ಜಗದೀಶ ವಿರಕ್ತಮಠ 

ಬೆಳಗಾವಿ(ಜ.29): ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ಎಂದು ಕರೆಯಿಸಿಕೊಳ್ಳುತ್ತಿರುವ ಬೆಳಗಾವಿ ಜಿಲ್ಲೆಯಲ್ಲಿ ಕೈಗಾರಿಕಾ ಅಭಿವೃದ್ಧಿ ಕಾರ್ಯಗಳು, ಗಡಿ ವಿಷಯದಲ್ಲಿ ತೆಗೆದುಕೊಂಡು ಕ್ರಮಗಳು ಹಾಗೂ ಸರ್ವಾಂಗೀಣ ಅಭಿವೃದ್ಧಿಯನ್ನು ರಾಜ್ಯ ಸರ್ಕಾರ ಕಡೆಗಣಿಸುತ್ತಿದೆ ಎಂಬ ಆರೋಪಗಳು ಮೇಲಿಂದ ಮೇಲೆ ಕೇಳಿಬರುತ್ತಿವೆ. ಇದರ ಬೆನ್ನಲ್ಲೆ ಜಿಲ್ಲಾ ಉಸ್ತುವಾರಿ ಸಚಿವರನ್ನು ತೀವ್ರ ತರಾಟೆಗೆ ತೆಗೆದುಕೊಳ್ಳಲಾಗಿದೆ. 

ಫೆಬ್ರವರಿ 14ರಂದು ಹುಬ್ಬಳ್ಳಿಯಲ್ಲಿ ಕೈಗಾರಿಕೆಯಲ್ಲಿ ಹೂಡುಕೆದಾರರ ಸಭೆಯನ್ನು ಕರೆಯಲಾಗಿದೆ ಎಂದು ಸಚಿವ ಶೆಟ್ಟರ್‌ ಅವರು ಬೆಳಗಾವಿಯಲ್ಲಿ ಜ.26ರಂದು ಹೇಳಿದ ಹಿನ್ನೆಲೆಯಲ್ಲಿ ಬೆಳಗಾವಿ ಜನ ಜೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೌದು ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ವಿರುದ್ಧ ಟ್ವೀಟರ್‌ನಲ್ಲಿ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

 

ಜ.26 ರಂದು 71ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಡಳಿತ ಆಯೋಜಿಸಿದ್ದ ಧ್ವಜಾರೋಹರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವ ಜಗದೀಶ ಶೆಟ್ಟರ ಅವರು, ತಮ್ಮ ಟ್ವೀಟರ್ ನಲ್ಲಿ ‘ಬೆಳಗಾವಿ ನಮ್ಮದು; ಕರ್ನಾಟಕಕ್ಕೆ ಸೇರಿದ್ದು ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಜಿಲ್ಲೆಯ ಜನರು ಸಚಿವ ಜಗದೀಶ ಶೆಟ್ಟರ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. ನಿಮ್ಮ ಈ ನಿರ್ಲಕ್ಷ್ಯ ಧೋರಣೆಯಿಂದ ಮುಂದೊಂದು ದಿನ ಬೆಳಗಾವಿ ಕೇಂದ್ರಾಡಳಿತ ಪ್ರದೇಶ ಮಾಡಬೇಕೆಂಬ ಕೂಗು ಎತ್ತಿದರೂ ಅಚ್ಚರಿ ಏನಿಲ್ಲ. ಕೇವಲ ಉತ್ತರ ಕರ್ನಾಟಕ ಅಂದರೆ ಹುಬ್ಬಳ್ಳಿ ಅಲ್ಲ. ರಾಜ್ಯ ಸರ್ಕಾರದ ಮುಂದೆ ಉತ್ತರ ಕರ್ನಾಟಕ ಅಭಿವೃದ್ಧಿ ಅಂತ ಹೇಳಿ ಆ ಹೆಸರಿನಲ್ಲಿ ಎಲ್ಲ ಹುಬ್ಬಳ್ಳಿಗೆ ಕೊಂಡು ಒಯ್ಯುತ್ತಿರುವಿರಿ ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂದಿದ್ದಾರೆ. 

