ಬೀದಿಯಲ್ಲಿ ಸೋಂಕಿತರ ರಾಜಾರೋಷ ತಿರುಗಾಟ: ಆತಂಕದಲ್ಲಿ ಜನತೆ

ಅಪಾಯ ಲೆಕ್ಕಿಸದೆ ಬೀದಿಗಳಲ್ಲಿ ಸಂಚರಿಸುತ್ತಿರುವ ಸೋಂಕಿತರು| ಭಯದ ವಾತಾವರಣದಲ್ಲಿ ನವಲಿ ಸುತ್ತಮುತ್ತಲ ಗ್ರಾಮಸ್ಥರು| ಗ್ರಾಮಗಳಲ್ಲಿ 28 ಜನರಿಗೆ ತಗುಲಿದ ಸೋಂಕು| ಕೆಲವರು ಚಿಕಿತ್ಸೆ ಪಡೆದು ಮನೆಯಲ್ಲಿದ್ದರೆ, ಇನ್ನು ಕೆಲವು ಸೋಂಕಿತರ ರಾಜಾರೋಷ ಸಂಚಾರ| 

People in anxiety for Coronavirus Patients Did Not Follow Covid Rules at Gangavati grg

ಗಂಗಾವತಿ(ಮೇ.05): ಕನಕಗಿರಿ ತಾಲೂಕಿನ ನವಲಿ ಗ್ರಾಮ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿ ಬರುವ ಗ್ರಾಮಗಳಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಲ್ಲಿನ ಸೋಂಕಿತರು ಮನೆಯಲ್ಲಿರದೆ ಬೀದಿಯಲ್ಲಿ ತಿರುಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.

ನವಲಿ ಮತ್ತು ನವಲಿ ತಾಂಡಾ ಹೊಂದಿಕೊಂಡಿದ್ದು, ಇದೇ ಗ್ರಾಮಗಳಲ್ಲಿ 28 ಜನರಿಗೆ ಸೋಂಕು ತಗಲಿದೆ. ಕೆಲವರು ಚಿಕಿತ್ಸೆ ಪಡೆದು ಮನೆಯಲ್ಲಿದ್ದರೆ, ಇನ್ನು ಕೆಲವರು ರಾಜಾರೋಷವಾಗಿ ಸಂಚರಿಸುತ್ತಿದ್ದಾರೆ. ಒಂದೇ ಮನೆಯಲ್ಲಿ ಮೂರರಿಂದ ನಾಲ್ಕು ಜನರಿಗೆ ಸೋಂಕು ತಗಲಿದ್ದರೂ ಅವರು ಯಾವುದೇ ರೀತಿಯ ಮನ್ನೆಚ್ಚರಿಕೆ ಪಡೆಯದೆ ಮನೆ ಬಿಟ್ಟು ಸಾಮನ್ಯ ಜನರಂತೆ ತಿರುಗಾಡುತ್ತಿದ್ದಾರೆ. ನವಲಿ ತಾಂಡಾ, ಮುಖ್ಯ ಬಜಾರ್‌, ಬುದ್ಧ ಬಸವ ವೃತ್ತ, ಕನಕಗಿರಿ ರಸ್ತೆ, ಆದಾಪುರ ರಸ್ತೆ ಪ್ರಾಥಮಿಕ ಶಾಲೆಯ ರಸ್ತೆಗಳಲ್ಲಿರುವ ಅಂಗಡಿಗಳು ತೆರೆದಿದ್ದು ಯಾರೂ ಮಾಸ್ಕ್‌ ಧರಿಸದೆ ಸಂಚರಿಸುತ್ತಿದ್ದಾರೆ.

"

ಕನಕಗಿರಿ ತಾಲೂಕಿನ ಪ್ರಮುಖ ಆರೋಗ್ಯ ಕೇಂದ್ರವಾಗಿರುವ ನವಲಿ ವ್ಯಾಪ್ತಿಯ 8 ಗ್ರಾಮಗಳಲ್ಲಿ 116ಕ್ಕೂ ಹೆಚ್ಚು ಜನರಿಗೆ ಸೋಂಕು ತಗಲಿದೆ. ನವಲಿ ಜಿಲ್ಲಾ ಪಂಚಾಯಿತಿ ಕ್ಷೇತ್ರವಾಗಿದ್ದು, ಈ ಭಾಗದಲ್ಲಿ ರೈಸ್‌ ಪಾರ್ಕ್ ನಿರ್ಮಾಣ ಕಾರ್ಯ ನಡೆದಿದೆ. ಈ ಪ್ರದೇಶದಲ್ಲಿ ವಿವಿಧ ರಾಜ್ಯಗಳಿಂದ ಕಾರ್ಮಿಕರು ಬಂದಿದ್ದು, ನಿತ್ಯ ವಾಹನಗಳ ಓಡಾಟ ನಡೆದಿರುವುದು ಸಾಮಾನ್ಯವಾಗಿದೆ. ಈಗಾಗಲೇ ತಹಸೀಲ್ದಾರ ನೇತೃತ್ವದಲ್ಲಿ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲಾಗಿದ್ದು, ಮನೆ ಬಿಟ್ಟು ಹೊರಗೆ ಬರದಂತೆ ಸೂಚನೆ ನೀಡಲಾಗಿದೆ.

