ಶಿವಮೊಗ್ಗ (ಆ.17): ಜಿಲ್ಲೆಯಲ್ಲಿ ಈಗಾಗಲೇ ಕೋವಿಡ್‌ ವಾರ್ಡ್‌ ಮತ್ತು ಕೋವಿಡ್‌ ಆರೈಕೆ ಕೇಂದ್ರ ಸೇರಿ ಕೊರೋನಾ ಸೋಂಕಿತರ ಚಿಕಿತ್ಸೆಗೆಂದು ಸುಮಾರು 2 ಸಾವಿರ ಬೆಡ್‌ ವ್ಯವಸ್ಥೆ ಹೊಂದಲಾಗಿದ್ದು, ಜಿಲ್ಲಾಡಳಿತದಿಂದ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಸೋಂಕು ಹೆಚ್ಚಾಗದಂತೆ ತಡೆಯುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದರೂ ಕೂಡ ಸೋಂಕು ಹೆಚ್ಚಾಗುತ್ತಿರುವುದು ಗಂಭೀರವಾದ ವಿಚಾರ. 

ಜನರು ಹೆಚ್ಚು ಜಾಗೃತರಾಗಬೇಕಿದೆ. ಪ್ರತಿಯೊಬ್ಬರು ಮಾಸ್ಕ್‌ ಮತ್ತು ಸ್ಯಾನಿಟೈಸರ್‌ ಉಪಯೋಗಿಸಬೇಕು. ಈಗಾಗಲೇ, ಜಿಲ್ಲೆಯಲ್ಲಿ, 39,194 ಜನರಿಗೆ ಕೋವಿಡ್‌ ಟೆಸ್ಟ್‌ ಮಾಡಲಾಗಿದೆ. ಇದರಲ್ಲಿ 32,293 ಜನರಿಗೆ ನೆಗೆಟಿವ್‌ ಬಂದಿರುವುದು ಸ್ವಲ್ಪ ಸಮಾಧಾನ ತರುವ ವಿಷಯವಾಗಿದ್ದರೂ ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಬರುವವರಲ್ಲಿ ಸೋಂಕು ಹೆಚ್ಚಾಗುತ್ತಿದೆ. ಹೀಗಾಗಿ ಜನರು ಹೆಚ್ಚು ಜಾಗೃತರಾಗುವುದು ಒಳ್ಳೆಯದು ಎಂದು ತಿಳಿಸಿದರು. 

ಮಾಧ್ಯಮಗಳಲ್ಲಿ ಕೊರೋನಾ ಕುರಿತಾಗಿ ಪ್ರತಿನಿತ್ಯ ಸುದ್ದಿ ಬಿತ್ತರವಾಗುತ್ತಿದೆ. ಆದರೂ ಕೆಲವರು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಜನರೇ ಅರಿತು ಮಾಸ್ಕ್‌ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೋನಾದಿಂದ ದೂರವಿರಬೇಕೆಂದು ಸಲಹೆ ನೀಡಿದರು.