'ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲು ಜನರು ಬಯಸುತ್ತಿದ್ದಾರೆ'

* ಸಿದ್ದರಾಮಯ್ಯ ಸಿಎಂ ಆಗಬೇಕು ಎನ್ನುವುದರಲ್ಲಿ ಎರಡು ಮಾತು ಇಲ್ಲ
* ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿನ ಆಡಳಿತ ಕೆಟ್ಟು ಹೋಗಿದೆ
* ಸಾಮೂಹಿಕ ನಾಯಕತ್ವದಲ್ಲಿಯೇ ಹೋಗೋಣ ಎಂದ ಡಿಕೆಶಿ

People of Karnataka Want to Siddaramaiah to Become CM Says Raghavendra Hitnal grg

ಕೊಪ್ಪಳ(ಜೂ.21):  ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ಸಿಎಂ ಆಗಬೇಕು ಎಂದು ಜನರೇ ಬಯಸುತ್ತಿದ್ದಾರೆ. ಅವರೇ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ನನ್ನ ಬೆಂಬಲವೂ ಇದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ನಾಯಕ ಸಿದ್ದರಾಮಯ್ಯ ಅವರು ಸಿಎಂ ಆಗಬೇಕು ಎನ್ನುವುದರಲ್ಲಿ ಎರಡು ಮಾತು ಇಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯವೂ ಆಗಿದೆ ಹಾಗೂ ಜನರ ಅಭಿಪ್ರಾಯವೂ ಆಗಿದೆ.

ಕೇವಲ ಜಮೀರ್‌ ಅಹ್ಮದ್‌ ಅವರು ಮಾತ್ರ ಹೇಳುತ್ತಿಲ್ಲ, ನಾಯಕರೆಲ್ಲರೂ ಅವರೇ ಸಿಎಂ ಆಗಬೇಕು ಎನ್ನುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿನ ಆಡಳಿತ ಕೆಟ್ಟು ಹೋಗಿರುವುದರಿಂದ ಉತ್ತಮ ಆಡಳಿತ ನೀಡಿದ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿ ಆಗಲಿ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಮುಖ್ಯಮಂತ್ರಿ ಆಯ್ಕೆ ಕುರಿತು ಹೈಕಮಾಂಡ್‌ ತೀರ್ಮಾನ ತೆಗೆದುಕೊಳ್ಳುತ್ತದೆ. ಹೈಕಮಾಂಡ್‌ ತೀರ್ಮಾನವೇ ಅಂತಿಮ. ಇದು ಅವರವರ ವೈಯಕ್ತಿಕ ಅಭಿಪ್ರಾಯ ಅಷ್ಟೆ. ಪಕ್ಷದ ಹಿತದೃಷ್ಟಿಯಿಂದ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ ಸರಿಯಾಗಿಯೇ ಹೇಳಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿಯೇ ಹೋಗೋಣ ಎಂದಿದ್ದಾರೆ. ಇದಕ್ಕೂ ನಾವು ಬದ್ಧವಾಗಿದ್ದೇವೆ. ನಾಯಕತ್ವದ ಕುರಿತು ನಾಯಕರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಹೇಳಿದರು.

ಜೆಡಿಎಸ್‌ ರಾಜ್ಯ ಕಾರ್ಯದರ್ಶಿ ಕಾಂಗ್ರೆಸ್‌ಗೆ ಸೇರ್ಪಡೆ

ಸಿದ್ದರಾಮಯ್ಯರಿಂದ ಕಿಟ್‌ ವಿತರಣೆಗೆ ಚಾಲನೆ:

ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಅವರು ತಮ್ಮ ವೈಯಕ್ತಿಕ ವೆಚ್ಚದಲ್ಲಿ 15 ಸಾವಿರ ದಿನಸಿ ಕಿಟ್‌ಗಳನ್ನು ವಿತರಣೆ ಮಾಡುತ್ತಿದ್ದಾರೆ. ಇದರ ಅಂದಾಜು ಮೌಲ್ಯ ಒಂದೂವರೆ ಕೋಟಿ ರುಪಾಯಿ ಎನ್ನಲಾಗುತ್ತಿದೆ. ಪ್ರತಿ ಬೂತ್‌ಮಟ್ಟದಲ್ಲಿಯೂ ಈಗಾಗಲೇ ತಮ್ಮ ಪಕ್ಷದ ಕಾರ್ಯಕರ್ತರಿಂದ ಗುರುತಿಸಲಾಗಿರುವವರಿಗೆ ಕಿಟ್‌ಗಳನ್ನು ವಿತರಣೆ ಮಾಡಲಾಗುತ್ತದೆ. ಈ ಕಿಟ್‌ ವಿತರಣೆಗೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ.

