ಕರ್ನಾಟಕದಲ್ಲಿ ಸಮೃದ್ಧ ಮಳೆಯಾಗಲು ದೇವರ ಮೊರೆ ಹೋದ ಸರ್ಕಾರ, ಕೃಷಿ ಸಚಿವರಿಂದ ವಿಶೇಷ ಪೂಜೆ..!
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ತಾಲ್ಲೂಕಿನ ಕಿಗ್ಗಾ ಋಷ್ಯಶೃಂಗೇಶ್ವರನಿಗೆ ರಾಜ್ಯ ಸರ್ಕಾರವೇ ವಿಶೇಷ ಪೂಜೆ, ಜಪ, ಶತರುದ್ರಾಭಿಷೇಕ ನಡೆಸಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಜು.09): ರಾಜ್ಯಾದ್ಯಂತ ಸಮೃದ್ಧ ಮಳೆಯಾಗಲೆಂದು, ಮಳೆ ದೇವರೆಂದೇ ಖ್ಯಾತಿಯಾಗಿರೋ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ತಾಲ್ಲೂಕಿನ ಕಿಗ್ಗಾ ಋಷ್ಯಶೃಂಗೇಶ್ವರನಿಗೆ ರಾಜ್ಯ ಸರ್ಕಾರವೇ ವಿಶೇಷ ಪೂಜೆ, ಜಪ, ಶತರುದ್ರಾಭಿಷೇಕ ನಡೆಸಿದೆ.
ರಾಜ್ಯದಲ್ಲಿ ಕೇವಲ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಾತ್ರ ಮಳೆಯಾಗುತ್ತಿದೆ. ರಾಜ್ಯಾದ್ಯಂತ ಮಳೆಯಾಗಲಿ ಎಂದು ಸರ್ಕಾರದ ಪ್ರತಿನಿಧಿಯಾಗಿ ಕೃಷಿ ಸಚಿವ ಚೆಲುವರಾಯಸ್ವಾಮಿ ಮಳೆ ದೇವರ ಮೊರೆ ಹೋಗಿದ್ದಾರೆ. ಕೃಷಿ ಸಚಿವ ಚೆಲುವರಾಯಸ್ವಾಮಿ ಕಿಗ್ಗಾದ ಮಳೆದೇವರೆಂದು ಖ್ಯಾತಿಪಡೆದಿರುವ ಋಷ್ಯಶೃಂಗೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಸರ್ಕಾರದ ಪರವಾಗಿ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿದರು.
ಚಿಕ್ಕಮಗಳೂರಲ್ಲಿ ಮುಂದುವರಿದ ಮಳೆ ಅಬ್ಬರ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು
20ಕ್ಕೂ ಅಧಿಕ ಋತ್ವಿಜರಿಂದ ಪರ್ಜನ್ಯಜಪ-ಶತರುದ್ರಾಭಿಷೇಕ
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಋಷ್ಯಶೃಂಗೇಶ್ವರ ಸ್ವಾಮಿ ದೇವಾಲಯ. ಅತಿವೃಷ್ಠಿ ಹಾಗೂ ಅನಾವೃಷ್ಠಿ ವೇಳೆಯಲ್ಲಿ ಇಲ್ಲಿ ಕೈಮುಗಿದ್ರೆ ಪರಿಸ್ಥಿತಿ ತಿಳಿಗೊಳ್ಳುತ್ತೆ ಅನ್ನೋ ಭಕ್ತರ ನಂಬಿಕೆ ಎಂದು ಹುಸಿಯಾಗಿಲ್ಲ. ಈ ಬಾರಿ ರಾಜ್ಯದ ಕೇವಲ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಾತ್ರ ಮಳೆಯಾಗುತ್ತಿದ್ದು ರಾಜ್ಯದ ಇತರೆ ಭಾಗದಲ್ಲಿ ಉಂಟಾಗಿರೋ ಬರಗಾಲವನ್ನ ನಿವಾರಿಸೋ ಎಂದು ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಕೃಷಿ ಸಚಿವ ಚೆಲುವರಾಯಸ್ವಾಮಿ ಮಳೆ ದೇವರು ಎಂದೇ ಖ್ಯಾತಿಯಾಗಿರೋ ಋಷ್ಯಶೃಂಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ, ಮಳೆಗಾಗಿ ಬೇಡಿಕೊಂಡಿದ್ದಾರೆ.
