ಮಂಗಳೂರು [ಮಾ.17]:  ದೇವಾಲಯ, ಮಸೀದಿ ಮತ್ತು ಚರ್ಚಿಗೆ ಅಗತ್ಯವಿದ್ದರೆ ಮಾತ್ರ ತೆರಳಿ ಎಂದು ಮಾಜಿ ಸಚಿವ ಯು.ಟಿ ಖಾದರ್ ಹೇಳಿದರು. 

"

ಮಂಗಳೂರಿನಲ್ಲಿ ಮಾತನಾಡಿದ ಸಚಿವ ಯು.ಟಿ ಖಾದರ್ ಧಾರ್ಮಿಕ ಕೇಂದ್ರಗಳಿಗೆ ಅಗತ್ಯವಿದ್ದರೆ ಮಾತ್ರ ತೆರಳಬೇಕು. ದೇವರ ದರ್ಶನ ಯಾವಾಗಿದ್ದರೂ ಮಾಡಲು ಅವಕಾಶವಿದೆ ಎಂದು ಹೇಳಿದರು. 

ಮಸೀದಿಗೆ ತೆರಳಲು ಆಗದಿದ್ದರೆ ಮನೆಯಲ್ಲಿಯೇ ನಮಾಜ್ ಮಾಡಬಹುದು. ಜನರು ಈ ಬಗ್ಗೆ ಸೂಕ್ತ ತಿಳುವಳಿಕೆ ಹೊಂದಿರಬೇಕು. ಕೆಲವೊಂದು ಧಾರ್ಮಿಕ ಕಾರ್ಯಗಳನ್ನು ಮುಂದೂಡಲು ಸಾಧ್ಯವಾಗಲ್ಲ. ಆಗ ಹೆಚ್ಚಿನ ಮುಂಜಾಗ್ರತೆ ವಹಿಸಬೇಕು ಎಂದು ಹೇಳಿದ್ದಾರೆ. 

ಇನ್ನು ರಜೆ ಸಿಕ್ಕಿದೆ ಪ್ರವಾಸಕ್ಕೆ ತೆರಳಿ ಮಜಾ ಮಾಡುವುದಲ್ಲ. ಮನೆಯಲ್ಲಿಯೇ ಇರಬೇಕು. ಆರೋಗ್ಯದ ದೃಷ್ಟಿಯಿಂದ ಮುಂಜಾಗ್ರತೆ ವಹಿಸಬೇಕು ಎಂದು ಖಾದರ್ ಹೇಳಿದರು. 

ಇನ್ನು ಬೀಚ್, ಪ್ರವಾಸಿ ಸ್ಥಳಗಳಲ್ಲಿ ಪ್ರವೇಶ ನಿಷೇಧಿಸಬೇಕು. ಉಲ್ಲಂಘಿಸಿದಲ್ಲಿ ಫೈನ್ ಹಾಕಬೇಕು ಎಂದು ಖಾದರ್ ಹೇಳಿದರು. 

ಹಲವು ಮಾರ್ಗದಲ್ಲಿ KSRTC ಬಸ್ ಸಂಚಾರ ರದ್ದು...

ಇನ್ನು ಕಾಸರಗೋಡಿನ ವ್ಯಕ್ತಿಗೆ ಸೋಂಕು ತಗಲಿದ್ದು, ಆತನ ಮಂಗಳೂರು ಭೇಟಿ ಬಗ್ಗೆ ಗಮನ ಹರಿಸಬೇಕಿದೆ. ಕಾಸರಗೋಡು ಮತ್ತು ಕಲಬುರಗಿ ಭಾಗದ ಬಸ್ ಗಳ ಮಂಗಳೂರು ಸಂಚಾರ ಬಂದ್ ಮಾಡಬೇಕು. ಏರ್ ಪೋರ್ಟ್ ನಲ್ಲಿ ಇಂಟರ್ ‌ನ್ಯಾಶನಲ್ ಅಷ್ಟೇ ಅಲ್ಲದೇ ಡೊಮೆಸ್ಟಿಕ್ ವಿಮಾನ ಪ್ರಯಾಣಿಕರ ತಪಾಸಣೆಯೂ ಆಗಲಿ. ಕೆಲವರು ಹೊರದೇಶಗಳಿಂದ ಬೆಂಗಳೂರು, ಚೆನ್ನೈ ಅಂತೆಲ್ಲಾ ಬಂದು ಮಂಗಳೂರಿಗೆ ಬರುತ್ತಾರೆ ಅವರಿಗೆಲ್ಲಾ ತಪಾಸಣೆ ಮಾಡಬೇಕು ಎಂದಿದ್ದಾರೆ. 

ಇನ್ನು ಕರ್ನಾಟಕ ಬಂದ್ ಕೇವಲ ಎರಡು ವಾರ ಅಲ್ಲ, ಮೂರು ವಾರ ಮಾಡಬೇಕು. ನಮ್ಮಲ್ಲಿ ದಿನೇ ದಿನೇ ಪ್ರಕರಣಗಳು ಜಾಸ್ತಿಯಾಗುತ್ತಿದ್ದು, ಹೀಗಾಗಿ ಇದನ್ನ ವಿಸ್ತರಣೆ ಮಾಡಬೇಕು ಎಂದು ಖಾದರ್ ಹೇಳಿದರು.