Asianet Suvarna News Asianet Suvarna News

ಬೆಳಗಾವಿ: ಭೂತರಾಮನಹಟ್ಟಿ ಝೂಗೆ ಬರಲಿವೆ ಹುಲಿ, ಸಿಂಹ..!

ವನ್ಯಪ್ರಾಣಿಗಳ ದತ್ತು ಪಡೆಯಲು ಆಸಕ್ತಿ ತೋರಿಸಿ: ಅಶೋಕ ಪಾಟೀಲ ಕರೆ| ಬೆಳಗಾವಿ ನಗರದ ಪ್ರಮುಖ ಕೈಗಾರಿಕೆಗಳು, ವಾಣಿಜ್ಯೋದ್ಯಮಿಗಳು ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌)ಯನ್ನು ನಮ್ಮ ಝೂಗೆ ಬಳಕೆ ಮಾಡಲು ಮುಂದೆ ಬರಬೇಕು|

People Should Come to Adoption of Animals in Bhutaramanahatti Zoo in Belagavi
Author
Bengaluru, First Published Aug 1, 2020, 12:26 PM IST

ಬೆಳಗಾವಿ(ಆ.01):  ಝೂ ಅಥಾರಿಟಿ ಕರ್ನಾಟಕ ವತಿಯಿಂದ zoos of karnataka app ಬಿಡುಗಡೆ ಮಾಡಲಾಗಿದ್ದು ವನ್ಯಪ್ರಾಣಿ ಪ್ರಿಯರು ಪ್ರಾಣಿಗಳನ್ನು ದತ್ತು ಪಡೆಯಲು ಮುಂದೆ ಬರಬೇಕು ಎಂದು ಬೆಳಗಾವಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ ಪಾಟೀಲ ಕರೆ ನೀಡಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೂಗಲ್‌ ಪ್ಲೇ ಸ್ಟೋರ್‌ ಮೂಲಕ ಪ್ರತಿ ನಾಗರಿಕರು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು, ಪ್ರಾಣಿಗಳ ದತ್ತು ಇಲ್ಲವೇ ದೇಣಿಗೆ ನೀಡಿ ವನ್ಯಪ್ರೀತಿ ಮೆರೆಯಬೇಕು ಎಂದರು. ಹುಲಿ, ಸಿಂಹ, ಚಿರತೆ, ಹೈನಾ, ಕರಡಿ ಸೇರಿದಂತೆ ಇತರೆ ಪ್ರಾಣಿಗಳನ್ನು ಸಹ ಬೆಳಗಾವಿ ಭೂತರಾಮನಹಟ್ಟಿರಾಣಿ ಚನ್ನಮ್ಮ ಪ್ರಾಣಿಸಂಗ್ರಹಾಲಯಕ್ಕೆ ತರಲಾಗುತ್ತಿದೆ. ಹೊಸ ಆ್ಯಪ್‌ನಲ್ಲಿ ರಾಜ್ಯದ 9 ಪ್ರಾಣಿ ಸಂಗ್ರಹಾಲಯಗಳ ಮಾಹಿತಿ ಲಭ್ಯವಿದೆ. ಪ್ರಾಣಿಗಳ ದತ್ತು ಪಡೆಯುವ ದಾನಿಗಳು ಅರಣ್ಯ ಇಲಾಖೆಯನ್ನು ಸಂಪರ್ಕಿಸಬಹುದು ಎಂದರು.

