Asianet Suvarna News Asianet Suvarna News

ಹುಬ್ಬಳ್ಳಿ: ಉಣಕಲ್‌ ಕೆರೆಯ ಜಲಕಳೆಗೆ ಕೋಟಿ ರೂ.ಹೋಮ..!

ಅಂತರಗಂಗೆ ತೆಗೆಯಲು, ನಿರ್ವಹಣೆಗೆ ಬರೋಬ್ಬರಿ 14.83 ಕೋಟಿ ಮೊತ್ತ ಮೀಸಲು| ಕಳೆದ ವಾರದಿಂದ ಮತ್ತೆ ಕೆರೆಯಲ್ಲಿ ಜಲಕಳೆ ಪ್ರತ್ಯಕ್ಷ| 2021ರ ಸೆಪ್ಟೆಂಬರ್‌ ವೇಳೆಗೆ ಕೆರೆ ಸಂಪೂರ್ಣ ಸ್ವಚ್ಛಗೊಳಿಸುವ ಕಾಮಗಾರಿ| ಸ್ವಚ್ಛತಾ ನಿರ್ವಹಣೆ ಗುತ್ತಿಗೆ ಸಂಸ್ಥೆಯಿಂದ ನಿರ್ವಹಣೆ| 

People Of Hubballi Talks Over Unkal Lake Clean Project grg
Author
Bengaluru, First Published Mar 19, 2021, 11:36 AM IST

ಮಯೂರ ಹೆಗಡೆ

ಹುಬ್ಬಳ್ಳಿ(ಮಾ.19): ಉಣಕಲ್‌ ಕೆರೆಯಲ್ಲಿ ಮತ್ತೆ ಜಲಕಳೆ ಪ್ರತ್ಯಕ್ಷವಾಗಿರುವ ಬೆನ್ನಲ್ಲೇ ಸ್ಮಾರ್ಟ್‌ಸಿಟಿ ಯೋಜನೆಯ ಕೋಟಿ ಹಣವನ್ನು ಕೆರೆ ನೀರಲ್ಲಿ ಹೋಮ ಮಾಡಿದೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುತ್ತಿದೆ.

ಕಳೆದ ವರ್ಷದ ಅಂತ್ಯದಿಂದಲೇ ಕಳೆ ತೆಗೆಯುವ ಕಾರ್ಯ ನಡೆದಿದೆ. ಡಿಸೆಂಬರ್‌- ಜನವರಿಯಲ್ಲಿ ಕೋಟ್ಯಂತರ ರು. ವ್ಯಯಿಸಿ ಜೆಸಿಬಿ, ಬೋಟ್‌ಗಳ ಮೂಲಕ ಕೆರೆಯ ಕಳೆಯನ್ನು ಪೂರ್ಣವಾಗಿ ತೆಗೆಯಲಾಗಿತ್ತು. ನೀರಿನಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚಿಸಲು ಉಳವಿ ಚನ್ನಬಸವೇಶ್ವರ ದೇವಸ್ಥಾನ ಸೇರಿ ಮೂರ್ನಾಲ್ಕು ಕಡೆಗಳಲ್ಲಿ ಏರೆಟರ್ಸ್‌ ಹಾಕಲಾಗಿತ್ತು. ಇದರಿಂದ ಒಂದೆರಡು ತಿಂಗಳು ಕೆರೆ ಶುಭ್ರವಾಗಿ ಕಾಣುತ್ತಿತ್ತು. ಆದರೆ, ಕಳೆದ ವಾರ- ಹತ್ತು ದಿನಗಳಿಂದ ಪುನಃ ಅಲ್ಲಲ್ಲಿ ಜಲಕಳೆ ಕಂಡುಬರುತ್ತಿದೆ.

