ಕಲ್ಯಾಣ ಮಂಟಪಗಳಲ್ಲಿ ಮದುವೆ, ರಾಜಕೀಯ ಪಕ್ಷಗಳ ಸಭೆ ನಡೆಸಲು ಆಯಾ ಮತಕ್ಷೇತ್ರದ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳಲೇ ಬೇಕು. ಅನುಮತಿ ಪಡೆಯದವರಿಗೆ ಕಲ್ಯಾಣ ಮಂಟಪವನ್ನು ಮಾಲೀಕರು ಬಾಡಿಗೆ ಕೊಡುವಂತಿಲ್ಲ. ನಿಯಮ ಉಲ್ಲಂಘನೆ ಕಂಡುಬಂದರೆ ಮಾಲೀಕರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತದೆ: ಜಿಲ್ಲಾ ಚುನಾವಣಾಧಿಕಾರಿ ಸುನೀಲ ಕುಮಾರ್‌ 

ಬಾಗಲಕೋಟೆ(ಏ.04): ವಿಧಾನಸಭೆ ಚುನಾವಣೆ ವೇಳೆ ರಾಜಕೀಯ ಪಕ್ಷಗಳು ತಮ್ಮ ಕಾರ್ಯ ಚಟುವಟಿಕೆಗಳಿಗೆ ಕಲ್ಯಾಣ ಮಂಟಪಗಳನ್ನೂ ಬಳಸಿಕೊಳ್ಳಲಿವೆ. ಹೀಗಾಗಿ ಸದ್ಯಕ್ಕೆ ಮದುವೆ ನಡೆಸಲೂ ಚುನಾವಣಾಧಿಕಾರಿ ಅನುಮತಿ ಕಡ್ಡಾಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಪಿ.ಸುನೀಲ್‌ ಕುಮಾರ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಮುದ್ರಕರ, ಹೋಟೆಲ್‌, ಕಲ್ಯಾಣ ಮಂಟಪ, ಕೇಬಲ್‌ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜಕಾರಣಿಗಳು ಕಲ್ಯಾಣ ಮಂಟಪಗಳನ್ನು ದುರ್ಬಳಕೆ ಮಾಡಿಕೊಳ್ಳದಂತೆ ನಿಗಾ ವಹಿಸಬೇಕು ಎಂದು ಅಧಿಕಾರಿ ವರ್ಗಕ್ಕೂ ಸೂಚನೆ ನೀಡಿದರು.

ಕಾಂಗ್ರೆಸ್‌ನಿಂದ ಮಾತ್ರ ಬಡವರ ಏಳ್ಗೆ: ಮಾಜಿ ಸಚಿವ ಮೇಟಿ

ಕಲ್ಯಾಣ ಮಂಟಪಗಳಲ್ಲಿ ಮದುವೆ, ರಾಜಕೀಯ ಪಕ್ಷಗಳ ಸಭೆ ನಡೆಸಲು ಆಯಾ ಮತಕ್ಷೇತ್ರದ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳಲೇ ಬೇಕು. ಅನುಮತಿ ಪಡೆಯದವರಿಗೆ ಕಲ್ಯಾಣ ಮಂಟಪವನ್ನು ಮಾಲೀಕರು ಬಾಡಿಗೆ ಕೊಡುವಂತಿಲ್ಲ. ನಿಯಮ ಉಲ್ಲಂಘನೆ ಕಂಡುಬಂದರೆ ಮಾಲೀಕರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಸಿದರು.

ಮುದ್ರಣ ಪೂರ್ವ ಅನುಮತಿ:

