ರುದ್ರಪ್ಪ ಆಸಂಗಿ 

ವಿಜಯಪುರ(ಮಾ.21): ನಗರದಲ್ಲಿನ ವಿಶ್ವ ವಿಖ್ಯಾತ ಗೋಳಗುಮ್ಮಟ ವೀಕ್ಷಣೆಗೆ ಬರುವ ಪ್ರವಾಸಿಗರು ಕೊರೋನಾ ನಿಯಮಗಳನ್ನು ಗಾಳಿಗೆ ತೂರಿ ಮಾಸ್ಕ್‌, ಸ್ಯಾನಿಟೈಸರ್‌, ಸಾಮಾಜಿಕ ಅಂತರದ ಪರಿವೇ ಇಲ್ಲದೆ ಗೋಳಗುಮ್ಮಟ ಸೇರಿದಂತೆ ಇತರ ಪ್ರವಾಸಿ ತಾಣಗಳಿಗೆ ನಿತ್ಯವೂ ಭೇಟಿ ನೀಡುತ್ತಿದ್ದಾರೆ. ಹಾಗಾಗಿ ವಿಶ್ವ ವಿಖ್ಯಾತ ಗೋಳಗುಮ್ಮಟ ಬರಲಿರುವ ದಿನಗಳಲ್ಲಿ ಕೊರೋನಾ ಎರಡನೇ ಅಲೆಗೆ ಹಾಟ್‌ಸ್ಪಾಟ್‌ ಆಗಲಿದೆಯಾ? ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ.

ಜಿಲ್ಲೆಯಲ್ಲಿ ಕೊರೋನಾ ಸೋಂಕು ದಿನೇ ದಿನೇ ಹೆಚ್ಚುತ್ತಿದ್ದು, ಎರಡನೇ ಅಲೆ ಅಪ್ಪಳಿಸುವ ಭೀತಿ ಗಟ್ಟಿಯಾಗುತ್ತಿದೆ. ಜಿಲ್ಲೆಯ ಪ್ರವಾಸಿ ತಾಣಗಳಿಗೆ ಎಂದಿನಂತೆ ಪ್ರವಾಸಿಗರು ಆಗಮಿಸುತ್ತಿದ್ದಾರೆ. ವಿಜಯಪುರ ನಗರದಲ್ಲಿನ ವಿಶ್ವ ವಿಖ್ಯಾತ ಗೋಳಗುಮ್ಮಟ ಹಾಗೂ ಇಬ್ರಾಹಿಂ ರೋಜಾ, ಬಾರಾಕಮಾನ, ಗಗನ ಮಹಲ್‌ ಮತ್ತಿತರರ ಐತಿಹಾಸಿಕ ಸ್ಮಾರಕಗಳಿಗೆ ಸಾವಿರಾರು ಪ್ರವಾಸಿಗರು ನಿತ್ಯವೂ ಆಗಮಿಸುತ್ತಿದ್ದಾರೆ. ವಿಶ್ವ ವಿಖ್ಯಾತ ಗೋಳಗುಮ್ಮಟ ವೀಕ್ಷಣೆಗೆ ದಿನಂಪ್ರತಿ 1000ದಿಂದ 1500ರವರೆಗೆ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಗೋಳಗುಮ್ಮಟ ವೀಕ್ಷಣೆ ಮಾಡಿದ ಪ್ರವಾಸಿಗರು ನಗರದಲ್ಲಿನ ಇತರ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಗುಂಪು ಗುಂಪಾಗಿ ಬರುತ್ತಿದ್ದಾರೆ.

ರಾಜ್ಯದಲ್ಲಿ ಮತ್ತೊಮ್ಮೆ ಲಾಕ್‌ಡೌನ್‌ ಆಗುತ್ತಾ? ಸಚಿವ ಬೊಮ್ಮಾಯಿ ಹೀಗಂದ್ರು

ಪ್ರವಾಸಿ ತಾಣ ಒಳಗಡೆ ಪ್ರವೇಶಕ್ಕೆ ಮಾಸ್ಕ್‌ ಕಡ್ಡಾಯ ಎಂದು ಸರ್ಕಾರದ ನಿಯಮವಿದೆ. ಆದರೆ ಬಹುತೇಕ ಪ್ರವಾಸಿಗರು ಮಾಸ್ಕ್‌ ಧರಿಸದೇ ಪ್ರವಾಸಿ ತಾಣ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಸ್ಯಾನಿಟೈಸರ್‌ ಇಲ್ಲವೇ ಇಲ್ಲ. ಪ್ರವಾಸಿಗರಿಗೆ ಸಾಮಾಜಿಕ ಅಂತರದ ಪರಿವೇ ಇಲ್ಲದೆ ಗುಂಪು ಗುಂಪಾಗಿ ಬರುತ್ತಿದ್ದಾರೆ. ಇದು ಕೊರೋನಾ ಎರಡನೇ ಅಲೆಗೆ ಆಹ್ವಾನ ನೀಡಿದಂತಿದೆ.

ಇನ್ನೊಂದು ಅಚ್ಚರಿ ವಿಷಯವೇನೆಂದರೆ ಕಳೆದ ಒಂದು ತಿಂಗಳಿಂದ ಗೋಳಗುಮ್ಮಟ ಆವರಣದಲ್ಲಿ ಕೋವಿಡ್‌ ಪರೀಕ್ಷೆಗೆ ಆರೋಗ್ಯ ಸಿಬ್ಬಂದಿ ಯಾರೂ ಬರುತ್ತಿಲ್ಲ. ಪ್ರವಾಸಿ ತಾಣಗಳಲ್ಲಿ ಥರ್ಮಲ್‌ ಸ್ಕ್ರೀನಿಂಗ್‌ ಇಲ್ಲ. ಮಾಸ್ಕ್‌, ಸ್ಯಾನಿಟೈಸರ್‌ ಯಾವುದೇ ವ್ಯವಸ್ಥೆ ಇಲ್ಲ. ಮಾಸ್ಕ್‌, ಸ್ಯಾನಿಟೈಸರ್‌ ಹಾಗೂ ಸಾಮಾಜಿಕ ಅಂತರದ ಪರಿವೇ ಇಲ್ಲದೆ ಪ್ರವಾಸಿಗರು ಮೈ ಮರೆತು ಐತಿಹಾಸಿಕ ಸ್ಮಾರಕಗಳ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಕೊರೋನಾ ಎರಡನೇ ಅಲೆ ಅಪ್ಪಳಿಸಲು ಇದುವೇ ರಹದಾರಿಯಾಗಿದೆ. ಕೋವಿಡ್‌ ನಿಯಂತ್ರಣಕ್ಕೆ ಕಟ್ಟುನಿಟ್ಟಿನಿಂದ ನಿಯಮಗಳನ್ನು ಪಾಲಿಸದಿದ್ದರೆ ಐತಿಹಾಸಿಕ ಸ್ಮಾರಕಗಳು ಕೊರೋನಾ ಹರಡುವ ಹಾಟ್‌ಸ್ಪಾಟ್‌ಗಳಾಗುವುದರಲ್ಲಿ ಯಾವ ಸಂದೇಹವಿಲ್ಲ.