ಇನ್ನೋರ್ವ, ಶೆಟ್ಟರ್‌ ಸಾಹೇಬರೆ ಕೇವಲ ಬಾಯಿಯಿಂದ ನಮ್ಮದು ಎಂದು ಹೇಳಿದರೆ ಏನೂ ಆಗಲ್ಲ. ತಾವು ಜಿಲ್ಲಾ ಉಸ್ತುವಾರಿ ಆದಾಗಿನಿಂದ ಜಿಲ್ಲೆಗೆ ನಿಮ್ಮ ಕೊಡುಗೆ ಏನು? ಕೆಲಸ ಹುಬ್ಬಳ್ಳಿಗೆ ಮಾತ್ರ ಸೀಮಿತವಾಗಿದೆ. ಬೆಳಗಾವಿಯಲ್ಲಿ ಇನ್ವೆಸ್ಟ್ ಮೀಟ್ ಮಾಡುತ್ತೇವೆ ಎಂಬ ಆಶ್ವಾಸನೆ ಕೊಟ್ಟು, ಅದನ್ನು ಹುಬ್ಬಳ್ಳಿಗೆ ಸ್ಥಳಾಂತರ ಮಾಡಿದ್ದೀರಿ ಎಂದು ಚಾಟಿ ಬೀಸಿದ್ದಾರೆ. 

 

ಕಂದಾಯ ಕೇಂದ್ರವಾಗಿರುವ ಬೆಳಗಾವಿಗೆ ನ್ಯಾಯಯುವತಾಗಿ ಹೆಸ್ಕಾಂ, ಸಾರಿಗೆ ಸಂಸ್ಥೆ, ಹೈಕೋರ್ಟ್ ಎಲ್ಲಾ ಬರಬೇಕು. ಆದರೆ ನಿಮ್ಮ ಲಾಭಿಗೆ ಅವೆಲ್ಲವೂ ಹುಬ್ಬಳ್ಳಿ-ಧಾರವಾಡ ಪಾಲಾದವು. ಕಲ್ಯಾಣ ಕರ್ನಾಟಕದಲ್ಲಿ ಇವೆಲ್ಲವೂ ಪ್ರಾದೇಶಿಕ ಕೇಂದ್ರ ಕಲಬುರ್ಗಿಯಲ್ಲಿವೆ. ಇನ್ನಾದರೂ ನಮ್ಮನ್ನು ಬೆಳೆಯಲು ಬಿಡಿ ಎಂದಿದ್ದಾರೆ. 

 

ಮತ್ತೋರ್ವ, ಹೇಳಿದರೆ ಸಾಲದು.. ಸುಪ್ರಿಂ ಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತಿದೆ. ಸಿದ್ಧತೆ ಏನು ಮಾಡಲಾಗಿದೆ ?. ಮಹಾರಾಷ್ಟ್ರವು ಇಬ್ಬರು ಸಚಿವರನ್ನು ಪ್ರಕರಣದ ಮಾನಿಟರಿಂಗ್‌ಗಾಗಿ ನೇಮಕ ಮಾಡಿಲ್ಲವೇ? ಇಲ್ಲಿ ಏನು ಕ್ರಮಕೈ ಗೊಳ್ಳಲಾಗಿದೆ? ಎಂದು ಪ್ರಶ್ನಿಸಿದ್ದಾರೆ. 

