Tumakur : ಎಲ್ಲರೂ ಮನಸ್ಸು ಮಾಡಿದ್ದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ
ದೇಶದ ಪ್ರಗತಿಗೆ ಭ್ರಷ್ಟಾಚಾರ ಮಾರಕವಾಗಿದ್ದು, ಇದಕ್ಕೆ ಕಡಿವಾಣ ಹಾಕಬೇಕಿದೆ. ಭ್ರಷ್ಟಾಚಾರ ಎಷ್ಟೇ ಬೇರೂರಿದರೂ ಸಹ ನಾವೆಲ್ಲರೂ ಮನಸ್ಸು ಮಾಡಿದ್ದಲ್ಲಿ ಕಡಿವಾಣ ಹಾಕಬಹುದು ಎಂದು ತುಮಕೂರು ಲೋಕಾಯುಕ್ತ ಪೊಲೀಸ್ ಸೂಪರಿಂಟೆಂಡೆಂಟ್ ವಲೀಬಾಷಾ ಕರೆ ನೀಡಿದರು.
ತುಮಕೂರು (ನ.07): ದೇಶದ ಪ್ರಗತಿಗೆ ಭ್ರಷ್ಟಾಚಾರ ಮಾರಕವಾಗಿದ್ದು, ಇದಕ್ಕೆ ಕಡಿವಾಣ ಹಾಕಬೇಕಿದೆ. ಭ್ರಷ್ಟಾಚಾರ ಎಷ್ಟೇ ಬೇರೂರಿದರೂ ಸಹ ನಾವೆಲ್ಲರೂ ಮನಸ್ಸು ಮಾಡಿದ್ದಲ್ಲಿ ಕಡಿವಾಣ ಹಾಕಬಹುದು ಎಂದು ತುಮಕೂರು ಲೋಕಾಯುಕ್ತ ಪೊಲೀಸ್ ಸೂಪರಿಂಟೆಂಡೆಂಟ್ ವಲೀಬಾಷಾ ಕರೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಜನ ಸಾಮಾನ್ಯರು ತಮ್ಮ ದಿನನಿತ್ಯದ ಕಷ್ಟಕಾರ್ಪಣ್ಯಗಳಿಗೆ ಸಂಬಂಧಿಸಿದಂತೆ ಪರಿಹಾರ ಪಡೆಯಲು ಸರ್ಕಾರಿ (Govt) ಕಚೇರಿಗಳಿಗೆ ಬರುತ್ತಾರೆ. ಅವರನ್ನು ಅಲೆದಾಡಿಸದೆ ಕೆಲಸ ಮಾಡಿಕೊಡಬೇಕು ಅಥವಾ ತಾಂತ್ರಿಕ ಕಾರಣವಿದ್ದಲ್ಲಿ ಸೂಕ್ತ ಸ್ವೀಕೃತಿಯನ್ನು ನೀಡಬೇಕು. ಸರ್ಕಾರಿ ನೌಕರರು ಸಂಬಳ (Salary) ಪಡೆಯುತ್ತಿರುವುದು, ಸರ್ಕಾರಿ ವಸತಿ, ಸರ್ಕಾರಿ ವಾಹನ ಮುಂತಾದ ಎಲ್ಲಾ ಸವಲತ್ತುಗಳನ್ನು ಪಡೆಯುತ್ತಿರುವುದು ಜನರ ತೆರಿಗೆ ಹಣದಿಂದ. ಆದುದರಿಂದ ನಾವು ವೃತ್ತಿಬದ್ಧತೆಯನ್ನು ಕಾಪಿಟ್ಟುಕೊಳ್ಳಬೇಕಾಗುತ್ತದೆ ಎಂದರು.
ಸರ್ಕಾರಿ ಕಚೇರಿಗಳ ವಿವಿಧ ಇಲಾಖೆಗಳ ಮುಖ್ಯಸ್ಥರು ತಮ್ಮ ಸಿಬ್ಬಂದಿ ಮೇಲೆ ಪರಿಣಾಮಕಾರಿಯಾಗಿ ಹಿಡಿತ ಸಾಧಿಸಬೇಕು. ಪ್ರತಿ 15 ಅಥವಾ ತಿಂಗಳಿಗೊಮ್ಮೆ ಕಡತಗಳ ವಿಲೇವಾರಿ ಬಗ್ಗೆ ತಪಾಸಣೆ ನಡೆಸಬೇಕು. ಇದರಿಂದ ಕಡತಗಳ ಚಲನ-ವಲನ ತಂತಾನೆ ಪ್ರಾರಂಭವಾಗುತ್ತದೆ. ನನ್ನ ಕಚೇರಿ, ನನ್ನ ಸಿಬ್ಬಂದಿ, ನನ್ನ ಕಡತ ಎಂಬ ಮನೋಧೋರಣೆ ಅನುಸರಿಸುವ ಮೂಲಕ ಅಧಿಕಾರಿಗಳು ತಮ್ಮ ಕಚೇರಿ-ಸಿಬ್ಬಂದಿ-ಕಡತಗಳನ್ನು ಚೊಕ್ಕಟವಾಗಿಡಬೇಕಾಗುತ್ತದೆ. ಕಡತಗಳನ್ನು ವಿಲೇ ಮಾಡದೆ ಬಾಕಿ ಉಳಿಸಿಕೊಂಡಲ್ಲಿ ಮಧ್ಯವರ್ತಿಗಳು ಹುಟ್ಟಿಕೊಳ್ಳುತ್ತಾರೆ ಎಂದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾತನಾಡಿ, ಸರ್ಕಾರಿ ಸೇವೆಗೆ ಸೇರುವ ಮುನ್ನ ಸರ್ಕಾರ ಹಾಗೂ ಸರ್ಕಾರಿ ನೌಕರರಿಂದ ನಾವು ಏನನ್ನೂ ಬಯಸುತ್ತೇವೆಯೋ ಅದೇ ರೀತಿ ಸರ್ಕಾರಿ ಸೇವೆಗೆ ಸೇರಿದ ಮೇಲೂ ಸಹ ನಾವು ಪ್ರಾಮಾಣಿಕತೆಯನ್ನು ಕಾಯ್ದಿಟ್ಟುಕೊಳ್ಳಬೇಕಾಗುತ್ತದೆ. ಕೇವಲ ಹಣ ನೀಡುವುದು ತೆಗೆದುಕೊಳ್ಳುವುದಷ್ಟೇ ಭ್ರಷ್ಟಾಚಾರವಲ್ಲ. ಜಾತಿ ಆಧಾರಿತ ಕೆಲಸಗಳು, ಅಧಿಕಾರ ದುರುಪಯೋಗ ಮುಂತಾದ 65 ಪ್ರಕಾರಗಳು ಭ್ರಷ್ಟಾಚಾರದ ವ್ಯಾಪ್ತಿಗೆ ಒಳಪಡುತ್ತವೆ. ನಮ್ಮ ಕಚೇರಿಯನ್ನು ಶಿಸ್ತುಬದ್ಧವಾಗಿ ಇಟ್ಟುಕೊಳ್ಳಬೇಕು, ಕಡತಗಳ ಪರಿಶೀಲನೆ ಮಾಡದಿದ್ದಲ್ಲಿ ನಾವೂ ಸಹ ಭ್ರಷ್ಟಾಚಾರದಲ್ಲಿ ಪಾಲುದಾರರಿದ್ದ ಹಾಗೆ ಎಂದರು.
ಜನಸಾಮಾನ್ಯರಿಗೆ ಅಧಿಕಾರಿಗಳು ಕಚೇರಿಯಲ್ಲಿ ಸಿಗದಿದ್ದಲ್ಲಿ, ಆತ ತನ್ನ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ ಅಥವಾ ಜನರಿಂದ ದೂರವಿರಲು ಪ್ರಯತ್ನಿಸುತ್ತಿದ್ದಾನೆ ಎಂಬ ಅರ್ಥ ಬರುತ್ತದೆ. ದೇಶದ ಎಲ್ಲಾ ಪ್ರಮುಖ ಕಾಯ್ದೆಗಳಿಗಿಂತಲೂ ಲೋಕಾಯುಕ್ತ ಕಾಯ್ದೆ ಅತ್ಯಂತ ಪರಿಣಾಮಕಾರಿ ಕಾಯ್ದೆಯಾಗುತ್ತದೆ. ಸರ್ಕಾರಿ ನೌಕರರು, ಮಾನವೀಯತೆಯಿಂದ ಸರ್ಕಾರಿ ಕೆಲಸಗಳನ್ನು ನಿಗದಿತ ಕಾಲಮಿತಿಯೊಳಗೆ ಮಾಡಿಕೊಡಬೇಕಾಗುತ್ತದೆ ಎಂದು ಕರೆ ನೀಡಿದರು.
ತುಮಕೂರು ಲೋಕಾಯುಕ್ತ ನಿರೀಕ್ಷಕ ರಾಮರೆಡ್ಡಿ ಕೆ. ಅಧಿಕಾರಿಗಳಿಗೆ ಭ್ರಷ್ಟಾಚಾರ ನಿರ್ಮೂಲನೆ ಕುರಿತು ಪ್ರಮಾಣವಚನ ಬೋಧಿಸಿದರು.
ಅಪರ ಜಿಲ್ಲಾಧಿಕಾರಿ ಚೆನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್, ವಾರ್ತಾಧಿಕಾರಿ ಮಮತಾ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಧರ್, ತಹಸೀಲ್ದಾರ್ ಮೋಹನ್, ರೇಷ್ಮೆ ಇಲಾಖೆ ಉಪನಿರ್ದೇಶಕ ಬಾಲಕೃಷ್ಣ, ಆಹಾರ ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಗಂಗಯ್ಯ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಅಧಿಕಾರಿಗಳು ಮತ್ತು ಸರ್ಕಾರಿ ನೌಕರರು ಬದಲಾಗಬೇಕಿದೆ. ಏನು ಮಾಡಿದರೂ ನಡೆಯುತ್ತದೆ ಎಂಬ ಧೋರಣೆ ಬೇಡ. ಸರ್ಕಾರದ ಯೋಜನೆಗಳು ಭ್ರಷ್ಟಾಚಾರದ ಕಾರಣ ಪರಿಣಾಮಕಾರಿಯಾಗಿ ಅನುಷ್ಟಾನವಾಗುತ್ತಿಲ್ಲ. ಕಡತಗಳ ವಿಲೇವಾರಿ ತ್ವರಿತಗತಿಯಲ್ಲಿ ಆಗಬೇಕು. ಲೋಕಾಯುಕ್ತ ಅಧಿಕಾರಿಗಳು ಕಚೇರಿಗೆ ಆಗಮಿಸಿ ಕಡತಗಳ ಪರಿಶೀಲನೆ ಮಾಡುವ ಹಾಗೆ ಮಾಡಬೇಡಿ. ಭ್ರಷ್ಟಾಚಾರ ಎಷ್ಟೇ ಬೇರೂರಿದ್ದರೂ ಸಹ ನಾವೆಲ್ಲರೂ ಸೇರಿ ನಿರ್ಮೂಲನೆ ಮಾಡೋಣ.
ವಲೀಬಾಷಾ ಲೋಕಾಯುಕ್ತ ಪೊಲೀಸ್ ಸೂಪರಿಂಟೆಂಡೆಂಟ್