ಮಂಡ್ಯ(ನ.28): ಕೇವಲ ಚುನಾವಣೆ ವೇಳೆಯಲ್ಲಿ ಕುಮಾರಸ್ವಾಮಿ ಕಣ್ಣೀರು ಹಾಕುವುದರಿಂದ ಕಣ್ಣೀರಿನ ಪ್ರವಾಹದಲ್ಲಿ ಮತದಾರರು ಕೊಚ್ಚಿ ಹೋಗುತ್ತಾರೆಂಬ ಹುಚ್ಚುತನದಲ್ಲಿ ಅವರಿದ್ದಾರೆ ಎಂದು ಎಚ್ಡಿಕೆ ಕಣ್ಣೀರಿಗೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರು ಬುಧವಾರ ವ್ಯಂಗ್ಯವಾಡಿದ್ದಾರೆ.

ಕೆ.ಆರ್‌. ಪೇಟೆಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ ಕೇಂದ್ರ ಸಚಿವ ಸದಾನಂದಗೌಡ, ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಈ ಚುನಾವಣೆ ವೇಳೆಯಲ್ಲಿ ಮಾತ್ರ ಕುಮಾರಸ್ವಾಮಿಗೆ ಕಣ್ಣೀರು ಬರುತ್ತದೆ. ಅದು ಯಾಕೆ ಅಂತ ಗೊತ್ತಿಲ್ಲ. ಕುಮಾರಸ್ವಾಮಿಯ ಆಪ್ತಮಿತ್ರ ಜಮೀರ್‌ ಒಂದು ಸಾರಿ ಹೇಳಿದ್ದರು. ಈ ಕುಮಾರಸ್ವಾಮಿ ಕೈಗೆ, ಕರ್ಚೀಪ್‌ಗೆ ವಿಕ್ಸ್‌ ಹಾಕಿ ಕೊಂಡಿರುತ್ತಾರೆ. ಆಗ ತಕ್ಷಣ ಕಣ್ಣೀರು ಬರುತ್ತದೆ ಎಂದು ಹೇಳಿದ್ದರು. ಆದರೆ, ಈ ಕಣ್ಣೀರಿಗೆಲ್ಲ ಜನ ಮರುಳಾಗೋದಿಲ್ಲ ಎಂದಿದ್ದಾರೆ.

ಕುಮಾರಸ್ವಾಮಿ ಕಾಂಗ್ರೆಸ್‌ ಸೇರಬಹುದು:

ಡಿಸೆಂಬರ್‌ 9ರ ನಂತರ ರಾಜಕೀಯ ಧೃವೀಕರಣ ಆಗುತ್ತದೆ ಎಂಬ ಕುಮಾರಸ್ವಾಮಿ ಹೇಳಿಕೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವರು, ಬಹುಶಃ ಕುಮಾರಸ್ವಾಮಿ ಕಾಂಗ್ರೆಸ್‌ ಸೇರಬಹುದು. ಚುನಾವಣೆ ನಡೆಯುವಾಗ ರಾಜಕೀಯ ಧÜೃವೀಕರಣ ಹೇಗೆ ಆಗುತ್ತೆ ಎಂದು ಪ್ರಶ್ನೆ ಮಾಡಿ ಒಬ್ಬ ನಾಯಕರಿಗೆ ರಾಜಕೀಯ ಧೃವೀಕರಣ ಅಂದ್ರೆ ಗೊತ್ತಿಲ್ಲ ಎಂದು ಟೀಕೆ ಮಾಡಿದ್ದಾರೆ.

‘ತಂದೆ ವಿರೋಧವಿದ್ರು ಟಿಕೆಟ್ ಕೊಟ್ಟೆ : ಆದ್ರೆ ಇವ್ನು ಬಿಜೆಪಿ ಹಣ ಪಡೆದು ನಾಟಕವಾಡಿದ’

ಸಿದ್ದರಾಮಯ್ಯ ದುರಹಂಕಾರದಿಂದ ಚುನಾವಣೆ ಎದುರಿಸಿ ಗೆಲ್ಲಬಹುದು ಎಂದು ಕೊಂಡಿದ್ದಾರೆ. ಆದರೆ, ಈ ಸಿದ್ದರಾಮಯ್ಯನ ದುರಹಂಕಾರಕ್ಕೆ ಈ ಉಪಚುನಾವಣೆ ಇತಿಶ್ರೀ ಹಾಡಲಿದೆ ಎಂದಿದ್ದಾರೆ.

ಕೆಆರ್‌ ಪೇಟೆಯ ಮೂಲೆ ಮೂಲೆಗಳಲ್ಲೂ ಬಿಜೆಪಿ ಪರ ಅಲೆಯಿದೆ. ಮಂಡ್ಯದಲ್ಲಿ ಬಿಜೆಪಿ ಪರ ಈ ರೀತಿಯ ಅಲೆ ನೋಡಿದ್ದು ಇದೇ ಮೊದಲು. ನಿಶ್ಚಿತವಾಗಿ ಕೆಆರ್‌ ಪೇಟೆಯಲ್ಲಿ ಬಿಜೆಪಿ ಗೆಲ್ಲಲಿದೆ ಅನುಮಾನವೇ ಬೇಡ ಎಂದಿದ್ದಾರೆ.

'ಇದು ಬರೀ ಶಾಸಕರಲ್ಲ, ಮಂತ್ರಿ ಚುನಾವಣೆ'..!