Asianet Suvarna News Asianet Suvarna News

ಉಷ್ಣ ಹವೆಗೆ ಮಂಡ್ಯ ಜಿಲ್ಲೆಯ ಜನರು ತತ್ತರ...!

 ಮಂಡ್ಯ ಜಿಲ್ಲೆಯ ಕಡೆಗೆ ಇದುವರೆಗೆ ಉಷ್ಣ ಹವೆ ಕಾಣಿಸಿಕೊಂಡಿದ್ದೇ ಇಲ್ಲ. ಬಿಸಿಲ ತಾಪ ಹೆಚ್ಚಿದ್ದರೂ ಅದನ್ನು ಸಹಿಸಿಕೊಂಡಿದ್ದ ಜನರು ಉಷ್ಣಹವೆಯನ್ನು ತಡೆಯುವುದಕ್ಕೆ ಮಾತ್ರ ಅವರಿಂದ ಸಾಧ್ಯವಾಗುತ್ತಿಲ್ಲ.

 People of Mandya district Suffers  due to hot air  snr
Author
First Published May 6, 2024, 12:13 PM IST

 ಮಂಡ್ಯ ಮಂಜುನಾಥ 

 ಮಂಡ್ಯ :  ಮಂಡ್ಯ ಜಿಲ್ಲೆಯ ಕಡೆಗೆ ಇದುವರೆಗೆ ಉಷ್ಣ ಹವೆ ಕಾಣಿಸಿಕೊಂಡಿದ್ದೇ ಇಲ್ಲ. ಬಿಸಿಲ ತಾಪ ಹೆಚ್ಚಿದ್ದರೂ ಅದನ್ನು ಸಹಿಸಿಕೊಂಡಿದ್ದ ಜನರು ಉಷ್ಣಹವೆಯನ್ನು ತಡೆಯುವುದಕ್ಕೆ ಮಾತ್ರ ಅವರಿಂದ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಹೆಚ್ಚಿನ ಜನರು ದೇಹವನ್ನು ತಂಪಾಗಿಸಿಕೊಳ್ಳುವುದಕ್ಕೆ ನದಿಗಳಿಗೆ ಇಳಿದಿದ್ದಾರೆ. ನದಿ ಪಾತ್ರದ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವ ಜನರು ಉಷ್ಣಹವೆಯಿಂದ ಧಗ ಧಗಿಸುತ್ತಿರುವ ದೇಹವನ್ನು ನದಿಗಿಳಿದು ತಂಪಾಗಿಸಿಕೊಳ್ಳುತ್ತಿದ್ದಾರೆ.

ಶ್ರೀರಂಗಪಟ್ಟಣದ ಸಂಗಮ, ಗೋಸಾಯಿಘಾಟ್, ಶ್ರೀನಿಮಿಷಾಂಬ ದೇಗುಲ, ಎಡಮುರಿ, ಬಲಮುರಿ, ಸ್ನಾನಘಟ್ಟ, ಮಳವಳ್ಳಿ ತಾಲೂಕಿನ ಮುತ್ತತ್ತಿ ಸೇರಿದಂತೆ ಇನ್ನಿತರ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಬಂದವರೆಲ್ಲರೂ ನದಿಗಿಳಿದು ಈಜಾಡಿ ದೇಹವನ್ನು ತಂಪಾಗಿಸಿಕೊಳ್ಳುತ್ತಿದ್ದಾರೆ.

