಮತ್ತು ಅರ್ಜ ಪಾಷಾ(27) ಬಂಧಿತರು. ಆರೋಪಿಗಳಿಂದ ಎರಡು ತಲೆ ಹಾವು, ಒಂದು ದ್ವಿಚಕ್ರ ವಾಹನ ಹಾಗೂ ಮೂರು ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. 

ಲಾಕ್‌ಡೌನ್‌: ವಾಹನ ತಪಾಸಣೆ ವೇಳೆ ಹೆಡ್‌ಕಾನ್ಸ್‌ಟೇಬಲ್‌ಗೆ ಡಿಕ್ಕಿ

ರಿಜ್ವಾನ್‌ ಡುನ್ಜೊ ಎಂಬ ಫುಡ್‌ ಡೆಲಿವರಿ ಕಂಪನಿಯಲ್ಲಿ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದಾನೆ. ಲಾಕ್‌ಡೌನ್‌ ಸಂದರ್ಭದಲ್ಲಿ ಫುಡ್‌ ಡೆಲಿವರಿ ಬಾಯ್‌ಗಳಿಗೆ ಸೇವೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿ ಕೆಲ ತಿಂಗಳ ಹಿಂದೆಯೇ ಆಂಧ್ರಪ್ರದೇಶದ ಹಿಂದೂಪುರದಿಂದ ಎರಡು ತಲೆಯ ಹಾವನ್ನು ತಂದು ಇದೀಗ ನಗರದಲ್ಲಿ ಮಾರಾಟಕ್ಕೆ ಸಿದ್ಧತೆ ನಡೆಸಿದ್ದ. ಈ ವೇಳೆ ಸ್ನೇಹಿತ ಅಜರ್‌ ಪಾಷಾನ ನೆರವು ಪಡೆದು ಬುಧವಾರ ಸಾರಕ್ಕಿ ವೃತ್ತದ ಸಮೀಪದಲ್ಲಿ ಬಸಪ್ಪ ಗಾರ್ಡನ್‌ ಬಳಿ ಹಾವು ಮಾರಾಟಕ್ಕೆ ಯತ್ನಿಸಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.