ವಿವಿಧ ರಾಜಕೀಯ ಪಕ್ಷಗಳ ಹಾಗೂ ಅಭ್ಯರ್ಥಿಗಳ ಪ್ರಚಾರದ ಕರಪತ್ರ, ಪೋಸ್ಟರ್‌ ಹಾಗೂ ಕಿರುಹೊತ್ತಿಗೆ ಸೇರಿದಂತೆ ಇತ್ಯಾದಿಗಳನ್ನು ಮುದ್ರಿಸುವ ಪೂರ್ವದಲ್ಲೇ ಮುದ್ರಕರು ಅನುಮತಿ ಪಡೆಯುವುದು ಕಡ್ಡಾಯ. ಮುದ್ರಕರ ಮತ್ತು ಪ್ರಕಾಶಕರ ಹೆಸರನ್ನು ಹೊಂದಿರದ ಯಾವುದೇ ಪೋಸ್ಟರ್‌ ಅಥವಾ ಭಿತ್ತಿ ಪತ್ರಗಳನ್ನು ಮುದ್ರಿಸಿ ಪ್ರಕಟಿಸುವಂತಿಲ್ಲ. ಪ್ರಿಂಟ್‌ ಮಾಡಿಸುವವರಿಂದ ನಿಗದಿತ ನಮೂನೆ ಭರ್ತಿ ಮಾಡಿಸಿಕೊಂಡು, ಪ್ರಕಟಿಸಿದ ಕರಪತ್ರ ಮತ್ತು ನಮೂನೆ ಪ್ರತಿಯನ್ನು ಜಿಲ್ಲಾ ಚುನಾವಣಾಧಿಕಾರಿಗೆ ಸಲ್ಲಿಸಬೇಕು ಎಂದು ಸೂಚಿಸಿದರು.

ಕೇಬಲ್‌ ಚಾನೆಲ್‌ ಮಾಲೀಕರು ಎಲ್ಲ ಜಾಹಿರಾತುಗಳನ್ನು ಪ್ರಕಟಿಸುವ ಮೊದಲು ಮಾಧ್ಯಮ ದೃಢೀಕರಣ ಹಾಗೂ ವೀಕ್ಷಣಾ ಸಮಿತಿ (ಎಂಸಿಎಂಸಿ) ಗಮನಕ್ಕೆ ತರಬೇಕು. ಅನುಮತಿ ಇದ್ದರೆ ಮಾತ್ರ ಕೇಬಲ್‌ ಚಾನಲ್‌ನಲ್ಲಿ ಪ್ರಕಟಿಸುವಂತೆ ಸೂಚಿಸಲಾಯಿತು. ಇನ್ನು, ವಾಣಿಜ್ಯ ತೆರಿಗೆ ಇಲಾಖೆಯವರು ವಸ್ತುಗಳ ಖರೀದಿ ಮೇಲೆ ನಿಗಾ ವಹಿಸಬೇಕು ಎಂದು ಡಿಸಿ ಸೀಚನೆ ನೀಡಿದರು.

ಹೋಟೆಲ್‌ ಮೇಲೆ ನಿಗಾ:

ಚುನಾವಣಾ ನೀತಿ ಸಂಹಿತೆ ಪಾಲನೆಗೆ ಹೆಚ್ಚಿನ ನಿಗಾ ವಹಿಸುತ್ತಿದ್ದು, ಹೋಟೆಲ್‌ನಲ್ಲಿ ಉಳಿದುಕೊಳ್ಳುವ ಪ್ರತಿಯೊಬ್ಬ ವ್ಯಕ್ತಿಗಳ ಮೇಲೆ ಮಾಲೀಕರು ನಿಗಾ ವಹಿಸುವ ಅಗತ್ಯವಿದೆ. ಲಾಡ್ಜ್‌ನಲ್ಲಿ ಉಳಿದಿಕೊಂಡ ವ್ಯಕ್ತಿಗಳ ಪ್ರತಿಯೊಂದು ಚಟುವಟಿಕೆಗಳನ್ನು ಗಮನಿಸಬೇಕು. ಯಾವುದೇ ರೀತಿ ಹಣ ಸಂಗ್ರಹ, ಗಿಫ್ಟ್‌, ವಸ್ತುಗಳನ್ನು ಸಂಗ್ರಹಿಸುವ ಸಾಧ್ಯತೆ ಇರುತ್ತದೆ. ಇವುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಕಾಲ ಕಾಲಕ್ಕೆ ಪ್ಲಾಯಿಂಗ್‌ ಸ್ಕ್ಯಾಡ್‌ಗಳು ಪರಿಶೀಲಿಸಲಿದ್ದು, ಉಲ್ಲಂಘನೆ ಕಂಡುಬಂದಲ್ಲಿ ಮಾಲೀಕರ ಮೇಲೆ ಜಾಗೂ ಉಲ್ಲಂಘಿಸಿದ ವ್ಯಕ್ತಿಗಳ ಮೇಲೆ ಕ್ರಮ ಜರುಗಿಸಲಾಗುತ್ತದೆ. ಲಾಡ್ಜ್‌ನಲ್ಲಿ ಉಳಿದುಕೊಂಡವರ ಮಾಹಿತಿಯನ್ನು ವಾರಕ್ಕೊಮ್ಮೆ ಸಲ್ಲಿಸಬೇಕು ಎಂದು ಸೂಚಿಸಿದರು.