ಮಂಡ್ಯ: ಜಿಲ್ಲೆಯಲ್ಲಿ 7 ಅಡಿಯಷ್ಟು ಅಂತರ್ಜಲ ಕುಸಿತ

ಸಾಮಾನ್ಯವಾಗಿ ಜಿಲ್ಲೆಯಲ್ಲಿ ಕನಿಷ್ಠ 35 ಡಿಗ್ರಿ ಉಷ್ಣಾಂಶದಿಂದ 36 ಡಿಗ್ರಿಯವರೆಗೆ ತಾಪಮಾನವಿರುತ್ತಿತ್ತು. 2017ರ ಏಪ್ರಿಲ್ ೧೬ರಂದು ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರಿನಲ್ಲಿ 41.6 ಡಿಗ್ರಿ ತಾಪಮಾನ ದಾಖಲಾಗಿದ್ದು ಈವರೆಗಿನ ದಾಖಲೆಯಾಗಿದೆ. ಆ ನಂತರದಲ್ಲಿ 2019 ರ ಮಾರ್ಚ್ ೮ರಂದು ಮದ್ದೂರು ತಾಲೂಕಿನ ಮದ್ದೂರು-೨ರಲ್ಲಿ ೪೦.೫ ಡಿಗ್ರಿಯಷ್ಟು ಉಷ್ಣಾಂಶ ದಾಖಲಾಗಿತ್ತು. ಇನ್ನುಳಿದಂತೆ 39.9  ಡಿಗ್ರಿಯವರೆಗೆ ಅಲ್ಲಲ್ಲಿ ತಾಪಮಾನ ದಾಖಲಾಗಿದೆ. ಜಿಲ್ಲೆಯ ತಾಪಮಾನವೂ ಉತ್ತರ ಕರ್ನಾಟಕದ ಬಿಸಿಯನ್ನೇ ಎದುರಿಸುವ ಪರಿಸ್ಥಿತಿಗೆ ಬಂದು ನಿಂತಿದೆ.

ಬಿಸಿಲ ತಾಪ ಹೆಚ್ಚಿದ್ದರೂ ಉಷ್ಣ ಹವೆ ಬಿಸಿ ಹಿಂದೆಂದೂ ಜನರನ್ನು ತೀವ್ರವಾಗಿ ತಟ್ಟಿರಲಿಲ್ಲ. ಇಷ್ಟು ಬಿಸಿಲ ಬೇಗೆಯನ್ನು ಅನುಭವಿಸುತ್ತಿದ್ದ ಜನರು ಇನ್ನು ಮುಂದೆ ಉಷ್ಣ ಹವೆಯ ಬಿಸಿಯನ್ನೂ ಸಹಿಸಿಕೊಳ್ಳುವುದು ಅನಿವಾರ್ಯ ಎಂಬಂತಹ ಪರಿಸ್ಥಿತಿ ಸೃಷ್ಟಿಯಾಗಿದೆ.

ಹಿಂದೆಲ್ಲಾ ಬಿಸಿಲ ತಾಪ ಹೆಚ್ಚಿದ್ದರೂ ನೆರಳಿರುವ ಕಡೆ ಕುಳಿತಿದ್ದರೆ ಸಮಾಧಾನವೆನಿಸುವಂತಿತ್ತು. ಈಗ ಬಿಸಿಲಿನಿಂದ ಹೊರಬಂದು ನೆರಳಿಗೆ ಬಂದರೂ ಧಗೆ ಹೆಚ್ಚುತ್ತಿದೆ. ಬಿಸಿಯಾದ ಗಾಳಿ ದೇಹವನ್ನು ಇನ್ನಷ್ಟು ಬಿಸಿಯಾಗಿಸುತ್ತಿದೆ. ನೀರು ಎಷ್ಟು ಕುಡಿದರೂ ಅರ್ಧಗಂಟೆ ಕಾಲವೂ ದೇಹದಲ್ಲಿ ನೀರಿನಂಶ ಉಳಿಯುತ್ತಿಲ್ಲ. ಮಜ್ಜಿಗೆ, ಎಳನೀರು, ಹಣ್ಣಿನ ರಸ, ಐಸ್‌ಕ್ರೀಂ ಹೀಗೆ ಬಿಸಿಲಿನಿಂದ ಪಾರಾಗುವುದಕ್ಕೆ ಏನೆಲ್ಲಾ ಸರ್ಕಸ್ ಮಾಡುತ್ತಾ ದೇಹದಲ್ಲಿ ನೀರಿನಂಶ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೂ ಉಪಯೋಗಕ್ಕೆ ಬಾರದಂತಾಗಿದೆ.