ಈ ವಿಚಾರ ಸಾಮಾಜಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಕೆರೆಯ ನೀರನ್ನು ಸಂಪೂರ್ಣ ಖಾಲಿ ಮಾಡಬೇಕು. ಹರಿದುಬರುತ್ತಿರುವ ತ್ಯಾಜ್ಯದ ನೀರನ್ನು ತಡೆಗಟ್ಟದೆ ಅಂತರಗಂಗೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ಸ್ಥಳೀಯ ತಜ್ಞರು ಅಭಿಪ್ರಾಯ ತಿಳಿಸಿದ್ದರು. ಹೀಗಿದ್ದಾಗ್ಯೂ ಯೋಜನೆಯಂತೆ ಕೋಟಿ ಖರ್ಚು ಮಾಡಿದರೂ ಮತ್ತೆ ಜಲಕಳೆ ಬೆಳೆಯುತ್ತಿರುವುದು ಯಾಕೆ ಎಂಬ ಪ್ರಶ್ನೆ ಮೂಡಿದೆ.

ಹಾಗೆಂದು ಒಟ್ಟಾರೆ ಕಾಮಗಾರಿ ಈಗಲೇ ಪೂರ್ಣಗೊಂಡಿಲ್ಲ. ಕಾಲಾವಕಾಶವಿದೆ. ಆದರೆ, ನಿಗದಿಯಂತೆ ಸೆಪ್ಟೆಂಬರ್‌ ವರೆಗೆ ಪೂರ್ಣ ಶುದ್ಧಿ ಸಾಧ್ಯವೆ ಎಂಬ ಸಂಶಯವಂತೂ ದಟ್ಟವಾಗಿದೆ. ಏಕೆಂದರೆ ಹಿಂದೆ ಹೈದ್ರಾಬಾದ್‌ ಮೂಲದ ಕಂಪನಿ ಜಲಕಳೆ ತೆಗೆಯಲು ಬಂದು 15ಲಕ್ಷ ವ್ಯಯಿಸಿ ವಾಪಸ್‌ ಹೋಗಿರುವುದು, ಮಹಾನಗರ ಪಾಲಿಕೆ, ದೇಶಪಾಂಡೆ ಫೌಂಡೆಶನ್‌ ಪ್ರಯತ್ನ ಫಲಕೊಡದಿರುವುದು ಈ ಸಂಶಯಕ್ಕೆ ಕಾರಣವಾಗಿದೆ.

ಹುಬ್ಬಳ್ಳಿ: ಉಣಕಲ್‌ ಕೆರೆ ‘ಅಂತರ ಗಂಗೆ’ಗೆ ಕೊನೆಗೂ ಸಿಕ್ತು ಮುಕ್ತಿ

ಈ ಬಗ್ಗೆ ಮಾತನಾಡಿದ ಎಚ್‌ಡಿಎಸ್‌ಸಿಎಲ್‌ ವಿಶೇಷಾಧಿಕಾರಿ ಎಸ್‌.ಎಚ್‌. ನರೇಗಲ್‌, ಗುತ್ತಿಗೆ ಪಡೆದ ಸಂಸ್ಥೆ 5 ವರ್ಷ ಕೆರೆಯ ಸ್ವಚ್ಛತೆ ನಿರ್ವಹಿಸಲಿದೆ. ಇಲ್ಲಿವರೆಗೆ ಉತ್ತಮವಾಗಿ ಕಾರ್ಯಗಳು ನಡೆದಿವೆ. ಹೊಸದಾಗಿ ಜಲಕಳೆ ಬೆಳೆದಿಲ್ಲ. ಬೇರೆಡೆ ಇದ್ದ ಜಲಕಳೆಯೆ ಇಲ್ಲಿಗೆ ಬಂದಿದೆ ಎಂದರು.