ಸರಾಫ್‌ ಅಂಗಡಿಗಳ ಮೇಲೆ ಕಣ್ಗಾವಲು:

ಜಿಲ್ಲೆಯಲ್ಲಿರುವ ಸರಾಫ್‌ ಅಂಗಡಿ ಮಾಲೀಕರು ವ್ಯವಹಾರದಲ್ಲಿ ದುರ್ಬಳಕೆ ಆಗಬಾರದು. ಚುನಾವಣೆಯಲ್ಲಿ ಬಂಗಾರ, ಬೆಳ್ಳಿ ಕೊಡುವ ಮೂಲಕ ಆಶೆ, ಆಮಿಷ ಒಡ್ಡುವ ಸಂಭವವಿದ್ದು, ಖರೀದಿಗಾಗಿ ಇಲ್ಲವೇ ಟೋಕನ್‌ ವ್ಯವಸ್ಥೆ ಮೂಲಕ ಜನರಿಗೆ ತಲುಪಿಸುವ ಕಾರ್ಯ ನಡೆಯುವ ಸಂಭವವಿದೆ. ಈ ಬಗ್ಗೆ ಸರಾಫ್‌ ಅಂಗಡಿ ಮಾಲೀಕರು ಎಚ್ಚರಿಕೆಯಿಂದ ವ್ಯವಹಾರ ಮಾಡಬೇಕು. ವ್ಯವಹಾರದಲ್ಲಿ ಲೋಪ ಕಂಡು ಬಂದರೆ ಸೂಕ್ತ ಕ್ರಮ ಜರುಗಿಸಲಾಗುತ್ತದೆ. ಸಂಶಯಾಸ್ಪದ ಸರಾಫ್‌ ಅಂಗಡಿಗಳ ಪ್ರತಿ ವ್ಯವಹಾರದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದ್ದು, ಯಾವುದೇ ರೀತಿ ದುರ್ಬಳಕೆಗೆ ಅವಕಾಶ ನೀಡಬಾರದು ಎಂದರು.

2028ಕ್ಕೆ ರಾಜ್ಯದ ಚುಕ್ಕಾಣಿ ಹಿಡಿಯಲಿದೆ ಜನಾರ್ದನ ರೆಡ್ಡಿಯ ಕೆಆರ್‌ಪಿಪಿ!

ಹಣದ ವ್ಯವಹಾರ ಮೇಲೆ ನಿಗಾ:

ಬ್ಯಾಂಕ್‌ ಮತ್ತು ವಿವಿಧ ಪತ್ತಿನ ಸಹಕಾರಿ ಸಂಘಗಳ ಮೇಲೆ ನಿಗಾ ವಹಿಸುವ ಅಗತ್ಯವಿದ್ದು, ಜಿಲ್ಲಾ ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಮತ್ತು ಸಹಕಾರ ಇಲಾಖೆ ಉಪ ನಿಬಂಧಕರು ಹಣದ ವ್ಯವಹಾರದ ಪ್ರತಿಯೊಂದು ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಜಿಲ್ಲಾಧಿಕಾರಿ ಸೂಚಿಸಿದರು. ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣ ವರ್ಗಾಣೆಯ ಮಾಹಿತಿ ಸಲ್ಲಿಸಬೇಕು. ದಾಖಲೆ ಇಲ್ಲದೇ ಸಹಕಾರಿ ಸಂಘಗಳಲ್ಲಿ ಹಣದ ವ್ಯವಹಾರ ನಡೆಯದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಜಿಪಂ ಸಿಇಒ ಟಿ.ಭೂಬಾಲನ್‌, ಪ್ರೊಬೇಷನರಿ ಐಎಎಸ್‌ ಅಧಿಕಾರಿ ಕನಿಷ್ಕ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಸೇರಿದಂತೆ ಮುದ್ರಕರ, ಹೋಟೆಲ್‌, ಕಲ್ಯಾಣ ಮಂಟಪ, ಕೇಬಲ್‌ ಮಾಲಿಕರು ಉಪಸ್ಥಿತರಿದ್ದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.