ಬೆಂಗಳೂರು(ಫೆ.22): ಶ್ರೀರಾಮ ಮಂದಿರ ಸ್ಥಾಪನೆ ವಿಚಾರದಲ್ಲಿ ಸುಪ್ರೀಂಕೋರ್ಟ್‌ ಆದೇಶ ಪಾಲಿಸಿದರೂ ಕೂಡ ಹಿಂದೂ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಹಲ್ಲೆ, ದೌರ್ಜನ್ಯ ವಿರುದ್ಧ ಹಿಂದೂಗಳೆಲ್ಲರೂ ಸಂಘಟಿತರಾಗಿ ಹೋರಾಡಬೇಕೆಂದು ಶ್ರೀರಾಮಸೇನೆಯ ರಾಷ್ಟ್ರಾಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಕರೆ ನೀಡಿದ್ದಾರೆ. 

ಭಾನುವಾರ ಹಿಂದೂ ಜನಜಾಗೃತಿ ಸಮಿತಿ ಆನ್‌ಲೈನ್‌ನಲ್ಲಿ ಆಯೋಜಿಸಿದ್ದ ‘ಹಿಂದೂ ರಾಷ್ಟ್ರ-ಜಾಗೃತಿ ಸಭೆ’ಗೆ ಚಾಲನೆ ನೀಡಿ ಮಾತನಾಡಿದ ಅವರು, ಹಿಂದೂಗಳೇ ಬಹುಸಂಖ್ಯಾತರಿರುವ ರಾಷ್ಟ್ರದಲ್ಲಿ ಅದರಲ್ಲೂ ರಾಮಜನ್ಮಸ್ಥಳದಲ್ಲಿ ಮಂದಿರ ಸ್ಥಾಪಿಸಲು 500 ವರ್ಷ ಬೇಕಾಯಿತು. ನಿರಂತರ ಹೋರಾಟದ ಬಳಿಕ ಇದೀಗ ಕಾನೂನಾತ್ಮಕವಾಗಿ ರಾಮಮಂದಿರ ಸ್ಥಾಪಿಸುತ್ತಿದ್ದರೂ ಕೆಲವರು ಅಡ್ಡಿಪಡಿಸುತ್ತಿದ್ದಾರೆ. ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ ದರ್ಪ ಮೆರೆಯುತ್ತಿದ್ದಾರೆ ಎಂದು ಕಿಡಿ ಕಾರಿದರು.

ಹಿಂದಿನಿಂದಲೂ ದೇಶದಲ್ಲಿ ಹಿಂದೂಗಳ ಮೇಲೆ ಹಲ್ಲೆಗಳು ನಡೆಯುತ್ತಲೇ ಇವೆ. ಕಳೆದೆರಡು ವರ್ಷದಲ್ಲಿ ರಾಜ್ಯದಲ್ಲಿ 22 ಹಿಂದೂ ಕಾರ್ಯಕರ್ತರು ಮೃತಪಟ್ಟಿದ್ದಾರೆ. ಡಿಜೆ, ಕೆಜಿ ಹಳ್ಳಿಯಲ್ಲಿ ದಲಿತ ಶಾಸಕನ ಮನೆಗೆ ಹಾಗೂ ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಲಾಯಿತು. ನಗರದಲ್ಲಿ ರಾಮಮಂದಿರ ನಿಧಿ ಸಂಗ್ರಹ ವೇಳೆ ರಥಯಾತ್ರೆಯನ್ನು ಒಡೆದು ನಾಲ್ವರ ಮೇಲೆ ಹಲ್ಲೆ ನಡೆಸಿದರು. ಇನ್ನು ಇತ್ತೀಚೆಗೆ ದೆಹಲಿಯಲ್ಲಿ ರಿಂಕು ಶರ್ಮಾ ಎಂಬುವವನನ್ನು ಕೊಲ್ಲಲಾಯಿತು. ಇಂತಹ ದೌರ್ಜನ್ಯಗಳ ವಿರುದ್ಧ ಹೋರಾಡುವ ಹಿಂದೂ ಸಂಘಟನೆಗಳ ಜತೆ ಕೈಜೋಡಿಸಿ ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಶ್ರಮಿಸಬೇಕು ಎಂದು ಹೇಳಿದರು.

ದೆಹಲಿಯಲ್ಲಿ ರೈತರ ಹೆಸರಿನಲ್ಲಿ ಗಲಾಟೆ ನಡೆಸಲಾಗುತ್ತಿದ್ದು, ದೇಶದ ಪ್ರಧಾನಿಯನ್ನು ಬದಲಿಸಲು ಕುತಂತ್ರಗಳನ್ನು ರೂಪಿಸಲಾಗಿದೆ. ಈ ನಿಟ್ಟಿನಲ್ಲಿ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದರೆ ದೇಶ ವಿರೋಧಿ ಷಡ್ಯಂತ್ರಗಳು ಕಾಣಿಸುತ್ತವೆ ಎಂದರು.