ಕೆಂಡದಂಥ ಬಿಸಿಲು ಜನರನ್ನು ಕಂಗೆಡುವಂತೆ ಮಾಡಿದ್ದರೆ, ಉಷ್ಣ ಹವೆ ಜನರ ಬದುಕನ್ನು ಯಾತನಾಮಯವಾಗಿಸಿದೆ. ಮಧ್ಯಾಹ್ನದ ಬಿಸಿಲಿನಲ್ಲಿ ಓಡಾಡುವುದಕ್ಕೆ ಜನರು ಹೆದರುವಂತಹ ಪರಿಸ್ಥಿತಿ ನೆಲೆಸಿದೆ. ಬೇಸಿಗೆ ಮುಗಿದು ಮಳೆಯಾಗುವ ದಿನಗಳನ್ನು ಕಾತುರದಿಂದ ಎದುರುನೋಡುತ್ತಿದ್ದಾರೆ.

ಮಾರ್ಚ್ ತಿಂಗಳ ಅಂತ್ಯದಿಂದಲೇ ಆರಂಭವಾಗಬೇಕಿದ್ದ ಮುಂಗಾರು ಪೂರ್ವ ಮಳೆ ಇಲ್ಲಿಯವರೆಗೂ ನಿರೀಕ್ಷೆಯಂತೆ ಬಿದ್ದಿಲ್ಲ. ಭೂಮಿ ತಂಪಾಗುತ್ತಿಲ್ಲ. ಹಗಲು ವೇಳೆ ಬಿಸಿಲ ತಾಪ, ರಾತ್ರಿ ವೇಳೆ ಅಸಾಧ್ಯ ಧಗೆಯ ವಾತಾವರಣದಿಂದ ಜನರು ಬೆಂದುಹೋಗಿದ್ದಾರೆ. ಉಷ್ಣ ಹವೆ ಮೊದಲ ಬಾರಿ ಎದುರಾಗಿರುವುದರಿಂದ ಈ ಬಾರಿಯ ಬೇಸಿಗೆ ಜನರನ್ನು ಹೈರಾಣಾಗುವಂತೆ ಮಾಡಿದೆ.

ಸದಾಕಾಲ ಸಮಶೀತೋಷ್ಣ ವಾತಾವರಣದಲ್ಲೇ ಇರುತ್ತಿದ್ದ ಮಂಡ್ಯ ಜಿಲ್ಲೆಯ ಜನರಿಗೆ ಈ ಬಾರಿಯ ಬೇಸಿಗೆಯಲ್ಲಿ ಕಾಣಿಸಿಕೊಂಡಿರುವ ಉಷ್ಣ ಹವೆ ಹೊಸ ಅನುಭವದೊಂದಿಗೆ ಮುಂದಿನ ಬೇಸಿಗೆಯ ದಿನಗಳನ್ನು ನೆನೆಸಿಕೊಂಡು ಈಗಲೇ ಬೆಚ್ಚಿಬೀಳುವಂತೆ ಮಾಡಿದೆ. ಈ ತಾಪಮಾನ ಮತ್ತು ಉಷ್ಣ ಹವೆ ಮುಂದಿನ ವರ್ಷಗಳಲ್ಲಿ ಮುಂದುವರೆಯುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ.