ಕೊರೋನಾ ಅಟ್ಟಹಾಸ: ಕೊಪ್ಪಳದ ಆಸ್ಪತ್ರೆಗಳೆಲ್ಲ ಫುಲ್‌, ಎಲ್ಲೂ ಖಾಲಿ ಇಲ್ಲ ಬೆಡ್‌..!

ಆತಂಕದ ವಾತಾವರಣ:

ಈಗಾಗಲೇ ಕೊರೋನಾ ಬಗ್ಗೆ ತಾಲೂಕು ಆಡಳಿತ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪೊಲೀಸ್‌ ಇಲಾಖೆ ಜಾಗೃತಿ ಮೂಡಿಸಿದ್ದರೂ ಗ್ರಾಮಸ್ಥರು ಭಯದ ವಾತಾವರಣದಲ್ಲಿದ್ದಾರೆ. ಸೋಕಿತರು ಮನೆ ಬಿಟ್ಟು ಹೊರಗೆ ಬರುತ್ತಿದ್ದರಿಂದ ಉಳಿದವರು ತಮಗೆ ಸೋಂಕು ಎಲ್ಲಿ ತಗುಲುತ್ತದೆ ಎಂಬ ಭಯ ಉಂಟಾಗಿದೆ. ಇನ್ನು ಕೆಲವರು ಮನೆಯಲ್ಲಿ ಆನಾರೋಗ್ಯಕ್ಕೆ ಒಳಗಾಗಿದ್ದರೂ ಕೊರೋನಾ ಭಯದಿಂದ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳದೆ ಔಷಧಿ ಅಂಗಡಿಗಳಲ್ಲಿ ಮಾತ್ರೆ ಖರೀದಿಸುತ್ತಿದ್ದಾರೆ.

ಏನೇ ಇದ್ದರೂ ಈಗ ಗ್ರಾಮಗಳಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದು, ಸೋಂಕಿತರು ಭಯ ಇಲ್ಲದೆ ಗ್ರಾಮಗಳಲ್ಲಿ ಸಂಚರಿಸುತ್ತಿದ್ದಾರೆ. ಇನ್ನಾದರು ಸೊಂಕಿತರ ಬಗ್ಗೆ ಪೊಲೀಸ್‌ ಇಲಾಖೆ ಮತ್ತು ತಾಲೂಕು ಅಧಿಕಾರಿಗಳು ಗಮನಹರಿಸಬೇಕಾಗಿದೆ.

ಈಗಾಗಲೇ ನವಲಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕೊರೋನಾ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಸೋಂಕಿತರು ಮನೆ ಬಿಟ್ಟು ಹೊರಗೆ ಬಾರದಂತೆ ತಿಳಿಸಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದರೆ ಅನಿವಾರ್ಯವಾಗಿ ಗಂಗಾವತಿಯ ಕೋವಿಡ್‌ ಆಸ್ಪತ್ರೆಗಳಿಗೆ ದಾಖಲಿಸಲಾಗುತ್ತದೆ. ಈ ಕುರಿತು ಪೊಲೀಸ್‌ ಇಲಾಖೆಗೂ ಮಾಹಿತಿ ನೀಡಲಾಗಿದೆ ಎಂದು ಕನಕಗಿರಿ ತಹಸೀಲ್ದಾರ ರವಿ ಅಂಗಡಿ ತಿಳಿಸಿದ್ದಾರೆ.

ಈಗಾಗಲೇ ನವಲಿ ಗ್ರಾಮದಲ್ಲಿ ಅನಾವಶ್ಯಕವಾಗಿ ಸಂಚಾರ ಮಾಡುತ್ತಿದ್ದ ವ್ಯಕ್ತಿಯನ್ನು ಕೋವಿಡ್‌ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ. ಈ ಕುರಿತಂತೆ ಧ್ವನಿವರ್ಧಕದ ಮೂಲಕ ತಿಳಿಸಲಾಗಿದೆ. ಸೋಂಕಿತರು ಮನೆ ಬಿಟ್ಟು ಹೊರಗೆ ಬಂದರೆ ಅವರನ್ನು ಕೋವಿಡ್‌ ಕೇಂದ್ರಗಳಿಗೆ ಕಳುಹಿಸಿಕೊಡಲಾಗುತ್ತದೆ ಎಂದು ಕನಕಗಿರಿ ಪಿಎಸ್‌ಐ ತಾರಾಬಾಯಿ ಹೇಳಿದ್ದಾರೆ.

ಕೊರೋನಾ ಸೋಂಕಿತರು ಮನೆ ಬಿಟ್ಟು ಹೊರಗೆ ಬಾರದಂತೆ ಈಗಾಗಲೇ ನವಲಿಯಲ್ಲಿ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರು ಸಹಕಾರ ನೀಡಬೇಕು. ಅನುಮಾನ ಬಂದರೆ ತಕ್ಷಣ ಆರೋಗ್ಯ ಇಲಾಖೆಗೆ ಹೋಗಿ ಪರೀಕ್ಷಿಸಿಕೊಳ್ಳಬೇಕು ಎಂದು ಗಂಗಾವತಿ ತಾಲೂಕ ವೈದ್ಯಾಧಿಕಾರಿ ಡಾ. ರಾಘವೇಂದ್ರ ವೈದ್ಯಾಧಿಕಾರಿ ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

Latest Videos
Follow Us:
Download App:
  • android
  • ios