ಬೆಂಗಳೂರು(ಫೆ.20): ರಸ್ತೆಯಲ್ಲಿ ಮಳೆ ನೀರು ನಿಲ್ಲುವುದು, ಒಳಚರಂಡಿಯಲ್ಲಿ ನೀರು ಸರಿಯಾಗಿ ಹರಿದು ಹೋಗದೆ ತೊಂದರೆ ಎದುರಿಸುತ್ತಿರುವ ಜನರು ಬಿಬಿಎಂಪಿ ಮೇಯರ್‌ ಹಾಗೂ ಆಯುಕ್ತರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.ಈ ವೇಳೆ ಜನರು ಹಾಗೂ ಮೇಯರ್‌ ನಡುವೆ ಮಾತಿನ ಚಕಮಕಿ ಸಹ ನಡೆಯಿತು.

ಬುಧವಾರ ಮೇಯರ್‌ ಗೌತಮ್‌ಕುಮಾರ್‌ ನೇತೃತ್ವದಲ್ಲಿ ಬಿಬಿಎಂಪಿ ಆಯುಕ್ತರು ಹಾಗೂ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಈ ವೇಳೆ ಒಂದು ಸಭೆ ನಡೆಸಿ, ಬೈಕ್‌ನಲ್ಲಿ ಸುತ್ತಿದರೆ ವಾರ್ಡ್‌ ಸಮಸ್ಯೆ ಪರಿಹಾರವಾಗುತ್ತಾ ಎಂದು ಚಿಕ್ಕಪೇಟೆ ವಾರ್ಡ್‌ ಸಾರ್ವಜನಿಕರು ಆಯುಕ್ತ ಮತ್ತು ಮೇಯರ್‌ ಅವರನ್ನು ಪ್ರಶ್ನೆ ಮಾಡಿದ್ದಾರೆ.

ಪ್ರಯಾಣಿಕರ ಗಮನಕ್ಕೆ: ಶಿವರಾತ್ರಿ ಪ್ರಯುಕ್ತ 300 ಹೆಚ್ಚುವರಿ KSRTC ಬಸ್‌

ಬಳಿಕ ಬೈಕ್‌ ಬಿಟ್ಟು ಗಾಂಧಿನಗರ ವಾರ್ಡ್‌ ಹಾಗೂ ಚಿಕ್ಕಪೇಟೆ ವಾರ್ಡ್‌ ಬಿ.ವಿ.ಕೆ ಅಯ್ಯಂಗರ್‌ ರಸ್ತೆಯ ಅಭಿನಯ್‌ ಚಿತ್ರ ಮಂದಿರದಿಂದ ಕಾಲ್ನಡಿಗೆಯ ಮೂಲಕ ಮೇಯರ್‌ ಪರಿಶೀಲನೆ ಪ್ರಾರಂಭಿಸಿದರು. ಅವೆನ್ಯೂ ರಸ್ತೆ ಹಾಗೂ ಸುಲ್ತಾನ್‌ಪೇಟೆಯಲ್ಲಿ ತಪಾಸಣೆ ನಡೆಸುವ ವೇಳೆ ಸಾರ್ವಜನಿಕರು ಮಳೆ ಬಂದರೆ ರಸ್ತೆಯಲ್ಲೇ ನೀರು ನಿಲ್ಲುತ್ತದೆ. ಒಳಚರಂಡಿ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ ಎಂದು ದೂರುಗಳ ಸುರಿಮಳೆ ಸುರಿಸಿದ್ದಾರೆ.

ಏರುಧ್ವನಿಯಲ್ಲಿ ಸಾರ್ವಜನಿಕರು ಪ್ರಶ್ನೆ ಮಾಡಿದ್ದಕ್ಕೆ ಗರಂ ಆದ ಮೇಯರ್‌ ‘ನಾವು ಕೆಲಸ ಮಾಡುವುದಕ್ಕೆ ಬಂದಿರುವುದು, ಹೀಗೆ ಮಾತನಾಡುತ್ತಾ ಇದ್ದರೆ ಹೇಗೆ’ ಎಂದು ಪ್ರಶ್ನೆ ಮಾಡಿದರು. ಒಂದು ಹಂತದಲ್ಲಿ ‘ನೀವೇ ಮಾಡಿಕೊಳ್ಳಿ’ ಎಂದರು. ಬಳಿಕ ಮೇಯರ್‌ ನೀವು ಸರಿಯಾಗಿ ಕೆಲಸ ಮಾಡದೆ ಇರುವುದರಿಂದ ನಾವು ಸಾರ್ವಜನಿಕರ ಬಳಿ ಬೈಸಿಕೊಳ್ಳಬೇಕಾಗಿದೆ ಎಂದು ಜಲ ಮಂಡಳಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

NRC, ಮೋದಿ ವಿರುದ್ಧ ಕವನ ವಾಚನ: ಪತ್ರಕರ್ತರಿಗೆ ಷರತ್ತು ಬದ್ಧ ಜಾಮೀನು

ಪರಿಶೀಲನೆ ವೇಳೆ ಮೇಯರ್‌ ಗೌತಮ್‌ ಕುಮಾರ್‌, ಬಿ.ವಿ.ಕೆ ಅಯ್ಯಂಗಾರ್‌ ರಸ್ತೆ, ಅವೆನ್ಯೂ ರಸ್ತೆ, ಮಾಮೂಲ್‌ಪೇಟೆ, ಸುಲ್ತಾನ್‌ ಪೇಟೆ, ತರಗುಪೇಟೆ, ಕಾಟನ್‌ ಪೇಟೆಯಲ್ಲಿ ಸಾರ್ವಜನಿಕರಿಂದ ದೂರುಗಳನ್ನು ಕಾಲಮಿತಿಯಲ್ಲಿ ಪರಿಹಾರ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣ

ಕಾಟನ್‌ಪೇಟೆ ಮುಖ್ಯರಸ್ತೆಯನ್ನು 1.1 ಕಿ.ಮೀ ಉದ್ದದ ಟೆಂಡರ್‌ ಶ್ಯೂರ್‌ನಡಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಈಗಾಗಲೇ 700 ಮೀಟರ್‌ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಉಳಿದ 400 ಮೀಟರ್‌ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಮೂರು ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದರು.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ.ಮೋಹನ್‌, ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌, ಬೃಹತ್‌ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಮೋಹನ್‌ ಕುಮಾರ್‌, ಸ್ಥಳೀಯ ಪಾಲಿಕೆ ಸದಸ್ಯೆ ಲೀಲಾ ಶಿವಕುಮಾರ್‌, ವಲಯ ವಿಶೇಷ ಆಯುಕ್ತ ಬಸವರಾಜು, ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್‌ ರಮೇಶ್‌, ವಲಯ ಜಂಟಿ ಆಯುಕ್ತ ಚಿದಾನಂದ್‌, ಮುಖ್ಯಆರೋಗ್ಯಾಧಿಕಾರಿ ಡಾ.ವಿಜೇಂದ್ರ, ಅಧೀಕ್ಷಕ ಅಭಿಯಂತರ ಲೋಕೇಶ್‌ ಮೊದಲಾದವರು ಇದ್ದರು.