ಕಲಬುರಗಿಗೂ ಕಾಲಿಟ್ಟ ಕೊರೋನಾ ವೈರಸ್? ಆತಂಕದಲ್ಲಿ ಜನತೆ!
ಕಲಬುರಗಿಯಿಂದ ಶಂಕಿತ ಕೊರೋನಾ ಸೋಂಕಿನ ಹಿನ್ನೆಲೆ| ಇಬ್ಬರು ವ್ಯಕ್ತಿಗಳ ಥ್ರೋಟ್ ಸ್ವಾಬ್ ಪರೀಕ್ಷೆಗೆ ರವಾನೆ| ಒಬ್ಬರ ಫಲಿತಾಂಶ ನೆಗೆಟೀವ್, ಇನ್ನೊಬ್ಬರ ಫಲಿತಾಂಶದ ನಿರೀಕ್ಷೆಯಲ್ಲಿ ಆರೋಗ್ಯ ಇಲಾಖೆ|
ಕಲಬುರಗಿ(ಮಾ.11): ಮಾರಣಾಂತಿಕ ಕೊರೋನಾ ವೈರಾಣು ಸೋಂಕು ಕಲಬುರಗಿಗೂ ಕಾಲಿಟ್ಟಿತೆ? ಹೀಗೊಂದು ಪ್ರಶ್ನೆ ಇದೀಗ ಜಿಲ್ಲೆಯಲ್ಲಿ ಹುಟ್ಟಿಕೊಂಡಿದೆ.
ಸೌದಿ ಅರೆಬಿಯಾದಿಂದ ಫೆ.29ರಂದು ಕಲಬುರಗಿಗೆ ಬಂದಿದ್ದ 75 ವರ್ಷದ ವಯೋವೃದ್ಧರೊಬ್ಬರಿಗೆ ಕೆಮ್ಮು, ಜ್ವರ, ನೆಗಡಿಯಂತಹ ಕೊರೋನಾ ಲಕ್ಷಣಗಳು ಕಾಡಿದ್ದರಿಂದ ಇವರನ್ನು ಜಿಮ್ಸ್ ಐಸೋಲೇಷನ್ ವಾರ್ಡ್‌ನಲ್ಲಿ ದಾಖಲಿಸಿ ಚಿಕಿತ್ಸೆಗೊಳಪಡಿಸಲಾಗಿದೆ ಎಂದು ಗೊತ್ತಾಗಿದೆ. ಆದರೆ ಜಿಲ್ಲೆಯಲ್ಲಿ ಹಬ್ಬಿದ್ದ ಕೊರೋನಾ ವೈರಸ್ ಸುದ್ದಿಯನ್ನು ಜಿಮ್ಸ್ ಆಸ್ಪತ್ರೆ ವೈದ್ಯರು ಅಲ್ಲಗಳೆದಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸೌದಿ ಅರೇಬಿಯಾದಿಂದ ಫೆ.29ರಂದು ಕಲಬುರಗಿಗೆ ಬಂದಿರುವ 75ರ ವೃದ್ಧರೊಬ್ಬರಿಗೆ ಮಾ.5ರಂದು ಜ್ವರ-ನೆಗಡಿ, ಕೆಮ್ಮು ಕಾಡಿದೆ. ಇವರನ್ನು ಆಸ್ಪತ್ರೆಗೆ ತಂದಾಗ ಕೊರೋನಾ ಲಕ್ಷಣಗಳು ಎಂದು ತಕ್ಷಣ ಆಸ್ಪತ್ರೆಯಲ್ಲಿ ಪರೀಕ್ಷೆಗೊಳಪಡಿಸಲಾಗಿದೆ. ಈ ವೃದ್ಧರ ಮನೆಯ ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಗೊತ್ತಾಗಿದೆ. ಇದೀಗ ಈ ವೃದ್ಧರೇ ಹೆಚ್ಚಿನ ಚಿಕಿತ್ಸೆಗೆ ಹೈದರಾಬಾದ್‌ಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.
ಏತನ್ಮಧ್ಯೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪ್ರಕಟಣೆ ಬಿಡುಗಡೆ ಮಾಡಿದ್ದು ಕಲಬುರಗಿಯ ಇಬ್ಬರು ವ್ಯಕ್ತಿಗಳಿಂದ ಗಂಟಲು ಮಾದರಿ (ಥ್ರೋಟ್ ಸ್ವಾಬ್) ಸಂಗ್ರಹಿಸಿ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಹೇಳಿಕೊಂಡಿದೆ. ಕಲಬುರಗಿಯಲ್ಲಿ ಇದುವರೆಗೂ ಇಬ್ಬರು ವ್ಯಕ್ತಿಗಳ ಗಂಟಲು ದ್ರವ (ಥ್ರೋಟ್ ಸ್ವಾಬ್) ಮಾದರಿ ಸಂಗ್ರಹಿಸಿ ಕೋವಿದ್19 ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪೈಕಿ ಓರ್ವ ವ್ಯಕ್ತಿಯ ಮಾದರಿಯ ಫಲಿತಾಂಶ ಬಂದಿದ್ದು ಅದು ನೆಗೆಟಿವ್ ಎಂದು ಗೊತ್ತಾಗಿದೆ.
ಇನ್ನೊಬ್ಬರ ಗಂಟಲು ದ್ರವದ ಮಾದರಿ ಫಲಿತಾಂಶದ ನಿರಿಕ್ಷೆಯಲ್ಲಿದ್ದೇವೆ. ಈ ಮಾದರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯೊಬ್ಬರದ್ದಾಗಿರುತ್ತದೆ. ಇವರು ಹೆಚ್ಚಿನ ಚಿಕಿತ್ಸೆಗೆ ಹೈದ್ರಾಬಾದ್‌ಗೆ ತೊರಳಿದ್ದಾರೆಂದು ಆರೋಗ್ಯ ಇಲಾಖೆ ಪ್ರಕಟಣೆ ಸ್ಪಷ್ಪಪಡಿಸಿದೆ. ಈ ವ್ಯಕ್ತಿಯ ಗಂಟಲು ಮಾದರಿಯ ಫಲಿತಾಂಶ ಇದುವರೆಗೂ ತಮ್ಮ ಕೈಸೇರಿಲ್ಲ. ಈ ವ್ಯಕ್ತಿಯು ಹೆಚ್ಚಿನ ಚಿಕಿತ್ಸೆಗೆ ಹೈದರಾಬಾದ್‌ಗೆ ತೆರಳಿದ್ದರೂ ಅವರ ಆರೋಗ್ಯ ಮೇಲೆ ತಾವು ಸದಾಕಾಲ ನಿಗಾ ಇಟ್ಟಿದ್ದಾಗಿಯೂ ಆರೋಗ್ಯ ಇಲಾಖೆಯ ಮೂಲಗಳು ಹೇಳಿವೆ.
ಹೈದರಾಬಾದ್‌ಗೆ ಹೆಚ್ಚಿನ ಚಿಕಿತ್ಸೆಗೆ ತೆರಳಿವು ವ್ಯಕ್ತಿಯ ಸಂಪರ್ಕಕ್ಕೆ ಬಂದಿರುವ ಅವರ ಕುಟುಂಬ ಸದಸ್ಯರು ಹಾಗೂ ಸುತ್ತಲಿನ ಜನರೆಲ್ಲರನ್ನು ಗುರುತಿಸಿ ಕರೆತಂದು ಅವರೆಲ್ಲರ ಸ್ಕ್ರೀನಿಂಗ್, ಹೋಂ ಐಸೋಲೇಷನ್ ಸಹ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.