ಶವ ಸಾಗಿಸಲು 15000 ಕೇಳಿದ ಆ್ಯಂಬುಲೆನ್ಸ್ ಚಾಲಕನಿಗೆ ಬಿತ್ತು ಗೂಸಾ..!
5 ಕಿ.ಮೀ.ಗಿಂತಲೂ ಕಡಿಮೆ ಅಂತರ| ಜನರಿಂದ ಧರ್ಮದೇಟು| ಬೆಂಗಳೂರಿನ ಮೇಡಿ ಅಗ್ರಹಾರ ಚಿತಾಗಾರದ ಬಳಿ ನಡೆದ ಘಟನೆ| ಚಾಲಕ ಹಾಗೂ ಮೃತನ ಸಂಬಂಧಿಕರ ನಡುವೆ ಮಾತಿನ ಚಕಮಕಿ| ದುಬಾರಿ ಮೊತ್ತಕ್ಕೆ ಬೇಡಿಕೆ ಇರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ|
ಬೆಂಗಳೂರು(ಏ.25): ನಗರದ ಖಾಸಗಿ ಆಸ್ಪತ್ರೆಯಿಂದ ಚಿತಾಗಾರಕ್ಕೆ ಕೋವಿಡ್ ಮೃತದೇಹ ಸಾಗಿಸಲು 15 ಸಾವಿರಕ್ಕೆ ಬೇಡಿಕೆ ಇರಿಸಿದ ಖಾಸಗಿ ಆ್ಯಂಬುಲೆನ್ಸ್ ಚಾಲಕನಿಗೆ ಸಾರ್ವಜನಿಕರೇ ಧರ್ಮದೇಟು ನೀಡಿರುವ ಘಟನೆ ಶನಿವಾರ ಮೇಡಿ ಅಗ್ರಹಾರ ಚಿತಾಗಾರದ ಬಳಿ ನಡೆದಿದೆ.
ವ್ಯಕ್ತಿಯೊಬ್ಬರು ಕೊರೋನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮೃತದೇಹವನ್ನು ಖಾಸಗಿ ಆಸ್ಪತ್ರೆಯಿಂದ ಚಿತಾಗಾರಕ್ಕೆ ತೆಗೆದುಕೊಂಡು ಹೋಗಲು ಮೃತನ ಸಂಬಂಧಿಕರು ಖಾಸಗಿ ಆ್ಯಂಬುಲೆನ್ಸ್ ಚಾಲಕನನ್ನು ಕೇಳಿದ್ದಾರೆ. 5 ಕಿ.ಮೀ.ಗಿಂತಲೂ ಕಡಿಮೆ ಅಂತರಕ್ಕೆ ಆ್ಯಂಬುಲೆನ್ಸ್ ಚಾಲಕ 15 ಸಾವಿರಕ್ಕೆ ಬೇಡಿಕೆ ಇರಿಸಿದ್ದಾನೆ. ಇದು ದುಬಾರಿಯಾಯಿತು ಎಂದಾಗ, ಅಷ್ಟುಹಣ ಕೊಟ್ಟರಷ್ಟೇ ಮೃತದೇಹ ಸಾಗಿಸುವುದಾಗಿ ಆತ ಹೇಳಿದ್ದಾನೆ. ಚಾಲಕನ ವರ್ತನೆಗೆ ಮೃತನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋವಿಶೀಲ್ಡ್ ದರ ಭಾರತದಲ್ಲೇ ದುಬಾರಿ!
ಚಾಲಕ ಹಾಗೂ ಮೃತನ ಸಂಬಂಧಿಕರ ನಡುವೆ ಮಾತಿನ ಚಕಮಕಿ ನಡೆಯುವಾಗ ಕೆಲ ಸಾರ್ವಜನಿಕರು ಮಧ್ಯಪ್ರವೇಶಿಸಿ ವಿಷಯ ತಿಳಿದುಕೊಂಡಿದ್ದಾರೆ. ಚಾಲಕ 15 ಸಾವಿರಕ್ಕಿಂತ ಕಡಿಮೆ ಮೊತ್ತಕ್ಕೆ ಮೃತದೇಹ ಸಾಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ. ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಚಾಲಕನಿಗೆ ಧರ್ಮದೇಟು ನೀಡಿದ್ದಾರೆ. ರಾಜ್ಯ ಸರ್ಕಾರ ಖಾಸಗಿ ಆ್ಯಂಬುಲೆನ್ಸ್‌ಗಳ ಸುಲಿಗೆಗೆ ಬ್ರೇಕ್ ಹಾಕಬೇಕು. ದುಬಾರಿ ಮೊತ್ತಕ್ಕೆ ಬೇಡಿಕೆ ಇರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.