ಬಾಬರ್‌ ಅನುಯಾಯಿಗಳಾದ PFI ಸಂಘಟನೆಯವರು ರಾಕ್ಷಸ ಕುಲದವರು: ಮುತಾಲಿಕ್‌

ಸನಾತನ ಸಂಸ್ಥೆಯ ಧರ್ಮಪ್ರಚಾರಕ ರಮಾನಂದಗೌಡ, ಹಿಂದೂಗಳ ಮೇಲಿನ ಹಲ್ಲೆ ಎದುರಿಸಲು ‘ಸ್ವರಕ್ಷಣಾ ಪ್ರಶಿಕ್ಷಣ’ ಕಲಿಸುತ್ತಿದ್ದು, ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು. ಜೊತೆಗೆ ರಾಷ್ಟ್ರೀಯ ದೇವಸ್ಥಾನ ಸಂಸ್ಕೃತಿ ರಕ್ಷಣಾ ಅಭಿಯಾನ ಆರಂಭಿಸಿದ್ದು, ಪಾಲ್ಗೊಳ್ಳುವವರು ಹೆಸರು ನೋಂದಾಯಿಸಿಕೊಳ್ಳಲು ವೆಬ್‌ಸೈಟ್‌ಗೆ www.hindujagruti.org ಭೇಟಿ ನೀಡುವಂತೆ ಕೋರಿದರು.

ಕಾರ್ಯಕ್ರಮದಲ್ಲಿ ಹಿಂದೂರಾಷ್ಟ್ರ ನಿರ್ಮಾಣದ ಸಂಕಲ್ಪಕ್ಕಾಗಿ ವೇದಮಂತ್ರ ಪಠಿಸಲಾಯಿತು. ಸನಾತನ ಸಂಸ್ಥೆಯ ಬಾಲಕರು ವಿಡಿಯೋ ಮೂಲಕ ಹಿಂದೂ ರಾಷ್ಟ್ರ ಕುರಿತು ಜಾಗೃತಿ ಮೂಡಿಸಿದರು. ಸಮಿತಿ ಸದಸ್ಯ ವಿವೇಕ್‌ ಪೈ, ರೂಪೇಶ್‌ ಗೋಕರ್ಣ, ಹಿಂದೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

20 ಸಾವಿರ ಮಂದಿ ವೀಕ್ಷಣೆ

ಹಿಂದೂ ಜನಜಾಗೃತಿ ಸಮಿತಿಯಿಂದ ಆನ್‌ಲೈನ್‌ ಮೂಲಕ ನಡೆದ ‘ಹಿಂದೂ ರಾಷ್ಟ್ರ- ಜಾಗೃತಿ ಸಭೆ’ಗೆ ಅಭೂತಪೂರ್ವ ಸಹಕಾರ ದೊರೆಯಿತು. ಸಮಿತಿಯು ತನ್ನ ಫೇಸ್‌ಬುಕ್‌ ಪುಟ ಹಾಗೂ ಯೂಟ್ಯೂಬ್‌ ಚಾನೆಲ್‌ನಲ್ಲಿ ಜಾಗೃತಿ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಕಲ್ಪಿಸಿತ್ತು. ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಹಂತ ಹಂತವಾಗಿ ಸುಮಾರು 20 ಸಾವಿರ ಮಂದಿ ವೀಕ್ಷಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶ್ರೀರಾಮಸೇನೆ ರಾಷ್ಟ್ರಾಧ್ಯಕ್ಷ ಪ್ರಮೋದ್‌ ಮುತಾಲಿಕ್‌, ಧರ್ಮ ಪ್ರಚಾರಕ ರಮಾನಂದಗೌಡ, ಸಮಿತಿ ರಾಜ್ಯ ಸಮನ್ವಯಕಾರ ಗುರುಪ್ರಸಾದ ಗೌಡ ಅವರು ಭಾರತವನ್ನು ಹಿಂದು ರಾಷ್ಟ್ರವಾಗಿಸಲು ತಿಳಿಸಿದ ವಿಷಯ, ಸಲಹೆಗಳನ್ನು ಆಲಿಸಿದರು. ಕೆಲವರು ಕಾಂಮೆಂಟ್‌ಗಳನ್ನು ಬರೆಯುವ ಮೂಲಕ ಜಾಗೃತಿ ಸಭೆಗೆ ಬೆಂಬಲ ವ್ಯಕ್ತಪಡಿಸಿದರು.