ಯಾದಗಿರಿ: ಇಬ್ರು ಸತ್ತ ಮೇಲೆ ಅಧಿಕಾರಿಗಳು ಓಡಿ ಬಂದ್ರು..!
ನಾಲ್ಕೈದು ದಿನಗಳಿಂದ ವಾಂತಿಭೇದಿಯಿಂದ ನರಳುತ್ತಿದ್ದದರೂ ಕೇಳದಿದ್ದ ಅಧಿಕಾರಿಗಳು, ಪಂಚಾಯ್ತಿ ಆಡಳಿತ ಕಾರ್ಯವೈಖರಿ ಬಗ್ಗೆ ಹೋತಪೇಟ ಜನರ ಅಕ್ರೋಶ
ಮಲ್ಲಯ್ಯ ಪೋಲಂಪಲ್ಲಿ
ಶಹಾಪುರ(ಅ.25): ಕಲುಷಿತ ನೀರು ಸೇವಿಸಿ ಇಬ್ಬರು ಮೃತಪಟ್ಟು, 40ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡ ಘಟನೆ ತಾಲೂಕಿನ ಹೋತಪೇಟೆಯಲ್ಲಿ ನಡೆದಿದೆ. ನಾಲ್ಕೈದು ದಿನಗಳ ಹಿಂದೆಯೇ ಗ್ರಾಮದಲ್ಲಿ ವಾಂತಿಭೇದಿ ಕಾಣಿಸಿಕೊಂಡಾಗ ಈ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದರಾದರೂ, ಎಚ್ಚೆತ್ತುಕೊಳ್ಳದ ಪಂಚಾಯ್ತು ಆಡಳಿತ ಇಬ್ಬರು ಸತ್ತ ಮೇಲೆ ಇದೀಗ ಗ್ರಾಮದಲ್ಲಿ ದೌಡಾಯಿಸುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಸುಮಾರು 6 ಸಾವಿರ ಜನಸಂಖ್ಯೆ ಹೊಂದಿರುವ ಇದು ಪಂಚಾಯ್ತಿ ಕೇಂದ್ರ ಸ್ಥಾನ. ಜೊತೆಗೆ, ಪ್ರಾಥಮಿಕ ಆರೋಗ್ಯ ಉಪ ಕೇಂದ್ರವೂ ಇಲ್ಲಿದೆ. ನಾಲ್ಕೈದು ದಿನಗಳ ಹಿಂದೆ ವಾಂತಿಭೇದಿ ಪ್ರಕರಣಗಳು ವರದಿಯಾಗುತ್ತದ್ದವು. ಕಲುಷಿತ ನೀರಿನ ಬಗ್ಗೆ ಜನರು ಪಂಚಾಯ್ತಿಗೆ ದೂರಿದ್ದಾರೆ. ಆದರೆ, ಆಗ ಅವರು ಮುತುವರ್ಜಿ ವಹಿಸಿರಲಿಲ್ಲ. ಯಾವಾಗ ಇಬ್ಬರು ಮೃತಪಟ್ಟು, 40ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡರೋ ಆಗ ಎಲ್ಲರೂ ಬಂದರು ಎನ್ನುವುದು ಗ್ರಾಮಸ್ಥರ ಆರೋಪ.
ಆದರೆ, ಹೊನ್ನಪ್ಪಗೌಡ ಬೇರೆ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಅನ್ನೋದು ವೈದ್ಯರ ಹೇಳಿಕೆ. ಮೂರ್ನಾಲ್ಕು ಬಾರಿ ವಾಂತಿಯಾಗಿದ್ದು, ಮನೆಯವರು ಗಾಬರಿಗೊಂಡು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಂದಿದ್ದಾರೆ. ವೈದ್ಯರು ಚಿಕಿತ್ಸೆ ನೀಡಿದಾಗಲೂ ಕಡಿಮೆ ರಕ್ತದೊತ್ತಡ (ಲೋ ಬಿಪಿ)ದಿಂದ ಹೆಚ್ಚಿನ ಚಿಕಿತ್ಸೆಗೆ ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿತ್ತು. ಮಧುಮೇಹ ಜಾಸ್ತಿಯಾಗಿ ಎದೆನೋವು ಕಾಣಿಸಿಕೊಂಡು ಹೊನ್ನಪ್ಪಗೌಡ ಸಾವನ್ನಪ್ಪಿದ್ದಾನೆ ಎಂದು ವೈದ್ಯರ ಸಮಜಾಯಿಷಿ.
