ಬಳ್ಳಾರಿ (ಫೆ.05):  ವಿಜಯನಗರ ಜಿಲ್ಲೆಯ ಅಧಿಕೃತ ಘೋಷಣೆ ದಿನಾಂಕದ ಕಾತರದ ನಡುವೆ ನೂತನ ಜಿಲ್ಲೆ ರಚನೆಗೆ ವಿರೋಧದ ಬಲ ಕುಸಿತಗೊಂಡಿರುವುದು ಕಂಡು ಬಂದಿದೆ.

ಗುಲ್ಬರ್ಗದ ಪ್ರಾದೇಶಿಕ ಆಯುಕ್ತರು ಕಂದಾಯ ಇಲಾಖೆಯ ಅಪರ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ಜಿಲ್ಲೆಯನ್ನು ಬೆಂಬಲಿಸಿ 10,513 ಅರ್ಜಿಗಳು ಸಲ್ಲಿಕೆಯಾಗಿದ್ದರೆ, ವಿರೋಧಿಸಿದ ಆಕ್ಷೇಪಣೆಯಾಗಿ 4739 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿವೆ ಎಂದು ತಿಳಿಸಿದ್ದಾರೆ.

ಅಲ್ಲದೆ; ಮುಂದಿನ ಹಂತದ ಕ್ರಮಗಳನ್ನು ಕೈಗೊಳ್ಳುವಂತೆ ಪತ್ರದಲ್ಲಿ ಹೇಳಿದ್ದಾರೆ. ಇದರಿಂದ ಜಿಲ್ಲಾ ವಿರೋಧಿಯ ಕೂಗಿಗಿಂತ ನೂತನ ಜಿಲ್ಲೆಯನ್ನು ಬೆಂಬಲಿಸಿ ಸಲ್ಲಿಸಿರುವ ಅರ್ಜಿಯ ಬಲವೇ ಹೆಚ್ಚಾಗಿದೆ ಎಂದು ಗೊತ್ತಾಗುತ್ತದೆ.

ವಿಜಯನಗರ ಸಾಮ್ರಾಜ್ಯ ಸ್ಥಾಪಕರು ಯಾರು? ವಿದ್ಯಾರ್ಥಿಯ ಫನ್ನಿ ಉತ್ತರ ವೈರಲ್ .

ಈ ಬೆಳವಣಿಗೆ ಹೊಸ ಜಿಲ್ಲೆಯ ರಚನೆಗೆ ಹಾದಿ ಸುಗಮವಾಗಲಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಕರ್ನಾಟಕ ಭೂ ಕಂದಾಯ ಅಧಿನಿಯಮದಡಿ ಸ್ವೀಕೃತಗೊಂಡಿರುವ ಎಲ್ಲ ಆಕ್ಷೇಪಣೆಗಳು ಹಾಗೂ ಸಲಹೆಗಳನ್ನು ಪರಿಶೀಲಿಸಿ, ಷರಾ ನಮೂದಿಸಿಯೇ ಜಿಲ್ಲಾಧಿಕಾರಿಗಳು ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ ಎಂದು ಪತ್ರದಲ್ಲಿ ಪ್ರಾದೇಶಿಕ ಆಯುಕ್ತರು ಖಚಿತಪಡಿಸಿದ್ದಾರೆ.

ಹೆಚ್ಚು ಸದ್ದು ಮಾಡುತ್ತಿರುವ ಪತ್ರ:  ಜಿಲ್ಲಾ ವಿಭಜನೆಗೆ ಸಂಬಂಧಿತ ಬೆಳವಣಿಯ ಕುತೂಹಲ ನೂತನ ಜಿಲ್ಲೆ ಪರ ಹಾಗೂ ವಿರೋಧ ಮಾಡುವವರಲ್ಲಿದೆ. ಹೀಗಾಗಿ ಹೊಸ ಜಿಲ್ಲೆಯ ಪ್ರತಿಯೊಂದು ಬೆಳವಣಿಗೆ ತೀವ್ರ ಕುತೂಹಲ ಮೂಡಿಸಿದೆ. ಇದೀಗ ಕಂದಾಯ ಇಲಾಖೆಗೆ ಕಲಬುರ್ಗಿ ಪ್ರಾದೇಶಿಕ ಆಯುಕ್ತರು ಬರೆದಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ವಿಜಯನಗರ ಜಿಲ್ಲೆಯ ಘೋಷಣೆಯಾಗಲಿದೆ ಎಂದು ಬೆಂಬಲಿತರು ಹರ್ಷ ವ್ಯಕ್ತಪಡಿಸುತ್ತಿದ್ದರೆ, ಜಿಲ್ಲೆ ಇಬ್ಭಾಗವಾಗಬಾರದು ಎಂದು ಹೋರಾಟ ನಡೆಸುತ್ತಿರುವವರು, ಕಾನೂನು ಹೋರಾಟದ ಮೂಲಕ ಜಿಲ್ಲೆ ತುಂಡಾಗುವುದನ್ನು ತಡೆಯುತ್ತೇವೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ಫೆ. 5 ರಂದು ವಿಜಯನಗರ ನೂತನ ಜಿಲ್ಲೆಯ ಅಧಿಕೃತ ಘೋಷಣೆಯಾಗಲಿದೆ ಎಂಬ ಚರ್ಚೆಗಳಿಗೆ ಪ್ರಾದೇಶಿಕ ಆಯುಕ್ತರು ಬರೆದಿರುವ ಪತ್ರ ಹೆಚ್ಚು ಮಹತ್ವ ಪಡೆದುಕೊಂಡಿದೆ.

