ಚಿಕ್ಕಮಗಳೂರು (ಅ.21):  ಜಿಲ್ಲೆಯ ಕಡೂರು ತಾಲೂಕಿನಲ್ಲಿ ಕೊಳವೆಬಾವಿ ಕೊರೆಯಲು ಅನುಮತಿ ಪಡೆಯುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಹೇಳಿದ್ದಾರೆ.

ಅಂತರ್ಜಲ ಸಂಪನ್ಮೂಲ ಮೌಲೀಕರಣ ಅನುಸಾರ ಕರ್ನಾಟಕ ಸರ್ಕಾರದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಅಧಿಸೂಚನೆ ಪ್ರಕಾರ ಜಿಲ್ಲೆಯ ಕಡೂರು ತಾಲೂಕನ್ನು ಅಂತರ್ಜಲ ಅತಿಬಳಕೆ ತಾಲೂಕು ಎಂದು ಗುರುತಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ ಎಂದು ತಿಳಿಸಿದ್ದಾರೆ.

ಕಡೂರು ತಾಲೂಕಿನ ಪ್ರದೇಶದಲ್ಲಿ ಅಂತರ್ಜಲದ ಬಳಕೆಗೆ ಬಳಸುವ ಕೊಳವೆಬಾವಿ, ತೆರೆದ ಬಾವಿಗಳನ್ನು ಜಿಲ್ಲಾ ಅಂತರ್ಜಲ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಸುವುದು ಮತ್ತು ಹೊಸದಾಗಿ ಕೊಳವೆಬಾವಿ, ತೆರೆದ ಬಾವಿಗಳನ್ನು ತೆರೆಯಲು ಇಚ್ಛಿಸುವವರು ಜಿಲ್ಲಾ ಅಂತರ್ಜಲ ಪ್ರಾಧಿಕಾರ ಸಮಿತಿ ಅನುಮತಿ ಪಡೆಯುವುದು ಕಡ್ಡಾಯ ಎಂದು ಹೇಳಿದ್ದಾರೆ.

ಈಗಾಗಲೇ ಕಡೂರು ತಾಲೂಕಿನಲ್ಲಿ ಕೊಳವೆಬಾವಿ, ತೆರೆದ ಬಾವಿಗಳನ್ನು ಹೊಂದಿರುವವರು ಪ್ರಾಧಿಕಾರಕ್ಕೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸುವುದರೊಂದಿಗೆ ನೋಂದಣಿ ಮಾಡಿಕೊಳ್ಳಬೇಕು ಮತ್ತು ಹೊಸದಾಗಿ ಕೊಳವೆಬಾವಿ, ತೆರೆದಬಾವಿಗಳನ್ನು ಕೊರೆಯಲು ಇಚ್ಛಿಸುವವರು ಪ್ರಾಧಿಕಾರಕ್ಕೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸುವುದರೊಂದಿಗೆ ಅನುಮತಿ ಪಡೆಯಬೇಕು. ತಪ್ಪಿದ್ದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಹೊಸಪೇಟೆ: ಹಂಪಿ ಸ್ಮಾರಕಗಳ ಬಳಿಯೇ ಬೋರ್‌ವೆಲ್‌! ...

ಕೊಳವೆಬಾವಿ ಕೊರೆಯುವ ಯಂತ್ರಗಳನ್ನು ಸಹ ಕರ್ನಾಟಕ ಅಂತರ್ಜಲ ಪ್ರಾಧಿಕಾರದ ಅಡಿಯಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯ. ಆದ್ದರಿಂದ ಜಿಲ್ಲಾ ಅಂತರ್ಜಲ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ ರಿಗ್‌ ಯಂತ್ರಗಳನ್ನು ನೋಂದಾಯಿಸಿಕೊಳ್ಳಲು ಎಲ್ಲ ರಿಗ್‌ ಮಾಲೀಕರಿಗೆ ಸೂಚಿಸಲಾಗಿದೆ. ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳದ ಕೊಳವೆಬಾವಿ ಕೊರೆಯುತ್ತಿರುವ ಯಂತ್ರಗಳನ್ನು ನಿಗಮಗಳ ಪ್ರಕಾರ ಜಪ್ತಿ ಮಾಡಿ ಅಂತಹ ರಿಗ್‌ ಮಾಲೀಕರು ಹಾಗೂ ಏಜೆನ್ಸಿಗಳ ಮೇಲೆ ಕೇಸು ದಾಖಲಿಸಲು ಅವಕಾಶವಿದೆ.

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಕಟ್ಟಡದ ಅಂತರ್ಜಲ ನಿರ್ದೇಶನಾಲಯದ ಹಿರಿಯ ಭೂ ವಿಜ್ಞಾನಿ ದೂ. 08262- 221456 ಇಲ್ಲಿಗೆ ಸಂಪರ್ಕಿಸುವಂತೆ ತಿಳಿಸಿದ್ದಾರೆ.