ಬೇಸಿಗೆ ರಜೆ: ಕುಟುಂಬ ಸಮೇತ ನೀರಿಗಿಳಿದು ಸಂತಸ 

ಈಗ ಬೇಸಿಗೆ ರಜೆ. ಮಕ್ಕಳೊಂದಿಗೆ ಕುಟುಂಬ ಸಮೇತರಾಗಿ ನದಿ ಪಾತ್ರದ ಸ್ಥಳಗಳಿಗೆ ಆಗಮಿಸುತ್ತಿರುವ ಪ್ರವಾಸಿಗರು ಬೇಸಿಗೆಯ ಧಗೆಯಿಂದ ಪಾರಾಗಲು ನದಿಗಿಳಿಯುತ್ತಿದ್ದಾರೆ. ಮಳೆಯ ಕೊರತೆಯಿಂದ ನದಿ ಪಾತ್ರಗಳಲ್ಲೂ ನೀರಿನ ರಭಸವಿಲ್ಲ. ಸುರಕ್ಷಿತ ಜಾಗಗಳಲ್ಲಿ ಕುಟುಂಬ ಸಮೇತ ನದಿಗಿಳಿದು ಜಾಲಿಯಾಗಿ ಈಜಾಡುತ್ತಾ, ಜಲಕ್ರೀಡೆಯಾಡುತ್ತಾ ಸಂತಸದಿಂದ ಕಾಲ ಕಳೆಯುತ್ತಿದ್ದಾರೆ.

ಶ್ರೀರಂಗಪಟ್ಟಣ ಸಮೀಪವಿರುವ ಎಡಮುರಿ, ಬಲಮುರಿ, ಗೋಸಾಯ್‌ಘಾಟ್, ಶ್ರೀ ನಿಮಿಷಾಂಬ ದೇವಸ್ಥಾನ ಸೇರಿದಂತೆ ವಿವಿಧೆಡೆ ಪ್ರವಾಸಿಗರ ದಂಡೇ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದೆ. ಮೈಸೂರು, ಬೆಂಗಳೂರು ಸೇರಿದಂತೆ ಇತರೆ ಭಾಗಗಳಿಂದ ವಾಹನಗಳಲ್ಲಿ ಕುಟುಂಬ ಸಮೇತರಾಗಿ ಆಗಮಿಸುತ್ತಿದ್ದಾರೆ. ಪ್ರವಾಸಿಗರು ಸ್ಥಳ ವೀಕ್ಷಣೆಗಿಂತಲೂ ಹೆಚ್ಚಾಗಿ ನದಿಗಿಳಿದು ಸಂತಸದಿಂದ ಕಾಲ ಕಳೆಯುವುದಕ್ಕೆ ಹೆಚ್ಚಿನ ಸಮಯವನ್ನು ಮೀಸಲಿಡುತ್ತಿದ್ದಾರೆ. ಇದರಿಂದ ಬಿಸಿಲ ಧಗೆ, ಉಷ್ಣಹವೆಯಿಂದ ಪಾರಾಗಿ ತಂಪಾದ ಹಿತಾನುಭವ ಪಡೆದುಕೊಳ್ಳುವುದಕ್ಕೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.

ಬೆಳಗ್ಗೆ 10 ಗಂಟೆಗೆ ಬಂದವರು ಅಲ್ಲಿಯೇ ನೆರಳಿರುವ ಜಾಗಗಳಲ್ಲಿ ಉಪಹಾರ ಸೇವಿಸಿ ಆನಂತರ ಎಲ್ಲರೂ ನದಿಗಿಳಿದು ಸ್ವಚ್ಛಂದವಾಗಿ ಆಟವಾಡುತ್ತಾ ಕಾಲ ಕಳೆಯುವುದಕ್ಕೆ ಮುಂದಾಗುತ್ತಿದ್ದಾರೆ. ಮಹಿಳೆಯರು, ಮಕ್ಕಳೆಲ್ಲರೂ ಕುಟುಂಬದ ಸದಸ್ಯರೊಂದಿಗೆ ನೀರಿನಲ್ಲಿ ಮಿಂದು ದೇಹವನ್ನು ಸುದೀರ್ಘ ಅವಧಿಯವರೆಗೆ ತಂಪಾಗಿಸಿಕೊಂಡು ಬಿಸಿಲು ಕಡಿಮೆಯಾದ ಬಳಿಕ ದೇವಸ್ಥಾನ ಭೇಟಿ, ಸ್ಥಳ ವೀಕ್ಷಣೆಗೆ ತೆರಳುತ್ತಿದ್ದಾರೆ.

Follow Us:
Download App:
  • android
  • ios