ಪಿಎಸ್‌ಐ ನೇಮಕಾತಿ ಅಕ್ರಮ: ಶೀಘ್ರ 5 ಚಾರ್ಜ್‌ಶೀಟ್ ಸಲ್ಲಿಕೆ
ಇನ್ನು, ಕುಟುಂಬಸ್ಥರ ಹೇಳಿಕೆ ಪ್ರಕಾರ, ಹೊನ್ನಪ್ಪ ಗೌಡನಿಗೆ ಮೊದಲು ಯಾವುದೇ ಕಾಯಿಲೆಯೇ ಇರಲಿಲ್ಲ. ಏಕಾಏಕಿ ವಾಂತಿ ಭೇದಿ ಶುರುವಾಯಿತು. ತಕ್ಷಣ ಶಹಾಪುರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತಾದರೂ, ಅಲ್ಲಿ ಗುಣಮುಖರಾದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಯಾದಗಿರಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಆದರೆ, ಹೊನ್ನಪ್ಪಗೌಡ ಹೊಲಕ್ಕೆ ಕ್ರಿಮಿನಾಶಕ ಔಷಧಿ ಸಿಂಪರಣೆ ಮಾಡಿ ಬಂದ ನಂತರ ಅಸ್ವಸ್ಥನಾಗಿದ್ದರಿಂದ ಸಾವನ್ನಪ್ಪಿದ್ದಾನೆಂದು ಸುಳ್ಳು ಸುದ್ದಿ ಹಬ್ಬಿದ್ದು ಸತ್ಯಕ್ಕೆ ದೂರವಾಗಿದೆ. ಆತ ಹೊಲಕ್ಕೆ ಯಾವುದೇ ಔಷಧಿ ಸಿಂಪರಣೆಗೆ ತೆರಳಿರಲಿಲ್ಲ. ವಾಂತಿಭೇದಿಯಿಂದಲೇ ಮೃತಪಟ್ಟಿದ್ದು ವೈದ್ಯರು ಇಲ್ಲದ ಸಬೂಬು ಹೇಳುತ್ತಿದ್ದಾರೆ, ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಈ ರೀತಿ ಸುಳ್ಳು ಹೇಳುತ್ತಿದ್ದಾರೆಂದು ಕುಟುಂಬಸ್ಥರ ಆರೋಪವಾಗಿದೆ.
ಕಲುಷಿತ ನೀರು ಇಲ್ಲ :
ಊರ ಹೊರಗಿನ ಬಾವಿಯ ನೀರನ್ನು ಮತ್ತು ಟ್ಯಾಂಕ್‌ನಲ್ಲಿ ಸಂಗ್ರಹಿಸಿದ ನೀರನ್ನು ಸ್ಯಾಂಪಲ್ ತೆಗೆಸಿಕೊಂಡು ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿತ್ತು. ಎರಡರಲ್ಲೂ ನೀರು ಕಲುಷಿತವಾಗಿಲ್ಲವೆಂದು ವರದಿ ಬಂದಿದೆ. ಬಾವಿಯ ಸುತ್ತ ಭತ್ತದ ಗದ್ದೆಗಳಿವೆ ಇವೆ. ಗದ್ದೆಯ ರಸಾಯನಿಕ ಅಂಶ ನೀರಿನಲ್ಲಿ ಸಂಗ್ರಹವಾಗಿರಬಹುದು ಅನ್ನೋದು ತಾಲೂಕು ವೈದ್ಯಾಧಿಕಾರಿಗಳ ಮಾತು.
ಟ್ಯಾಂಕ್ ಮೂಲಕ ಗ್ರಾಮಕ್ಕೆ ನೀರು ಪೂರೈಸಲಾಗುತ್ತಿದೆ. ಮನೆಗಳಿಗೆ ನೀರು ಸರಬರಾಜು ಮಾಡುವ ಪೈಪ್‌ಗಳು ಅಲ್ಲಲ್ಲಿ ಒಡೆದಿವೆ. ಅಲ್ಲಿ ಕಲುಷಿತ ನೀರು ಸೇರ್ಪಡೆಯಾಗಿ ವಾಂತಿಭೇದಿ ಕಾಣಿಸಿಕೊಂಡಿದೆ. ಉಪ ಆರೋಗ್ಯ ಕೇಂದ್ರದಲ್ಲಿ ಸಕಲ ವ್ಯವಸ್ಥೆ ಮಾಡಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಾಲ್ಲೂಕು ವೈದ್ಯಾಕಾರಿ ಡಾ.ರಮೇಶ ಗುತ್ತೇದಾರ ತಿಳಿಸಿದರು.