ಡಾ. ಬಿ.ಆರ್. ಅಂಬೇಡ್ಕರ್‌ ಅವರಿಗೆ ಊಟ ಬಡಿಸಿದ್ದ ಬೆಳಗಾವಿ ಸಿದ್ದವ್ವ ಇನ್ನಿಲ್ಲ

ಭೂತರಾಮನಹಟ್ಟಿರಾಣಿ ಚನ್ನಮ್ಮ ಪ್ರಾಣಿ ಸಂಗ್ರಹಾಲಯದ ಆರ್‌ಎಫ್‌ಒ ಹಾಗೂ ಕ್ಯುರೇಟರ್‌ ರಾಕೇಶ ಅರ್ಜುನವಾಡ ಆ್ಯಪ್‌ ಬಳಕೆಯ ಮಾಹಿತಿ ನೀಡಿದರು. ಪ್ಲೇ ಸ್ಟೋರ್‌ನಲ್ಲಿ ಆ್ಯಪ್‌ ಡೌನಲೋಡ್‌ ಮಾಡಿಕೊಂಡು Animal Adoption of Donation ಆಯ್ಕೆ ಮೂಲಕ ಪ್ರಾಣಿಗಳನ್ನು ಸಾಕಬಹುದು. ಬೆಳಗಾವಿ ಸಂಘ ಸಂಸ್ಥೆಗಳು, ದಾನಿಗಳು, ಸಾರ್ವಜನಿಕರು ಪ್ರಾಣಿಗಳ ದತ್ತು ಪಡೆಯಬಹುದು. ಜನ್ಮದಿನ, ವೈವಾಹಿಕ ವಾರ್ಷಿಕೋತ್ಸವ, ಹಿರಿಯರ ಸ್ಮರಣಾರ್ಥ, ಮಕ್ಕಳ ಹೆಸರಿನಲ್ಲಿ ಪ್ರಾಣಿಗಳನ್ನು ದತ್ತು ಪಡೆಯಬಹುದು ಎಂದರು.

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 80ಎ ಅಡಿ ದಾನಿಗಳಿಗೆ ಆದಾಯ ತೆರಿಗೆ ವಿನಾಯಿತಿ ಇರುತ್ತದೆ. ದಾನಿಗಳು ತಮ್ಮ ಕೈಲಾದ ಹಣ ದಾನ ಮಾಡುವ ಮೂಲಕ ಇಲ್ಲವೇ ಪ್ರಾಣಿ ಸಂಗ್ರಹಾಲಯದಲ್ಲಿರುವ 172 ಪ್ರಾಣಿಗಳ ಪೈಕಿ ಇಷ್ಟದ ಪ್ರಾಣಿಗಳನ್ನು ದತ್ತು ಪಡೆಯಬಹುದು. ಈ ಮೂಲಕ ಭೂತರಾಮನಹಟ್ಟಿಝೂ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.

ಬೆಳಗಾವಿಯ ಬಸವರಾಜ ಪರವಿನಾಯ್ಕರ ಮತ್ತು ಸಮೀರ ಸಿರಗುಪ್ಪಿ ಎಂಬುವವರು ಈಗಾಗಲೇ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಪ್ರಾಣಿಗಳ ದತ್ತು ಪಡೆದಿದ್ದಾರೆ ಎಂದ ಅವರು, ರಾಷ್ಟ್ರೀಯ ಪ್ರಾಣಿ ಸಂರಕ್ಷಣಾ ಮಾರ್ಗೋಪಾಯಗಳಲ್ಲಿ ಮೃಗಾಲಯಗಳು ಮಹತ್ತರ ಸ್ಥಾನ ಹೊಂದಿದ್ದು ವನ್ಯಜೀವಿ ಸಂರಕ್ಷಣೆ, ಪುನರ್ವಸತಿಗೆ ಝೂಗಳ ಮಹತ್ವ ಹೆಚ್ಚಾಗಿದೆ ಎಂದರು.

ನಗರದ ಪ್ರಮುಖ ಕೈಗಾರಿಕೆಗಳು, ವಾಣಿಜ್ಯೋದ್ಯಮಿಗಳು ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌)ಯನ್ನು ನಮ್ಮ ಝೂಗೆ ಬಳಕೆ ಮಾಡಲು ಮುಂದೆ ಬರಬೇಕು ಎಂದು ಮನವಿ ಮಾಡಿದರು. ಕಳೆದ ವರ್ಷ ರಾಜ್ಯದ 9 ಪ್ರಾಣಿ ಸಂಗ್ರಹಾಲಯಕ್ಕೆ 65 ಲಕ್ಷ ಪ್ರವಾಸಿಗರು ಝೂಗಳಿಗೆ ಆಗಮಿಸಿ 70 ಕೋಟಿಯಷ್ಟು ಹಣ ಸಂಗ್ರಹವಾಗಿತ್ತು. ಈ ವರ್ಷ ಬರಿ 5 ಲಕ್ಷ ಪ್ರವಾಸಿಗರು ಆಗಮಿಸಿ ಸಾಕಷ್ಟು ಪ್ರಮಾಣ ಕಡಿಮೆ ಆಗಿದೆ ಎಂದು ಖೇದ ವ್ಯಕ್ತಪಡಿಸಿದರು.
 

Follow Us:
Download App:
  • android
  • ios