ಮಳೆಗಾಗಿ ಇಂದು ಕಿಗ್ಗಾದ ದೇವಸ್ಥಾನದಲ್ಲಿ 20 ಋತ್ವಿಜರು ಪರ್ಜನ್ಯ ಜಪ ಸೇರಿದಂತೆ ವಿವಿಧ ಹೋಮ-ಹವನ ನೆರವೇರಿಸಿದ್ರು. ಮುಂಗಾರು ಮಳೆ ಇಡೀ ರಾಜ್ಯದಲ್ಲಿ ಸರಿಯಾಗಿ ಆಗಿಲ್ಲ. ಹಾಗಾಗಿ, ರೈತರು ಬಿತ್ತನೆ ಕಾರ್ಯಕ್ಕೂ ಮುಂದಾಗಿಲ್ಲ. ಹಾಗಾಗಿ, ರಾಜ್ಯದಲ್ಲಿ ಮಳೆ ಹಾಗೂ ನೀರಿನ ಅಭಾವವಿದೆ. ಋಷ್ಯಶೃಂಗೇಶ್ವರನಿಗೆ ಪೂಜೆ ಸಲ್ಲಿಸಿದ್ರೆ ಮಳೆಯಾಗುತ್ತೆ ಅನ್ನೋ ನಂಬಿಕೆ ಪ್ರತೀತಿ ಇದೆ.
ಬರ ಬಂದ್ರೆ ಇಲ್ಲಿ ಪೂಜೆ , ಜಪ :
2015ರಲ್ಲಿ ತೀವ್ರ ಮಳೆ ಅಭಾವ ಎದುರಾದಾಗ ಅಂದಿನ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸರ್ಕಾರದ ಪ್ರತಿನಿಧಿಯಾಗಿ ಬಂದು ಮಳೆಗಾಗಿ ಪ್ರಾರ್ಥಿಸಿ ಹರಕೆ ಕಟ್ಟಿಕೊಂಡಿದ್ರು. ರಾಜ್ಯಾದ್ಯಂತ ಸಮೃದ್ಧ ಮಳೆಯಾದ ಕಾರಣ ಪುನಃ ಬಂದು ಹರಕೆಯನ್ನ ತೀರಿಸಿ ಹೋಗಿದ್ರು. ಗುಂಡೂರಾವ್ ಮುಖ್ಯಮಂತ್ರಿ ಆಗಿದ್ದ ಕಾಲದಿಂದಲೂ ಅತಿವೃಷ್ಠಿ ಹಾಗೂ ಅನಾವೃಷ್ಠಿಯಲ್ಲಿ ಎಲ್ಲಾ ಸರ್ಕಾರಗಳ ಮುಖ್ಯಮಂತ್ರಿಗಳು ಅಥವ ಸರ್ಕಾರದ ಪ್ರತಿನಿಧಿಯಾಗಿ ಸಚಿವರು ಇಲ್ಲಿಗೆ ಬಂದು ಮಳೆಗಾಗಿ ಪ್ರಾರ್ಥಿಸಿ ಹೋಗಿದ್ರು. ಆ ಪ್ರತೀತಿ ಇಂದಿಗೂ ನಿಂತಿಲ್ಲ. ಇಂದು ಮತ್ತೆ ಋಷ್ಯಶೃಂಗನಿಗೆ ಮೊರೆ ಹೋದ ಸಚಿವರು ಈ ಬಾರಿಯೂ ಮಳೆ ಅಭಾವ ಎದುರಾಗದಂತೆ ಬೇಡಿಕೊಂಡಿದ್ದಾರೆ.
ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಸರ್ಕಾರದ ಪರವಾಗಿ ಇಂದು ಮಳೆ ದೇವರಿಗೆ ಕೃಷಿ ಸಚಿವರು ಪೂಜೆ ಸಲ್ಲಿಸಿ ಬೇಡಿಕೊಂಡಿದ್ದಾರೆ. ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಸಚಿವರು ಮುಂಗಾರು ಮಳೆ ಇಡೀ ರಾಜ್ಯದಲ್ಲಿ ಸರಿಯಾಗಿ ಆಗಿಲ್ಲ. ಹಾಗಾಗಿ, ರೈತರು ಬಿತ್ತನೆ ಕಾರ್ಯಕ್ಕೂ ಮುಂದಾಗಿಲ್ಲ. ಹಾಗಾಗಿ, ರಾಜ್ಯದಲ್ಲಿ ಮಳೆ ಹಾಗೂ ನೀರಿನ ಅಭಾವವಿದೆ. ಋಷ್ಯಶೃಂಗೇಶ್ವರನಿಗೆ ಪೂಜೆ ಸಲ್ಲಿಸಿದ್ರೆ ಮಳೆಯಾಗುತ್ತೆ ಅನ್ನೋ ನಂಬಿಕೆ ಪ್ರತೀತಿ ಇದೆ. ಹಾಗಾಗಿ, ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಪೂಜೆ ಸಲ್ಲಿಸಿದ್ದೇನೆ. ರಾಜ್ಯದ ಜನರ ಬದುಕು ನೆಮ್ಮದಿಯಾಗಿರಲಿ ಎಂದು ದೇವರ ಬಳಿ ಬೇಡಿಕೊಂಡಿರುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಭರ್ಜರಿ ಮಳೆ: ಕಳಸ-ಕುದುರೆಮುಖ-ಮಂಗಳೂರು ಹೆದ್ದಾರಿಯಲ್ಲಿ ಬಿರುಕು
ಹೆಚ್ಡಿಕೆಗೆ ಸಹಿಸಿಕೊಳ್ಳುವ ಶಕ್ತಿ ಇಲ್ಲ-ದೇವರು ಶಕ್ತಿ ನೀಡಲಿ
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿ ಕುಮಾರಸ್ವಾಮಿ ಪೆನ್ಡ್ರೈವ್ ಇದೆ ಎಂದು ಹೇಳುತ್ತಾರೆ.ಇದ್ದರೆ ಅದನ್ನು ಅವರು ಯಾಕೆ ಇಟ್ಟುಕೊಂಡಿದ್ದಾರೆ ಎಂಬುದು ಅವರಿಗೆ ಬಿಟ್ಟ ವಿಷಯ.ಅವರನ್ನು ಹತ್ತಾರು ವರುಷಗಳಿಂದ ನೋಡಿದ್ದೇನೆ.ಎಲ್ಲರಿಗೂ ಬೆದರಿಸಿ ಹುಷಾರ್ ಎಂದು ಕೂಗುವುದು ಅವರ ಸಹಜ ಸ್ವಭಾವ. ಅದು ನಮಗೆ ಹೊಸದೇನು ಅಲ್ಲ.ಸೋಮವಾರ ರಾಜ್ಯಪಾಲರ ಭಾಷಣ ಇದೆ.ಆಗ ಅವರು ಪೆನ್ಡ್ರೈವ್ ಕುರಿತು ಹೇಳಬಹುದು. ಬಜೆಟ್ ಮಂಡನೆ ಆಗಿದೆ.ಆ ಭಾಷಣದಲ್ಲಿ ಹೇಳಬಹುದಿತ್ತು ಇಲ್ಲವಾದರೆ ಪ್ರತ್ಯೇಕವಾಗಿ ಹೇಳಬಹುದು.ಅದು ಅವರಿಗೆ ಬಿಟ್ಟ ವಿಚಾರವೆಂದರು.
ದೇವೇಗೌಡರ ಕುಟುಂಬಕ್ಕೆ ನಾನು ಯಾವುದೇ ರೀತಿಯಾಗಿ ಕೆಟ್ಟದನ್ನೂ ಯಾವತ್ತು ಮಾತನಾಡಿಲ್ಲ.ಜರ್ನಾಧನರೆಡ್ಡಿ ಅವರ 150 ಕೋಟಿ ಹಗರಣ ಕೊಟ್ಟಾಗ ಕುಮಾರಸ್ವಾಮಿ ಸಿಎಂ ಆಗಿದ್ದರು.ಅವರಿಗೆ ನಮ್ಮನ್ನು ಸಹಿಸುವ ಶಕ್ತಿ ಇಲ್ಲ. ದೇವರು ಅವರಿಗೆ ಎಲ್ಲರನ್ನೂ ಸಹಿಸುವ ಶಕ್ತಿ ನೀಡಲಿ ಎಂದರು. ಈ ಸಂದರ್ಭದಲ್ಲಿ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಜೊತೆಗೆ ಇದ್ದರು.