6 ಜನ ಸಮುದಾಯ ಆರೋಗ್ಯ ಅಧಿಕಾರಿಗಳನ್ನು, ನಾಲ್ಕು ಜನ ಕಿರಿಯ ಆರೋಗ್ಯ ಅಧಿಕಾರಿಗಳು ಗ್ರಾಮದಲ್ಲಿ ಠಿಕಾಣಿ ಹೂಡಿದ್ದಾರೆ. ನಿರ್ವಹಣೆಯನ್ನು ಡಾ. ಕಾವ್ಯಶ್ರೀ ನೋಡಿಕೊಳ್ಳುತ್ತಿದ್ದಾರೆ. 108 ಅಂಬುಲೆನ್ಸ್ ಸ್ಥಳದಲ್ಲೇ ನಿಲ್ಲಿಸಲಾಗಿದೆ ಎಂದರು
ಪಂಚಾಯಿತಿ, ಆರೋಗ್ಯ ಅಧಿಕಾರಿಗಳ ನಿರ್ಲಕ್ಷ್ಯ :
ಗ್ರಾಮದಲ್ಲಿ ಅಲ್ಲಲ್ಲಿ ನಲ್ಲಿಯ ಪೈಪ್ ಒಡೆದು ಕೊಂಡು, ಚರಂಡಿ ನೀರು ಪೈಪ್‌ನಲ್ಲಿ ಸೇರ್ಪಡೆಗೊಳ್ಳುಗೊಂಡು ಕಲುಷಿತ ನೀರು ಸೇವೆನೆಯಿಂದ ವಾಂತಿಭೇದಿಗೆ ಕಾರಣವಾಗಿದೆ. ಇದರ ಬಗ್ಗೆ ಗ್ರಾಮ ಪಂಚಾಯಿತಿಗೆ ಸಾಕಷ್ಟುಸಲ ಗಮನಕ್ಕೆ ತರಲು ಹೋದರೆ ಪಂಚಾಯತಿಯಲ್ಲಿ ಯಾರು ಇರುವುದಿಲ್ಲ. ರಸ್ತೆ ತುಂಬಾ ಚರಂಡಿ ನೀರು ಹರಿಯುತ್ತಿವೆ. ಪಿಡಿಓ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಜನ ಆರೋಪಿಸುತ್ತಾರೆ.
ಯಾದಗಿರಿ: ಕಾಲುವೆಯಲ್ಲಿ ಯುವಕನ ಶವ ಪತ್ತೆ, ಸಂಶಯಾಸ್ಪದ ಸಾವು
40 ರಿಂದ 50 ಜನ ನಮ್ಮ ಗ್ರಾಮದಲ್ಲಿ ವಾಂತಿಭೇದಿಯಿಂದ ನರಳುತ್ತಿದ್ದಾರೆ. ಇಬ್ಬರು ವಾಂತಿಭೇದಿಯಿಂದ ಸಾವನ್ನಪ್ಪಿದ್ದಾರೆ. ಇದಕ್ಕೆ ಗ್ರಾಮ ಪಂಚಾಯಿತಿ ಕಾರಣ. ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಪಂಚಾಯತಿಯಲ್ಲಿ ಯಾವೊಬ್ಬ ಅಧಿಕಾರಿಯೂ ಇರುವುದೇ ಇಲ್ಲ. ಸಂಬಂಧಪಟ್ಟಅಧಿಕಾರಿಗಳು ಗ್ರಾಮದಲ್ಲಿ ಸ್ವಚ್ಛತೆ ಮತ್ತು ಶುದ್ಧ ಕುಡಿಯುವ ನೀರು ಒದಗಿಸಿ ಜನರ ಆರೋಗ್ಯ ಕಾಪಾಡಬೇಕು. : ಬಸವರಾಜ್ ಪಾಟೀಲ್, ಹೊತಪೇಟ ಗ್ರಾಮದ ಮುಖಂಡ.
ನಾವು ಸತ್ತರೂ ಯಾರು ಕೇಳುವುದಿಲ್ಲ. ಎಂಟು ದಿನದಿಂದ ಈ ವಾಂತಿ ಬೀದಿಯಿಂದ ನಾವು ನರಳುತ್ತಿದ್ದರೂ ಯಾವ ಅಧಿಕಾರಿಗಳು ನಮ್ಮ ಗೋಳು ಕೇಳಲು ಬಂದಿಲ್ಲ. ಇಬ್ಬರು ಸತ್ತ ಮೇಲೆ ಅಧಿಕಾರಿಗಳಿಗೆ ಎಚ್ಚರವಾಗಿ ಗ್ರಾಮಕ್ಕೆ ಬಂದಿದ್ದಾರೆ. ಸಂಬಂಧಪಟ್ಟಅಧಿಕಾರಿಗಳು ನಮಗೆ ಶುದ್ಧ ಕುಡಿಯುವ ನೀರು ಒದಗಿಸಿ, ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಬೇಕು. ಗ್ರಾಮದಲ್ಲಿ ಯಾರೇ ಸತ್ತರೂ ಸರ್ಕಾರಿ ಅಧಿಕಾರಿಗಳೇ ಕಾರಣ ಅಂತ ಗ್ರಾಮಸ್ಥ ಚಂದ್ರಕಾಂತ್. ಹೊತ್ಪೇಟ್ ತಿಳಿಸಿದ್ದಾರೆ.