Asianet Suvarna News Asianet Suvarna News

ರಾಮನಗರ: ಅವಧಿ ಮೀರಿದ ಔಷಧಿ ಸುರಿದು ಗ್ರಾಮಸ್ಥರ ಪ್ರತಿಭಟನೆ

ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಲು ಜನ ಹಿಂಜರಿಯುತ್ತಾರೆ. ಬಡವರಾದರೂ ಖಾಸಗಿ ಆಸ್ಪತ್ರೆಗಳ ಮೊರೆ ಹೋಗ್ತಾರೆ. ಸರ್ಕಾರಿ ಆಸ್ಪತ್ರೆ ಸೇವೆ ಚೆನ್ನಾಗಿಲ್ಲ ಅನ್ನೋದು ಆರೋಪ. ಇದು ರಾಮನಗರದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ರಾಮನಗರದ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಗ್ರಾಮಸ್ಥರು ಅವಧಿ ಮೀರಿದ ಔಷಧಿಗಳನ್ನು ಹೊರಗೆ ಸುರಿದು ಪ್ರತಿಭಟನೆ ನಡೆಸಿದ್ದಾರೆ.

People thrown out expired medicines in Ramanagara Govt Health center
Author
Bangalore, First Published Aug 21, 2019, 12:31 PM IST
  • Facebook
  • Twitter
  • Whatsapp

ರಾಮನಗರ(ಆ.21): ತಾಲೂಕಿನ ಅಕ್ಕೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು, ಸಿಬ್ಬಂದಿ ಕೊರತೆಯಿಂದ ಆರೋಗ್ಯ ಸೇವೆಗಳು ಸಾರ್ವಜನಿಕರಿಗೆ ಸಮರ್ಪಕವಾಗಿ ಸಿಗುತ್ತಿಲ್ಲ ಎಂದು ಆರೋಪಿಸಿ ಅವಧಿ ಮೀರಿದ ಔಷಧಿಗಳನ್ನು ಆರೋಗ್ಯ ಕೇಂದ್ರದ ಮುಂಭಾಗ ಸುರಿದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.

ವಾರಕ್ಕೆ ಒಂದೆರಡು ಬಾರಿ ವೈದ್ಯರ ಭೇಟಿ:

ತಾಲೂ​ಕಿನ ಕೂಟಗಲ್‌ ಹೋಬಳಿ ಅಕ್ಕೂರು ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಾರಂಭಿಸಿದ್ದು, ಅಂದಿನಿಂದ ಈ ಭಾಗದ ಜನರಿಗೆ ಆರೋಗ್ಯ ಸೇವೆಗಳು ಮರೀಚಿಕೆಯಾಗಿವೆ. ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ರಾಜೇಂದ್ರ ಎಂಬ ವೈದ್ಯರು ವಾರಕ್ಕೆ ಎರಡು ಅಥವಾ ಮೂರು ದಿನಗಳಿಗೆ ಆಗಮಿಸುವ ಬಗ್ಗೆ ಅಧಿಕಾರಿಗಳಿಗೆ ಮತ್ತು ಚುನಾಯಿತ ಪ್ರತಿನಿಧಿಗಳಿಗೆ ದೂರು ನೀಡಿ​ದ್ದರು ಯಾವುದೇ ಪ್ರಯೋಜನ ಆಗಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಸವಲತ್ತುಗಳಿದ್ರೂ ಜನರಿಗೆ ಸೇವೆ ಲಭ್ಯವಿಲ್ಲ:

ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಿಗುವ ಆರೋಗ್ಯ ಸೇವೆಯನ್ನು ಕಲ್ಪಿಸಲು ಸರ್ಕಾರದಿಂದ ಸವಲತ್ತುಗಳನ್ನು ನೀಡಲಾಗಿದೆ. ಆದರೆ ಆ ಯಂತ್ರಗಳು ಯಾವುದೇ ಕಾರ್ಯರೂಪಕ್ಕೆ ಬರುತ್ತಿಲ್ಲ. ರಕ್ತ, ಕಫ ಪರೀಕ್ಷೆಗಳನ್ನು ಸಹ ಮಾಡಲು ಇಲ್ಲಿನ ಸಿಬ್ಬಂದಿಗಳು ಮೀನಮೇಷ ಎಣಿಸುತ್ತಾರೆ. ಅಲ್ಲದೆ ರೋಗಿಗಳಿಗೆ ಅವಧಿ ಮೀರಿದ ಮಾತ್ರೆ ಮತ್ತು ಔಷಧಿಗಳನ್ನು ವಿತರಣೆ ಮಾಡುತ್ತಾರೆ. ಇದರ ಜೊತೆಗೆ ಸಿಬ್ಬಂದಿ ಹಾವು ಮತ್ತು ನಾಯಿ ಕಚ್ಚಿದ ರೋಗ ನಿರೋಧಕ ಔಷಧಿಗಳನ್ನು ಖಾಸಗಿ ಮೆಡಿಕಲ್‌ಗಳಿಗೆ ರಾತ್ರೋರಾತ್ರಿ ಮಾರಾಟ ಮಾಡುತ್ತಾರೆ. ಈ ಅವ್ಯವಸ್ಥೆಯನ್ನು ಚುನಾಯಿತ ಪ್ರತಿನಿಧಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು ಸರಿಪಡಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉತ್ತಮ ಆರೋಗ್ಯಾಧಿಕಾರಿಯನ್ನು ನೇಮಕ ಮಾಡುವ ಸಂಬಂಧ ಕೂಡಲೆ ಈ ಭಾಗದ ಶಾಸಕ ಎ.ಮಂಜುನಾಥ್‌ ಮತ್ತು ಸಂಬಂಧಿ​ಸಿದ ಅಧಿಕಾರಿಗಳು ಕ್ರಮ ವಹಿಸಬೇಕು. ಅಲ್ಲದೆ ಆಸ್ಪತ್ರೆಯಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆ ಸುದ್ದಿ ತಿಳಿಯುತ್ತಿದ್ದಂತೆ ಡಿಎಚ್‌ಒ ಅಮರನಾಥ್‌, ತಾಲೂಕು ಆರೋಗ್ಯಾಧಿಕಾರಿ ಶಶಿಕಲಾ ಸ್ಥಳಕ್ಕೆ ದೌಡಾಯಿಸಿ ಪ್ರತಿಭಟನಾಕಾರರಿಂದ ಸಮಸ್ಯೆ ಆಲಿಸಿದರು. ಅಲ್ಲದೇ ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದು ಪ್ರತಿಭಟನಾಕಾರ​ರಿಗೆ ಭರ​ವಸೆ ನೀಡಿ ಮನವೊಲಿಸಿದರು.

Follow Us:
Download App:
  • android
  • ios