ಚಿಕ್ಕಮಗಳೂರು(ಮೇ.14): ನಗರದ ಹೃದಯ ಭಾಗದಲ್ಲೇ ಇರುವ ಬಸವನಹಳ್ಳಿ ಮುಖ್ಯರಸ್ತೆಯಲ್ಲಿ ಸೂಟ್‌ಕೇಸ್‌ವೊಂದು ಪತ್ತೆಯಾಗಿ ಕೆಲಕಾಲ ಆತಂಕ ಮೂಡಿಸಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ಸದ್ಯ ಸೂಟ್‌ಕೇಸ್‌ ಅನ್ನು ಪೊಲೀಸರು ವಶಕ್ಕೆ ಪಡೆದು ನಗರದ ಡಿಎಆರ್‌ ಮೈದಾನದಲ್ಲಿ ಭದ್ರತೆಯಲ್ಲಿ ಇರಿಸಿ ತಪಾಸಣೆಗೆ ಸಿದ್ಧತೆ ಮಾಡಿಕೊಂಡಿದ್ದು, ಬಾಂಬ್‌ ನಿಷ್ಕ್ರಿಯ ದಳದ ಪರಿಣಿತರು ಬಂದ ಬಳಿಕ ತಪಾಸಣೆ ನಡೆಸಲಿದ್ದಾರೆ.

ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯೊಬ್ಬರು ಈ ಸೂಟ್‌ಕೇಸ್‌ ಅನ್ನು ಕೈಯಲ್ಲಿ ಹಿಡಿದು ತಂದು ಬಸವನಹಳ್ಳಿ ಮುಖ್ಯ ರಸ್ತೆಯ ಕೆನರಾ ಬ್ಯಾಂಕ್‌ ಎಟಿಎಂ ಎದುರಿನ ಮರದ ಅಡಿಯಲ್ಲಿ ಇಟ್ಟು ಕೆಲಕಾಲ ಅಲ್ಲೇ ನಿಂತಿದ್ದು, ಬಳಿಕ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯರೊಂದಿಗೆ ಸೇರಿ ಅಲ್ಲಿಂದ ತೆರಳಿದ್ದಾರೆ. ಈ ಎಲ್ಲ ದೃಶ್ಯಗಳು ಸಮೀಪದ ಲಾಡ್ಜ್‌ವೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

ಕೊರೋನಾ ಎಫೆಕ್ಟ್: ಗಿರಿಯ ನಾಡಿನಲ್ಲಿ ಕುಸಿದ ಪ್ರವಾಸೋದ್ಯಮ

ಬಾಂಬ್‌ನಿಷ್ಕ್ರೀಯ ದಳ, ಶ್ವಾನದಳದಿಂದ ಪರಿಶೀಲನೆ ನಡೆಸಿದ ವೇಳೆ ಮೇಲ್ನೋಟಕ್ಕೆ ಸೂಟ್‌ಕೇಸ್‌ನಲ್ಲಿ ಸಂಶಯಾಸ್ಪದವಾದದ್ದೇನೂ ಇರುವುದು ಕಂಡು ಬಂದಿಲ್ಲ. ಹೀಗಾಗಿ, ಸೂಟ್‌ಕೇಸ್‌ ಅನ್ನು ಡಿಎಆರ್‌ ಮೈದಾನದಲ್ಲಿ ಸುತ್ತ ಮರಳಿನ ಚೀಲಗಳನ್ನು ಮುಚ್ಚಿ ಇರಿಸಲಾಗಿದ್ದು, ಈ ಪ್ರದೇಶದಲ್ಲಿ ಯಾರೂ ಓಡಾಡದಂತೆ ಸೂಕ್ತ ಎಚ್ಚರಿಕೆಯನ್ನು ವಹಿಸಲಾಗಿದೆ. ಆದರೂ, ಮಂಗಳೂರಿನಿಂದ ಬಾಂಬ್‌ ಸ್ಕ್ವ್ಯಾಡ್‌ ಕರೆಸಿಕೊಳ್ಳಲಾಗುತ್ತಿದ್ದು, ಬೆಳಗ್ಗೆ ವೇಳೆಗೆ ತೆರೆದು ತಪಾಸಣೆ ನಡೆಸಲಾಗುವುದು ಎಂದು ಜಿಲ್ಲಾ ರಕ್ಷಣಾಧಿಕಾರಿ ಹರೀಶ್‌ ಪಾಂಡೆ ಅವರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

"