ರೀ ಸಾಹೇಬ್ರ, ಬೆಳಗಾವಿ ನಮ್ಮದು ನಮ್ಮದು ಅನ್ನೊದು ಬಿಟ್ಟು ನಮ್ಮ ಜಿಲ್ಲೆ ಸಲುವಾಗಿ ಏನಾದರೂ ಕೆಲ್ಸ ಮಾಡಿ ತೋರಿಸಿ, ಸರ್ಕಾರ ರಚನೆಯಾಗಿ 5 ತಿಂಗಳಾಯಿತು. ಬರಿ ಹುಣ್ಣಿಮೆ,ಅಮವಾಸ್ಯೆಗೆ ಒಂದು ಸಲ ಮುಖ ತೋರಸಿ ಹೋಗ್ತಿರಾ. ಇದುವರೆಗೂ ನಿಮ್ಮ ಅಧಿಕಾರ ಅವಧಿಯಲ್ಲಿ ಒಂದು ಕೆಲಸ ಮಾಡಲಿಲ್ಲ. ಈಗಾ ಯಾಕ್ರೀ ನಿಮಗೆ ನಮ್ಮ ಜಿಲ್ಲೆಯ ಬಗ್ಗೆ ಅಷ್ಟೊಂದು ಕಾಳಜಿ ಹಾಗೂ ಬೆಳಗಾವಿ ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು? ಯಾವ ಹೊಸ ಉದ್ಯಮಗಳನ್ನು ತರತಾ ಇದ್ದಿರಾ. ಯಾವ ಹೊಸ ಕೈಗಾರಿಕೆಗಳನ್ನು ಸ್ಥಾಪಿಸುತ್ತಿದ್ದಾರೆ ಎಂಬುವುದರ ಬಗ್ಗೆ ಹೇಳಿ ಎಂದು ಆಕ್ರೋಶ ಬರಿತ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. 

ಸರ್ಕಾರಿ ಹಾಗೂ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿರುವ ಜನಪ್ರತಿನಿಧಿಗಳನ್ನು, ಜಾಲತಾಣಗಳಲ್ಲಿ ತೀವ್ರ ತರಾಟೆಗೆ ತೆಗೆದುಕೊಳ್ಳಲಾಗುತ್ತಿದೆ. ಇದಕ್ಕೆ ಸಚಿವ ಜಗದೀಶ ಶೆಟ್ಟರ್‌ ಹೊರತಾಗಿಲ್ಲ. ಟ್ವಿಟರ್‌ನಲ್ಲಿ ಟ್ವಿಟ್ ಮಾಡಿದ್ದ ಸಚಿವ ಶೆಟ್ಟರ ವಿರುದ್ಧ ಬೆಳಗಾವಿ ಜನರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೇ ಉತ್ತರ ಕರ್ನಾಟಕದ ಅಭಿವೃದ್ಧಿ ಹೆಸರಿನಲ್ಲಿ ಧ್ವನಿ ಎತ್ತಿ ನಂತರ ಎಲ್ಲ ಪ್ರಮುಖ ಯೋಜನೆ ಹಾಗೂ ಇಲಾಖೆಯಗಳನ್ನು ಹುಬ್ಬಳಿಗೆ ಸಿಮೀತಗೊಳಿಸುತ್ತಿರುವ ಈ ಭಾಗದ ಜನಪ್ರತಿನಿಧಿಗಳ ವಿರುದ್ಧ ಕಿಡಿಕಾರಿದ್ದಾರೆ. 

ನಕಾರಾತ್ಮಕ ಟ್ವೀಟ್ ನಿಂದ ತೀವ್ರ ಮುಜುಗರವನ್ನು ಅನುಭಿಸಿದ ಸಚಿವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಟ್ವೀಟರ್‌ನಲ್ಲಿ ಚಾಟಿ ಬೀಸಿಕೊಂಡ ಸಚಿವ ಜಗದೀಶ ಶೆಟ್ಟರ್ ಅವರು ಇನ್ನಾದರೂ ಬೆಳಗಾವಿ ಜಿಲ್ಲೆಯ ಅಭಿವೃದ್ಧಿಯತ್ತ ಗಮನ ಹರಿಸಲಿದ್ದಾರಯೇ ಅಥವಾ ಟ್ವೀಟರ್‌ನಲ್ಲಿ ಆರೋಪಿಸಿದಂತೆ ಕೇವಲ ಹುಬ್ಬಳ್ಳಿ, ಧಾರವಾಡಕ್ಕೆ ಸೀಮತವಾಗಲಿದ್ದಾರಯೇ ಎಂಬುವುದನ್ನು ಕಾದುನೋಡಬೇಕಿದೆ.