30 ದಿನಗಳ ಹೋರಾಟ:  11 ತಾಲೂಕುಗಳನ್ನು ಹೊಂದಿರುವ ದೊಡ್ಡ ಜಿಲ್ಲೆಯನ್ನು ವಿಭಜಿಸಿ ಆಡಳಿತಾತ್ಮಕ ಅನುಕೂಲ ಮಾಡಿಕೊಡಬೇಕು ಎಂಬ ನೆಪದಲ್ಲಿ ಬಳ್ಳಾರಿಯನ್ನು ಇಬ್ಭಾಗಿಸಿ ನೂತನ ವಿಜಯನಗರ ಜಿಲ್ಲೆ ರಚನೆಗೆ ಮುಂದಾಗುತ್ತಿದ್ದಂತೆಯೇ ಬಳ್ಳಾರಿ, ಸಿರುಗುಪ್ಪ ಹಾಗೂ ಕಂಪ್ಲಿ ತಾಲೂಕುಗಳಿಂದ ವಿರೋಧ ವ್ಯಕ್ತವಾಯಿತು.

ಏತನ್ಮಧ್ಯೆ ಹೊಸ ಜಿಲ್ಲೆ ರಚನೆಯ ಪರವಾದ ಕೂಗುಗಳು ಸಹ ಕೇಳಿ ಬಂದವು. ಜಿಲ್ಲಾ ವಿಭಜನೆಯ ತೀರ್ಮಾನವನ್ನು ಕೈಗೊಂಡಿದ್ದ ಸರ್ಕಾರ ಕಳೆದ 2020ರ ಡಿ. 14 ರಂದು ಆಕ್ಷೇಪಣೆಗಳನ್ನು ಆಹ್ವಾನಿಸಿ, ಒಂದು ತಿಂಗಳ ಅವಕಾಶ ನೀಡಿತ್ತು. ಜ. 14ರ ವರೆಗೆ ಆಕ್ಷೇಪಣೆಗೆ ಅವಕಾಶವಿತ್ತು. ಜಿಲ್ಲೆ ವಿಭಜನೆ ವಿರೋಧಿಸಿ 50 ಸಾವಿರಕ್ಕೂ ಹೆಚ್ಚು ಆಕ್ಷೇಪಣೆಗಳನ್ನು ಸಲ್ಲಿಸಲಾಗಿದೆ ಎಂದು ವಿವಿಧ ಸಂಘಟನೆಗಳು ಹೇಳಿದ್ದವು. ಆದರೆ, ಇದೀಗ ಜಿಲ್ಲೆಯ ವಿಭಜನೆಯ ಆಪೇಕ್ಷಕ್ಕಿಂತಲೂ ಬೆಂಬಲವೇ ಹೆಚ್ಚಾಗಿರುವುದು ಪ್ರಾದೇಶಿಕ ಆಯುಕ್ತರ ಪತ್ರದಿಂದ ತಿಳಿದು ಬಂದಿದೆ.

ಹೊಸ ಜಿಲ್ಲೆಯನ್ನು ವಿರೋಧಿಸಿ ಆಕ್ಷೇಪಣೆಗಳನ್ನು ಸಲ್ಲಿಸಲಾಗಿದೆ. ಇದರ ನಡುವೆಯೂ ಸರ್ಕಾರ ವಿಜಯನಗರ ಜಿಲ್ಲೆ ರಚನೆಗೆ ಮುಂದಾದರೆ ಕಾನೂನು ಹೋರಾಟ ನಡೆಸಲಾಗುವುದು.

ಸಿರಿಗೇರಿ ಪನ್ನರಾಜ್‌, ಹೋರಾಟ ಸಮಿತಿ ಮುಖಂಡರು, ಬಳ್ಳಾರಿ