ಬೂತ್‌ಮಟ್ಟದಲ್ಲಿ ವಿತರಣೆ ನಡೆಯುವುದರಿಂದ ಕೊಪ್ಪಳ ನಗರದ ಸಾರ್ವಜನಿಕ ಮೈದಾನದಲ್ಲಿ ಕಿಟ್‌ ವಿತರಣೆಗೆ ಸಾಂಕೇತಿಕ ಚಾಲನೆ ನೀಡಲಾಗುತ್ತದೆ. ದಿನಸಿ ಕಿಟ್‌ಗಳನ್ನು ಹೊತ್ಯೊಯ್ಯುವ ವಾಹನಗಳಿಗೆ ಸಿದ್ದರಾಮಯ್ಯ ಅವರು ಹಸಿರು ಬಾವುಟ ತೋರಿಸುವ ಮೂಲಕ ಚಾಲನೆ ನೀಡುವರು ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಅವರು ತಿಳಿಸಿದ್ದಾರೆ.

ಸಿದ್ದರಾಮಯ್ಯ ಅವರ ಕಾರ್ಯಕ್ರಮ:

ಬೆಳಗ್ಗೆ ಬೆಂಗಳೂರಿನಿಂದ ವಿಮಾನ ಮೂಲಕ ಕೊಪ್ಪಳಕ್ಕೆ 11.30ಕ್ಕೆ ಆಗಮಿಸುವ ಸಿದ್ದರಾಮಯ್ಯ ನೇರವಾಗಿ ಶ್ರೀ ಗವಿಸಿದ್ಧೇಶ್ವರ ಮಠಕ್ಕೆ ಭೇಟಿ ನೀಡಲಿದ್ದಾರೆ. ಕೆಲಕಾಲ ಮಠದಲ್ಲಿ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳೊಂದಿಗೆ ಚರ್ಚೆ. ಅಲ್ಲಿಂದ ನೇರವಾಗಿ ಸಾರ್ವಜನಿಕ ಮೈದಾನಕ್ಕೆ ಆಗಮನ. ದಿನಸಿ ಕಿಟ್‌ ವಿತರಣಾ ಸಮಾರಂಭದಲ್ಲಿ ಭಾಗಿಯಾಗುತ್ತಾರೆ. ಮಧ್ಯಾಹ್ನ 12.10ರಿಂದ ಪ್ರಾರಂಭವಾಗುವ ಸಭೆ ಒಂದು ಗಂಟೆಯ ಕಾಲ ನಡೆಯಲಿದೆ. ಇದಾದ ಮೇಲೆ ಇಂದಿರಾ ಕ್ಯಾಂಟೀನ್‌ಗೆ ಭೇಟಿ, ಒಂದೈದು ನಿಮಿಷ ಅಲ್ಲಿದ್ದ ಫಲಾನುಭವಿಗಳೊಂದಿಗೆ ಮಾತುಕತೆ. ಇದಾದ ಮೇಲೆ ಊಟ ಮಾಡಿ, ಕುಕನೂರು ಮಾರ್ಗವಾಗಿ ಯಲಬುರ್ಗಾಕ್ಕೆ ತೆರಳುವರು. ಅಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮರಳಿ 4.30ಕ್ಕೆ ವಿಮಾನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.

ಸಾಮಾಜಿಕ ಅಂತರದೊಂದಿಗೆ ಸಭೆ:

ಸಮಾರಂಭದಲ್ಲಿ ಯಾವುದೇ ಹಾರ ತುರಾಯಿಗೆ ಅವಕಾಶ ಇಲ್ಲ. ಕೆ.ಎಂ. ಸಯ್ಯದ್‌ ಸೇರಿದಂತೆ ಹಲವರು ಪಕ್ಷ ಸೇರ್ಪಡೆಯಾಗಲಿದ್ದು, ಸಾಂಕೇತಿಕವಾಗಿ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ. ನಿಗದಿ ಮಾಡಿದ ಸ್ಥಳದಲ್ಲಿ ಸಾಮಾಜಿಕ ಅಂತರದೊಂದಿಗೆ ಸಭೆ ನಡೆಯಲಿದೆ. ಆಸನದ ವ್ಯವಸ್ಥೆಯನ್ನು ಅದರಂತೆಯೇ ಮಾಡಲಾಗಿದೆ.

ಕೋವಿಡ್‌ ಸಂಕಷ್ಟದ ಬಳಿಕ ಇದು ಮೊದಲ ಸಾರ್ವಜನಿಕ ಸಮಾರಂಭದ ಕಾರ್ಯಕ್ರಮವಾಗಿದೆ. ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಂತರ ಕಾಯ್ದುಕೊಂಡು, ಕಾರ್ಯಕ್ರಮ ನಡೆಯಲಿದೆ.
ಸಾಮಾಜಿಕ ಅಂತರದೊಂದಿಗೆ ಸಾಂಕೇತಿಕವಾಗಿ ಕಾರ್ಯಕ್ರಮ ನಡೆಯಲಿದೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ದಿನಸಿ ಕಿಟ್‌ ವಿತರಣೆಗೆ ಸಾಂಕೇತಿಕ ಚಾಲನೆ ನೀಡಲಿದ್ದಾರೆ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ತಿಳಿಸಿದ್ದಾರೆ.  
 

Latest Videos
Follow Us:
Download App:
  • android
  • ios