ಹೇಗೆ ಸ್ವಚ್ಛತೆ?:

ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಬರೋಬ್ಬರಿ 14.83 ಕೋಟಿ ಮೊತ್ತವನ್ನು ಉಣಕಲ್‌ ಕೆರೆ ಸ್ವಚ್ಛತೆ ಹಾಗೂ ನಿರ್ವಹಣೆಗೆ ಮೀಸಲಿಡಲಾಗಿದೆ. ಬೆಂಗಳೂರಿನ ಜಿ. ನಾಗೇಂದ್ರ ಸ್ವಚ್ಛತೆ ಗುತ್ತಿಗೆ ಪಡೆದಿದ್ದಾರೆ. 2021ರ ಸೆಪ್ಟೆಂಬರ್‌ ವೇಳೆಗೆ ಕೆರೆಯನ್ನು ಸಂಪೂರ್ಣ ಸ್ವಚ್ಛಗೊಳಿಸುವ ಕಾಮಗಾರಿ ಪೂರ್ಣಗೊಳಿಸಬೇಕಿದೆ. ಬಳಿಕ ಸ್ವಚ್ಛತಾ ನಿರ್ವಹಣೆಯನ್ನು ಗುತ್ತಿಗೆ ಸಂಸ್ಥೆ ನಿರ್ವಹಿಸಲಿದೆ.

ಮೊದಲ ಹಂತದಲ್ಲಿ ಜಲಕಳೆಯನ್ನು ತೆಗೆಯುವ ಕಾರ್ಯವನ್ನು ಗುತ್ತಿಗೆ ಸಂಸ್ಥೆ ನಡೆಸಿದೆ. ಬಳಿಕ ಏರೆಟರ್ಸ್‌, ಫೌಂಟೆನ್‌ ಅಳವಡಿಸಿ ನೀರನ್ನು ಶುದ್ಧಗೊಳಿಸುವ ಪ್ರಯತ್ನವೂ ಆಗಿದೆ. ಮುಂದೆ ಯೋಜನೆಯಂತೆ ತೇಲುವ ಜೈವಿಕ ಸಸಿಗಳನ್ನು ಕೆರೆಗೆ ಹಾಕಿ ನೀರಿನ ಗುಣಮಟ್ಟಹೆಚ್ಚಿಸುವ ಕಾರ್ಯ ಆಗಬೇಕಿದೆ. ಅದರ ಜತೆಗೆ ಬಯೋ ರಿಯಾಕ್ಟರ್‌ ಬಿಟ್ಟು ಜೈವಿಕ ವಿಧಾನದ ಮೂಲಕ ಕೆರೆ ಶುದ್ಧೀಕರಣ ಕಾರ್ಯ ಮಾಡುವ ಯೋಜನೆ ಇದೆ. ಮುಂದುವರಿದು ಕೆರೆಯಲ್ಲಿನ ಕಸ, ಇತರೆ ಕಳೆಗಳನ್ನು ತೆಗೆಯುವ, ಕೊಳಚೆ ಸೇರುವ ಪ್ರದೇಶದಲ್ಲಿ ಗ್ಯಾಬೆನ್‌ ವಾಲ್‌ (ತ್ಯಾಜ್ಯ ತಡೆಯುವ ಗೋಡೆ) ಅಳವಡಿಸಿ ಕೆರೆ ಶುದ್ಧೀಕರಿಸುವ ಯೋಜನೆ ಇದೆ.

ಕೆರೆಯ ಪಶ್ಚಿಮ ಭಾಗದಲ್ಲಿದ್ದ ಜಲಕಳೆಯನ್ನು ತೆಗೆಯಲು ಸಾಧ್ಯವಾಗಿರಲಿಲ್ಲ. ಇಲ್ಲಿಂದ ಅಂತರಗಂಗೆ ತೇಲಿಬಂದು ಸಮಸ್ಯೆ ಆಗಿದೆ. ಎರಡು- ಮೂರು ದಿನಗಳಲ್ಲಿ ಪುನಃ ತ್ಯಾಜ್ಯ ತೆಗೆಯುವ ಕೆಲಸ ಶುರುವಾಗಲಿದೆ ಎಂದು ಎಚ್‌ಡಿಎಸ್‌ಸಿಎಲ್‌ ವಿಶೇಷಾಧಿಕಾರಿ ಎಸ್‌.ಎಚ್‌. ನರೇಗಲ್‌ ತಿಳಿಸಿದ್ದಾರೆ. 
 

Follow Us:
Download App:
  • android
  • ios